ಹಗರಿಬೊಮ್ಮನಹಳ್ಳಿ (ವಿಜಯನಗರ ಜಿಲ್ಲೆ): ನಾಲ್ಕೈದು ವರ್ಷಗಳಿಂದ ಉತ್ತಮ ಬೆಲೆ ಸಿಗದೆ ಬಸವಳಿದಿದ್ದ ತಾಲ್ಲೂಕಿನ ದಾಳಿಂಬೆ ಬೆಳೆಗಾರರು ಈ ವರ್ಷ ಕೆ.ಜಿ.ಗೆ ₹160ರವರೆಗೂ ದೊರೆತ ಬೆಲೆಯಿಂದಾಗಿ ಸಂತಸಗೊಂಡಿದ್ದಾರೆ.
ತಾಲ್ಲೂಕಿನ ಗದ್ದಿಕೇರಿ, ಜಿ.ಕೋಡಿಹಳ್ಳಿ, ಏಣಿಗಿ, ಏಣಿಗಿ ಬಸಾಪುರ, ಅಂಕಸಮುದ್ರ, ಬಾಚಿಗೊಂಡನಹಳ್ಳಿ ಸೇರಿದಂತೆ ಹಲವು ಗ್ರಾಮಗಳಲ್ಲಿ 2,650 ಹೆಕ್ಟೇರ್ ಪ್ರದೇಶದಲ್ಲಿ ‘ಬಗವಾ’ ತಳಿಯ ದಾಳಿಂಬೆ ಬೆಳೆಯಲಾಗಿದೆ. ದೇಶದ ವಿವಿಧ ನಗರಗಳಿಗೆ 8,300 ಟನ್ ದಾಳಿಂಬೆ ಇದುವರೆಗೆ ರವಾನೆಯಾಗಿದೆ. ಸಾಮಾನ್ಯ ದಾಳಿಂಬೆಗೂ ರೈತರು ಪ್ರತಿ ಕೆ.ಜಿ.ಗೆ ಕನಿಷ್ಠ ₹ 80 ಪಡೆದಿದ್ದಾರೆ.
ಕೋವಿಡ್‌ಗಿಂತ ಮೊದಲು ಬೆಳೆಗಾರರಿಗೆ ಕೆ.ಜಿ.ದಾಳಿಂಬೆಗೆ ₹230 ಸಿಕ್ಕಿತ್ತು. ಅದು ಈ ಭಾಗದಲ್ಲಿ ರೈತರು ಪಡೆದ ಗರಿಷ್ಠ ದರವಾಗಿತ್ತು. ಕೋವಿಡ್ ನಂತರ ಇದೀಗ ದಾಳಿಂಬೆಗೆ ಉತ್ತಮ ದರ ಸಿಗುತ್ತಿದೆ.
‘ಇಲ್ಲಿನ ದಾಳಿಂಬೆಗೆ ಬೆಂಗಳೂರು, ಕೋಲ್ಕತ್ತ, ಚೆನ್ನೈ, ಮುಂಬೈ ಮಾರುಕಟ್ಟೆಗಳಲ್ಲಿ ಭಾರಿ ಬೇಡಿಕೆ ಇದೆ’ ಎನ್ನುತ್ತಾರೆ ಗದ್ದಿಕೇರಿಯ ದಾಳಿಂಬೆ ಖರೀದಿದಾರ ಸಿ.ರಮೇಶ್.
ರೈತರು ಪ್ರತಿ ಎಕರೆಯಲ್ಲಿ 300ರಿಂದ 350 ಗಿಡಗಳನ್ನು ನಾಟಿ ಮಾಡಿದ್ದಾರೆ. ಕಟಾವಿನ ಸಂದರ್ಭದಲ್ಲಿ ಎಲ್ಲ ಗಿಡಗಳಿಗೂ ಬಟ್ಟೆಯ ಹೊದಿಕೆ ಹಾಗೂ ಹಸಿರು ಚಪ್ಪರ ಹಾಕಿ ಬೇಸಿಗೆಯಲ್ಲಿ ಸೂರ್ಯನ ಶಾಖದಿಂದ ಹಣ್ಣು ಅಂದಗೆಡುವುದನ್ನು ತಪ್ಪಿಸಿದ್ದಾರೆ. ಉತ್ಪನ್ನದ ಗಾತ್ರದ ಜತೆಗೆ ಬಣ್ಣಕ್ಕೂ ಆದ್ಯತೆ ನೀಡಿದ್ದಾರೆ. ಮಾರುಕಟ್ಟೆಯಲ್ಲಿ ಗಾತ್ರ ಮತ್ತು ಕೆಂಪು ವರ್ಣದ ದಾಳಿಂಬೆಗೆ ಅತ್ಯುತ್ತಮ ಬೆಲೆ ದೊರೆಯುತ್ತದೆ.
ಈ ಬಾರಿ ದುಂಡಾಣು ಮಚ್ಚೆರೋಗ ಅಷ್ಟಾಗಿ ಕಾಣಿಸದಿರುವುದರಿಂದ ರೈತರ ಮತ್ತಷ್ಟು ಖುಷಿಪಡುವಂತಾಗಿದೆ.
ಈ ವರ್ಷ ದಾಳಿಂಬೆ ಕೈ ಹಿಡಿದಿದೆ ಉತ್ತಮ ಬೆಲೆ ಮತ್ತು ಇಳುವರಿ ಬಂದಿದೆ. ಸಾಲದಿಂದ ಪಾರಾಗಲು ಸಾಧ್ಯವಾಗಿದೆ–ಸುರೇಶ್ ದಾಳಿಂಬೆ ಬೆಳೆಗಾರ ಗದ್ದಿಕೇರಿ.
ದಾಳಿಂಬೆ ಕಟಾವು ಸಂದರ್ಭದಲ್ಲಿ ನೂರಾರು ಜನರಿಗೆ ಉದ್ಯೋಗ ದೊರಕುತ್ತದೆ. ತಾಲ್ಲೂಕಿನ ಹಂಪಾಪಟ್ಟಣ, ಅಡವಿ ಆನಂದೇವನಹಳ್ಳಿ, ಅಂಕಸಮುದ್ರ ಸೇರಿದಂತೆ ಹಲವು ಗ್ರಾಮಗಳಿಂದ ಯುವಕರು ತಂಡೋಪತಂಡವಾಗಿ ಹೋಗುತ್ತಿದ್ದಾರೆ. ಉತ್ತಮ ಕೂಲಿ ಪಡೆಯುತ್ತಿದ್ದಾರೆ. ಖರೀದಿದಾರರು ತೋಟಕ್ಕೆ ಬಂದು ದಾಳಿಂಬೆ ತೆಗೆದುಕೊಂಡು ಹೋಗುತ್ತಿರುವುದರಿಂದ ರೈತರು ಸಾಗಣೆಯ ಕಿರಿಕಿರಿಯಿಂದಲೂ ಪಾರಾಗಿದ್ದಾರೆ.
ಬಗವಾ ತಳಿಯ ಗಾತ್ರ ಮತ್ತು ಕೆಂಪು ಬಣ್ಣ ಉತ್ತಮ ಬೆಲೆ ತಂದುಕೊಡುತ್ತಿದೆ. ಉತ್ತಮ ನಿರ್ವಹಣೆಯಿಂದ ಹೆಚ್ಚು ಲಾಭ ನಿಶ್ಚಿತ.–ನಾಗರಾಜ ಸಹಾಯಕ ತೋಟಗಾರಿಕೆ ನಿರ್ದೇಶಕ ಹಗರಿಬೊಮ್ಮನಹಳ್ಳಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.