ADVERTISEMENT

ಬಾಳೆತೋಟ ನಾಶ: ಪರಿಹಾರಕ್ಕೆ ಆಗ್ರಹಿಸಿ ರೈತರಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 20 ಮೇ 2024, 7:56 IST
Last Updated 20 ಮೇ 2024, 7:56 IST
   

ಹೊಸಪೇಟೆ (ವಿಜಯನಗರ): ತಾಲ್ಲೂಕಿನಲ್ಲಿ ಈಚೆಗೆ ಬಲವಾಗಿ ಬೀಸಿದ ಗಾಳಿಯಿಂದಾಗಿ 2,500 ಹೆಕ್ಟೇರ್‌ಗೂ ಅಧಿಕ ಬಾಳೆ ತೋಟ ನಾಶವಾಗಿದ್ದು, ಸರ್ಕಾರ ತಕ್ಷಣ ನಷ್ಟ ಪರಿಹಾರ ರೂಪದಲ್ಲಿ ಎಕರೆಗೆ ₹ 50 ಸಾವಿರ ನೀಡಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತರ ಸಂಘ ಮತ್ತು ಹಸಿರು ಸೇನೆ (ಜೆ.ಕಾರ್ತಿಕ್‌ ಬಣ) ಸೋಮವಾರ ಇಲ್ಲಿ ಪ್ರತಿಭಟನೆ ನಡೆಸಿತು.

ನಗರದ ಹೂವಿನ ಮಾರುಕಟ್ಟೆಯ ಮಹಾತ್ಮ ಗಾಂಧಿ ಪ್ರತಿಮೆ ಬಳಿಯಿಂದ ಮೆರವಣಿಗೆ ನಡೆಸಿದ ರೈತರು, ತಹಶೀಲ್ದಾರ್ ಕಚೇರಿಗೆ ಬಂದು ಪ್ರತಿಭಟನಾ ಪ್ರದರ್ಶನ ನಡೆಸಿದರು. ಪರಿಹಾರ ನೀಡದಿದ್ದರೆ ರಾಷ್ಟ್ರೀಕೃತ ಬ್ಯಾಂಕ್‌ಗಳು ಮತ್ತು ಸೇವಾ ಸಹಕಾರ ಸಂಘಗಳಿಂದ ಪಡೆದ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕು ಎಂದು ಒತ್ತಾಯಿಸಿದರು.

ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಜೆ.ಎನ್‌.ಕಾಳಿದಾಸ್ ಮಾತನಾಡಿ, ‘ಬಾಳೆ ಬೆಳೆಯಲು ಎಕರೆಗೆ ₹1.50 ಲಕ್ಷ ವೆಚ್ಚ ತಗಲುತ್ತದೆ. ಸರ್ಕಾರ ನೀಡುವ ಪರಿಹಾರ ಹೆಕ್ಟೇರ್‌ಗೆ 25 ಸಾವಿರ. ಈ ಪರಿಹಾರ ಪಡೆದುಕೊಂಡು ಇನ್ನೊಂದು ವರ್ಷದ ಬೆಳೆ ಬೆಳೆಯಲು ಸಾಧ್ಯವಿಲ್ಲ. ಬಾಳೆ, ಕಬ್ಬು ಎಂಬುದು ವಾರ್ಷಿಕ ಬೆಳೆಯಾಗಿದ್ದು, ಮತ್ತೆ ತೋಟ ಬೆಳೆಸಲು ಒಂದು ವರ್ಷ ಕಾಯಬೇಕು. ಹೀಗಾಗಿ ಸರ್ಕಾರ ಬಾಳೆ ಕೃಷಿಗೆ ವಿಶೇಷ ಪ್ಯಾಕೇಜ್‌ ಘೋಷಿಸಿ ರೈತರ ರಕ್ಷಣೆಗೆ ಬರಬೇಕು’ ಎಂದರು.

ADVERTISEMENT

‘ಹೊಸಪೇಟೆ ತಾಲ್ಲೂಕಿನಲ್ಲಿ ಬಾಳೆ ಕೃಷಿಯಲ್ಲಿ ಸಣ್ಣ ಹಿಡುವಳಿದಾರರೇ ಅಧಿಕ ಮಂದಿ ಇದ್ದಾರೆ. ಶೇ 30ರಷ್ಟು ನಾಶವಾಗದ ಬಾಳೆತೋಟಕ್ಕೆ ಪರಿಹಾರ ಇಲ್ಲ ಎಂಬ ನಿಯಮವನ್ನು ಸರ್ಕಾರ ರೂಪಿಸಿಕೊಂಡಿದೆ. ಇದರಿಂದ ಅದೆಷ್ಟೋ ಬಾಳೆ ಕೃಷಿಕರಿಗೆ ಸರ್ಕಾರದಿಂದ ಪರಿಹಾರ ಸಿಗದ ಸ್ಥಿತಿ ಇದೆ. ಸ್ಥಳೀಯ ಶಾಸಕರು, ತಹಶೀಲ್ದಾರರರು ಬಾಳೆತೋಟ ನಾಶವಾಗಿರುವುದನ್ನು ಕಂಡಿದ್ದಾರೆ. ಸರ್ಕಾರ ತಕ್ಷಣ ಕೃಷಿಕರಿಗೆ ಆಗಿರುವ ನಷ್ಟದ ಅಗಾಧತೆಯನ್ನು ಪರಿಗಣಿಸಿ ಪರಿಹಾರ ಮೊತ್ತವನ್ನು ಹೆಚ್ಚಿಸಬೇಕು’ ಎಂದು ಅವರು ಆಗ್ರಹಿಸಿದರು.

ಬರಗಾಲ ಪರಿಹಾರ ರೂಪದಲ್ಲಿ ಸರ್ಕಾರ ಮೂರು ಹಂತದಲ್ಲಿ ತಲಾ ₹10 ಸಾವಿರದಂತೆ ಪರಿಹಾರ ನೀಡಬೇಕು, ಕೃಷಿ ಕಾಯ್ದೆ ವಾಪಸ್ ಪಡೆಯಬೇಕು, ಸ್ವಾಮಿನಾಥನ್ ವರದಿಯಂತೆ ಕನಿಷ್ಠ ಬೆಂಬಲ ಬೆಲೆ ಜಾರಿಗೆ ತರಬೇಕು ಎಂಬ ಹಕ್ಕೊತ್ತಾಯವನ್ನೂ ಮಾಡಲಾಯಿತು.

ತಹಶೀಲ್ದಾರ್ ಶೃತಿ ಎಂ.ಎಂ.ಅವರ ಮೂಲಕ ಮುಖ್ಯಮಂತ್ರಿ ಅವರಿಗೆ ಮನವಿ ಕಳುಹಿಸಿಕೊಡಲಾಯಿತು.

ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಎಚ್‌.ಜಿ.ಮಲ್ಲಿಕಾರ್ಜುನ, ಉಪಾಧ್ಯಕ್ಷ ಎಲ್‌.ಎಸ್.ರುದ್ರಪ್ಪ, ಜಿಲ್ಲಾ ಉಪಾಧ್ಯಕ್ಷರಾದ ಹೇಮರೆಡ್ಡಿ, ಜೆ.ನಾಗರಾಜ್‌, ರೈತ ಮುಖಂಡರಾದ ಅಯ್ಯಮ್ಮ, ಎಂ.ಲಕ್ಷ್ಮಿ, ಶಶಿಕಲಾ ಇತರರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.