ಹೊಸಪೇಟೆ (ವಿಜಯನಗರ): ಕಬ್ಬು ಬೆಳೆಗಾರರಿಗೆ ಶೇ 9.50 ಸಕ್ಕರೆ ಇಳುವರಿ ಆಧಾರದಲ್ಲಿ ಟನ್ ಕಬ್ಬಿಗೆ ₹5,500 ಬೆಂಬಲ ಬೆಲೆ ನಿಗದಿಪಡಿಸಬೇಕು, ತೂಕದಲ್ಲಿ ಆಗುತ್ತಿರುವ ಮೋಸ ತಡೆಗಟ್ಟಬೇಕು ಮೊದಲಾದ ಬೇಡಿಕೆ ಈಡೇರಿಸಲು ಆಗ್ರಹಿಸಿ ಡಿ.12ರಂದು ಬೆಳಗಾವಿಯ ಸುವರ್ಣ ವಿಧಾನಸೌಧ ಚಲೋ ನಡೆಸಲು ಕರ್ನಾಟಕ ಕಬ್ಬು ಬೆಳೆಗಾರರ ಸಂಘ ನಿರ್ಧರಿಸಿದೆ.
ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಲ್.ಎನ್.ಭರತ್‌ರಾಜ್ ಗುರುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಕೃಷಿ ಬೆಲೆ ಆಯೋಗದ ಪ್ರಕಾರ ಒಂದು ಟನ್ ಕಬ್ಬು ಬೆಳೆಯಲು ₹3,580 ಖರ್ಚು ಬರುತ್ತದೆ, ಕೃಷಿ ತಜ್ಞರಾದ ಡಾ. ಸ್ವಾಮಿನಾಥನ್ ಆಯೋಗದ ವರದಿ ಪ್ರಕಾರ ಉತ್ಪಾದನಾ ವೆಚ್ಚದ ಜೊತೆಗೆ ಶೇ 50ರಷ್ಟು ಲಾಭಾಂಶ ಸೇರಿಸಿದರೆ ಒಂದು ಟನ್ ಕಬ್ಬಿಗೆ ₹5,370 ಆಗುತ್ತದೆ. ಹೀಗಾಗಿ ಟನ್ ಕಬ್ಬಿಗೆ ₹5,500 ಬೆಂಬಲ ಬೆಲೆ ನಿಗದಿಪಡಿಸಬೇಕು’ ಎಂದರು.
ಉತ್ತಮ ಆದಾಯ: ಒಂದು ಟನ್ ಕಬ್ಬಿಗೆ ಉಪ ಉತ್ಪನ್ನಗಳು ಸೇರಿದಂತೆ ₹12 ಸಾವಿರದಿಂದ ₹13 ಸಾವಿರ ಆದಾಯ ಬರುತ್ತದೆ. ಕಾಕಂಬಿ, ಎಥೆನಾಲ್, ವಿದ್ಯುತ್ ಉತ್ಪಾದನೆ, ಡಿಸ್ಟಿಲರಿ, ಗೊಬ್ಬರ ಉತ್ಪನ್ನಗಳಿಂದ ಈ ಲಾಭ ಇದೆ. ಹೀಗಾಗಿ ಉಪ ಉತ್ಪನ್ನಗಳ ಲಾಭಾಂಶದಲ್ಲೂ ಶೇ 50ರಷ್ಟು ಪಾಲನ್ನು ರೈತರಿಗೆ ನೀಡಬೇಕಾಗುತ್ತದೆ’ ಎಂದು ಭರತ್‌ರಾಜ್ ಪ್ರತಿಪಾದಿಸಿದರು.
‘ಸಹಕಾರಿ ಸಕ್ಕರೆ ಕಾರ್ಖಾನೆಗಳನ್ನು ಅಗ್ಗದ ಬೆಲೆಗೆ ಮಾರಾಟ ಮಾಡುವುದು, 30–40 ವರ್ಷಗಳಿಗೆ ಗುತ್ತಿಗೆ ನೀಡುವುದನ್ನು ನಿಲ್ಲಿಸಬೇಕು, ಅವುಗಳ ಅಭಿವೃದ್ಧಿಗೆ ಕೇಂದ್ರ ಸರ್ಕಾರದ ಸಕ್ಕರೆ ಅಭಿವೃದ್ಧಿ ಮಂಡಳಿಯಿಂದ ಬಡ್ಡಿ ರಹಿತ ಸಾಲ ನೀಡಬೇಕು, ಕಟಾವು ಮತ್ತು ಸಾಗಾಣಿಕೆ ವೆಚ್ಚವನ್ನು ಸಕ್ಕರೆ ನಿಯಂತ್ರಣ ಮಂಡಳಿಯಲ್ಲಿ ನಮೂದಿಸಿರುವ ಮಾನದಂಡದಂತೆಯೇ ಮಾಡಬೇಕು. ಹೆಚ್ಚುವರಿ ಕಟಾವು ಮಾಡುವುದರ ವಿರುದ್ಧ ಕರ್ನಾಟಕ ಕಬ್ಬು ಬೆಳೆಗಾರ ಸಂಘ ಹೋರಾಟ ನಡೆಸಿ ಹೆಚ್ಚುವರಿ ಹಣ ವಾಪಸ್ ರೈತರಿಗೆ ಕೊಡಿಸಲು ಯತ್ನಿಸುತ್ತಿದೆ. ಇದಕ್ಕೆ ರೈತರ ದೃಢ ಹೋರಾಟ ಅಗತ್ಯ ಇದೆ. ಇದಕ್ಕಾಗಿಯೇ ರೈತರ ಸಂಕಷ್ಟಗಳ ಕುರಿತು ಸರ್ಕಾರದ ಗಮನ ಸೆಳೆಯಲು ಸುವರ್ಣ ವಿಧಾನಸೌಧ ಚಲೋ ನಡೆಯುತ್ತಿದೆ’ ಎಂದು ಹೇಳಿದರು.
ಕರ್ನಾಟಕ ಪ್ರಾಂತ ರೈತ ಸಂಘದ ಮುಖಂಡರಾದ ಎನ್.ಯಲ್ಲಾಲಿಂಗ. ಕೊಟ್ಟಿಗೆ ಮಲ್ಲಿಕಾರ್ಜುನ, ಬಾಣದ ನಾಗರಾಜ, ಮುದುಕಪ್ಪ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.