ಹೊಸಪೇಟೆ (ವಿಜಯನಗರ): ನಕಲಿ ದಾಖಲೆ ಸೃಷ್ಟಿಸಿ, ಜಮೀನು ಕಬಳಿಸಿ ಸರ್ಕಾರಕ್ಕೆ ವಂಚಿಸಿರುವ ದೂರಿನ ಮೇರೆಗೆ ಇಲ್ಲಿನ ಪಟ್ಟಣ ಪೊಲೀಸ್ ಠಾಣೆಯಲ್ಲಿ ಮಂಗಳವಾರ ಒಂದೇ ದಿನ ನಾಲ್ಕು ಪ್ರತ್ಯೇಕ ಘಟನೆಗಳಡಿ 17 ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ.
ಒಂದು ಪ್ರಕರಣದಲ್ಲಿ ಹೊಸಪೇಟೆ ನಗರಸಭೆ ಸಿಬ್ಬಂದಿ ಹಾಗೂ ಕಲ್ಲಹಳ್ಳಿ ಗ್ರಾಮ ಪಂಚಾಯಿತಿ ಅಧಿಕಾರಿ/ಸಿಬ್ಬಂದಿ ಎಂದಷ್ಟೇ ದೂರು ಕೊಡಲಾಗಿದೆ. ಯಾರ ಹೆಸರನ್ನೂ ಉಲ್ಲೇಖಿಸಿಲ್ಲ. ನಾಲ್ಕೂ ಪ್ರಕರಣಗಳಲ್ಲಿ ಅಧಿಕಾರಿಗಳೇ ಖುದ್ದು ಠಾಣೆಗೆ ದೂರು ಕೊಟ್ಟಿದ್ದಾರೆ.
ಸಂಕ್ಲಾಪುರ ಗ್ರಾಮದ ಸರ್ವೇ ನಂಬರ್ 148 ಸರ್ಕಾರಿ ಜಮೀನನ್ನು 1999ರಿಂದ 2022ರ ಅವಧಿಯಲ್ಲಿ ಹೊಸಪೇಟೆ ನಗರಸಭೆ, ತಾಲ್ಲೂಕಿನ ಕಲ್ಲಹಳ್ಳಿಗ್ರಾಮ ಪಂಚಾಯಿತಿ ಅಧಿಕಾರಿ/ಸಿಬ್ಬಂದಿ, ನಗರಸಭೆಯ ದಾಖಲೆಗಳಲ್ಲಿ 1ರಿಂದ 7 ಜನರ ಹೆಸರಿಗೆ ಅಕ್ರಮ ಖಾತೆಗಳನ್ನು ಸೃಷ್ಟಿಸಿರುವುದು ಕಂಡು ಬಂದಿದೆ. ಸದರಿ ಅಧಿಕಾರಿ/ಸಿಬ್ಬಂದಿ ವಿರುದ್ಧ ತನಿಖೆ ನಡೆಸಿ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ನಗರಸಭೆ ಪೌರಾಯುಕ್ತ ರಮೇಶ ಬಿ.ಎಸ್. ದೂರು ಕೊಟ್ಟಿದ್ದಾರೆ.
ಮತ್ತೊಂದು ಪ್ರಕರಣದಲ್ಲಿ ಪೌರಾಯುಕ್ತ ಬಿ.ಎಸ್. ರಮೇಶ್ ಅವರೇ ನಗರಸಭೆಯ ಕೇಸ್ ವರ್ಕರ್‌ಗಳಾದ ಎಸ್. ಸುರೇಶ್, ಮಂಜುನಾಥ ದಳ ವಾಯಿ, ಬಿಲ್ ಕಲೆಕ್ಟರ್ ಜಿ. ನೀಲಕಂಠ ಸ್ವಾಮಿ, ಕಂದಾಯ ಅಧಿಕಾರಿ ಎಸ್. ಅಜಿತ್ ಸಿಂಗ್, ಕಂದಾಯ ಇನ್‌ಸ್ಪೆಕ್ಟರ್ ನಾಗರಾಜ, ಪ್ರಭಾರ ಕರವಸೂಲಿಗಾರ ರಮೇಶ್, ನಿವೃತ್ತ ಅಧಿಕಾರಿ ಬಿ.ಸಿ. ಪೂಜಾರ್ ವಿರುದ್ಧ ಠಾಣೆಗೆ ದೂರು ನೀಡಿದ್ದಾರೆ. ಏಳು ಜನರು ಸೇರಿಕೊಂಡು ಮಲ್ಲಿಕಾರ್ಜುನ, ಡಿ. ವೇಣುಗೋಪಾಲ್, ಜೇಟ್ ರಾಮ್ ಎಂಬುವರ ಹೆಸರಿಗೆ ಹೊಸಪೇಟೆಯ ಸರ್ವೇ ನಂಬರ್ 302/ಬಿ2 0.82 ಸೇಂಟ್ಸ್ ಸರ್ಕಾರಿ ಜಮೀನು ಮಾಡಿಕೊಡಲು ನಗರಸಭೆಯಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಕೊಟ್ಟು ಸರ್ಕಾರಕ್ಕೆ ಮೋಸ ಮಾಡಿದ್ದು ಕಾನೂನು ಕ್ರಮ ಜರುಗಿಸಬೇಕೆಂದು ಕೋರಿದ್ದಾರೆ.
ಇನ್ನೊಂದು ಪ್ರಕರಣದಲ್ಲಿ ತಾಲ್ಲೂಕು ಕಚೇರಿಯ ಪ್ರಭಾರ ಕಂದಾಯ ಇನ್ ಸ್ಪೆಕ್ಟರ್ ಗುರುಬಸವರಾಜ ಅವರು ಟಿ. ಸೋಮಪ್ಪ ಮಲಿಯಪ್ಪ, ಕೆ. ಗಂಗಾಧರ ಯಲ್ಲಪ್ಪ, ಬೆಳಗೋಡ ಅಂಬಣ್ಣ, ಗಣೇಶ ಯಮುನಪ್ಪ, ತಾಯಪ್ಪ ದೊಡ್ಡ ಮಲಿಯಪ್ಪ, ಡಿ. ಪಾರ್ವತಮ್ಮ ಡಿ. ಹನುಮಂತಪ್ಪ, ಗೋವಿಂದಮ್ಮ ಹನುಮಂತಪ್ಪ ವಿರುದ್ಧ ದೂರು ಕೊಟ್ಟಿದ್ದಾರೆ.
ಏಳು ಜನರು ಹೊಸಪೇಟೆ ತಾಲ್ಲೂಕಿನ ಸಂಕ್ಲಾಪುರ ಗ್ರಾಮದ ಸರ್ವೇ ನಂಬರ್ 148ರಲ್ಲಿ 2.17 ಎಕರೆ ಸರ್ಕಾರಿ ಜಮೀನನ್ನು 1999ರಿಂದ 2022ರವರೆಗಿನ ಅವಧಿಯಲ್ಲಿ ನಕಲಿ ಖಾತೆ ಸೃಷ್ಟಿಸಿ ಸರ್ಕಾರಿ ಜಮೀನು ಕಬಳಿಸಿ ಸ್ವಂತ ಲಾಭಕ್ಕಾಗಿ ಸ್ವಾಧೀನ ಪಡಿಸಿಕೊಂಡಿದ್ದಾರೆ ಎಂದು ದೂರು ನೀಡಿದ್ದಾರೆ.
ನಾಲ್ಕನೇ ಪ್ರಕರಣದಲ್ಲಿ ತಾಲ್ಲೂಕು ಕಚೇರಿಯ ಪ್ರಭಾರ ಕಂದಾಯ ಇನ್‌ಸ್ಪೆಕ್ಟರ್ ಗುರುಬಸವರಾಜ ಸಿ. ಕೊಟ್ರಗೌಡ ಅವರು ಮಲ್ಲಿಕಾರ್ಜುನ ಜೆ. ಸುಡುಗಾಡೆಪ್ಪ, ಡಿ. ವೇಣುಗೋಪಾಲ ಡಿ. ಹನುಮಂತಪ್ಪ, ಜೇಟ್ ರಾಮ್ ವಿರುದ್ಧ ದೂರು ಕೊಟ್ಟಿದ್ದಾರೆ. ಹೊಸಪೇಟೆ ಸರ್ವೇ ನಂಬರ್ 302/ಬಿ2 0.82 ಸೇಂಟ್ಸ್ ಸರ್ಕಾರಿ ಜಮೀನಿಗೆ ಸಂಬಂಧಿಸಿ ನಕಲಿ ದಾಖಲೆ ಸೃಷ್ಟಿಸಿ ಸ್ವಾಧೀನಪಡಿಸಿಕೊಂಡಿದ್ದಾರೆ ಎಂದು ದೂರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.