ADVERTISEMENT

ಹೊಸಪೇಟೆ : ಕಾಲುವೆ ನೀರಿಗೆ ತಡೆ ಒಡ್ಡಿದ ವಿದ್ಯುತ್‌ ಕಂಬ

​ಪ್ರಜಾವಾಣಿ ವಾರ್ತೆ
Published 15 ಜೂನ್ 2023, 15:51 IST
Last Updated 15 ಜೂನ್ 2023, 15:51 IST
ಹೊಸಪೇಟೆ ರೈಲು ನಿಲ್ದಾಣದಲ್ಲಿ ಕಾಲುವೆಯಲ್ಲಿ ವಿದ್ಯುತ್‌ ಕಂಬ ಹಾಕಿದ್ದರಿಂದ ರೈತರಿಗೆ ಆಗಿರುವ ಸಂಕಷ್ಟ ಪರಿಹರಿಸುವಂತೆ ಆಗ್ರಹಿಸಿ ಗುರುವಾರ ವಿಭಾಗೀಯ ಎಂಜಿನಿಯರ್ ಕಚೇರಿ ಸಿಬ್ಬಂದಿ ರಾಹುಲ್ ಅವರಿಗೆ ಮನವಿ ಸಲ್ಲಿಸಲಾಯಿತು
ಹೊಸಪೇಟೆ ರೈಲು ನಿಲ್ದಾಣದಲ್ಲಿ ಕಾಲುವೆಯಲ್ಲಿ ವಿದ್ಯುತ್‌ ಕಂಬ ಹಾಕಿದ್ದರಿಂದ ರೈತರಿಗೆ ಆಗಿರುವ ಸಂಕಷ್ಟ ಪರಿಹರಿಸುವಂತೆ ಆಗ್ರಹಿಸಿ ಗುರುವಾರ ವಿಭಾಗೀಯ ಎಂಜಿನಿಯರ್ ಕಚೇರಿ ಸಿಬ್ಬಂದಿ ರಾಹುಲ್ ಅವರಿಗೆ ಮನವಿ ಸಲ್ಲಿಸಲಾಯಿತು   

ಹೊಸಪೇಟೆ (ವಿಜಯನಗರ): ರೈಲು ನಿಲ್ದಾಣದ ಮೂಲಕ ಹಾದು ಹೋಗುವ ವಿಜಯನಗರ ಕಾಲದ ರಾಜರು ನಿರ್ಮಿಸಿದ ರಾಯಕಾಲುವೆಯ ಮೇಲೆ ವಿದ್ಯುತ್‌ ಕಂಬ ನಿರ್ಮಿಸಿ, ನೀರು ಹರಿಯದಂತಾಗಿದ್ದು, ತಕ್ಷಣ ಈ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಆಗ್ರಹಿಸಿ ಗುರುವಾರ ಹುಬ್ಬಳ್ಳಿಯ ವಿಭಾಗೀಯ ರೈಲ್ವೆ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಲಾಯಿತು.

ವಿಜಯನಗರ ರೈಲ್ವೆ ಹೋರಾಟ ಕ್ರಿಯಾ ಸಮಿತಿಯ ನೇತೃತ್ವದಲ್ಲಿ ನಂ.88 ಮುದ್ಲಾಪುರ ಮಾಗಾಣಿ ವ್ಯಾಪ್ತಿಯ ರೈತರು ರೈಲು ನಿಲ್ದಾಣದ ಹಿರಿಯ ವಿಭಾಗೀಯ ಎಂಜಿನಿಯರ್ ಕಚೇರಿ ಸಿಬ್ಬಂದಿ ರಾಹುಲ್ ಅವರ ಮೂಲಕ ಮನವಿ ಕಳುಹಿಸಿಕೊಡಲಾಯಿತು.

‘ರಾಯಕಾಲುವೆಯಿಂದ ಅನೇಕ ಮಡಿಗಳು ರೈಲ್ವೆ ನಿಲ್ದಾಣದ ಹಳಿಗಳ ಕೆಳಭಾಗದಲ್ಲಿ ಹರಿಯುತ್ತವೆ. ಮಡಿ ಸಂಖ್ಯೆ 32ರಲ್ಲಿ ಹರಿಯುವ ನೀರಿಗೆ ಅಡ್ಡಲಾಗಿ ರೈಲು ನಿಲ್ದಾಣದ ಪ್ಲಾಟ್‌ಫಾರಂ 1ರಲ್ಲಿ ವಿದ್ಯುದೀಕರಣ ಕಂಬ ನಿರ್ಮಿಸಲಾಗಿದೆ. ಇದರಿಂದ ಕಳೆದ ಆರು ತಿಂಗಳಿಂದ ಮಡಿಯ ನೀರು ಮುಂದಕ್ಕೆ ಹರಿಯದೆ ನೂರಾರು ಎಕರೆ ಕೃಷಿ ಜಮೀನಿಗೆ ನೀರಿಲ್ಲದಂತಾಗಿದೆ. ರೈತರಿಗೆ ಲಕ್ಷಾಂತರ ನಷ್ಟವಾಗಿದೆ’ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ADVERTISEMENT

ರೈಲ್ವೆ ಇಲಾಖೆಯವರು ಕೂಡಲೇ ಪರ್ಯಾಯ ಮಡಿ ನಿರ್ಮಾಣ ಮಾಡಿ, ಕಾಲುವೆ ನೀರು ಸರಾಗವಾಗಿ ಹರಿದುಹೋಗುವಂತೆ ಮಾಡಬೇಕು ಎಂದು ಒತ್ತಾಯಿಸಲಾಗಿದೆ.

ರೈಲ್ವೆ ಹೋರಾಟ ಕ್ರಿಯಾ ಸಮಿತಿಯ ವೈ.ಯಮುನೇಶ್‌, ಕೆ.ಮಹೇಶ್‌, ರೈತರಾದ ಮರಡಿ ಗಂಗಾಧರ, ಗುಜ್ಜಲ ಪಂಪಣ್ಣ, ತಳಕಲ್‌ ವೆಂಕಪ್ಪ, ವಡಿಗೇರಿ ಶಂಕ್ರಪ್ಪ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.