ADVERTISEMENT

ಹಂಪಿ ಕನ್ನಡ ವಿಶ್ವವಿದ್ಯಾಲಯ | 5 ವರ್ಷ ಮುಚ್ಚಿಡಲಾಗಿತ್ತು ₹90 ಲಕ್ಷದ ಲೆಕ್ಕ

ಹಣಕಾಸಿನ ಬಿಕ್ಕಟ್ಟು ಎದುರಿಸುತ್ತಿರುವ ಹಂಪಿ ಕನ್ನಡ ವಿವಿ: ನಿರ್ವಹಣೆಯ ಮತ್ತೊಂದು ಲೋಪ ಬಹಿರಂಗ

ಎಂ.ಜಿ.ಬಾಲಕೃಷ್ಣ
Published 22 ಅಕ್ಟೋಬರ್ 2024, 5:56 IST
Last Updated 22 ಅಕ್ಟೋಬರ್ 2024, 5:56 IST
ಹಂಪಿ ಕನ್ನಡ ವಿಶ್ವವಿದ್ಯಾಲಯ ಕ್ಯಾಂಪಸ್ ನಲ್ಲಿ ಅತಿಥಿಗೃಹ ಕಟ್ಟಡಕ್ಕೆ ತಳಪಾಯ ಹಾಕಿ ಐದು ವರ್ಷಗಳಿಂದ ಹಾಗೆಯೇ ಬಿಟ್ಟಿರುವುದು -ಪ್ರಜಾವಾಣಿ ಚಿತ್ರ
ಹಂಪಿ ಕನ್ನಡ ವಿಶ್ವವಿದ್ಯಾಲಯ ಕ್ಯಾಂಪಸ್ ನಲ್ಲಿ ಅತಿಥಿಗೃಹ ಕಟ್ಟಡಕ್ಕೆ ತಳಪಾಯ ಹಾಕಿ ಐದು ವರ್ಷಗಳಿಂದ ಹಾಗೆಯೇ ಬಿಟ್ಟಿರುವುದು -ಪ್ರಜಾವಾಣಿ ಚಿತ್ರ   

ಹೊಸಪೇಟೆ (ವಿಜಯನಗರ): ಹಣಕಾಸಿನ ಬಿಕ್ಕಟ್ಟನ್ನು ಎದುರಿಸುತ್ತಿರುವ ಹಂಪಿ ಕನ್ನಡ ವಿಶ್ವವಿದ್ಯಾಲಯದ ಹಣಕಾಸು ನಿರ್ವಹಣೆಯಲ್ಲಿನ ಮತ್ತೊಂದು ಲೋಪ ಬಹಿರಂಗವಾಗಿದ್ದು, ಕಾಮಗಾರಿಗಾಗಿ ಮುಂಗಡ ಹಣ ನೀಡಿ, ಅತ್ತ ಕಾಮಗಾರಿಗೂ ಕೈಗೂಡದೆ, ಇತ್ತ ₹90 ಲಕ್ಷ ದುಡ್ಡೂ ವಾಪಸ್ ಬಾರದೆ ಚಡಪಡಿಸುತ್ತಿದೆ.

ಅತಿಥಿಗೃಹ ಕಟ್ಟಡ ನಿರ್ಮಾಣಕ್ಕೆ ಕರ್ನಾಟಕ ಗ್ರಾಮೀಣ ಮೂಲಸೌಲಭ್ಯ ಅಭಿವೃದ್ಧಿ ನಿಗಮಕ್ಕೆ (ಕೆಆರ್‌ಐಡಿಲ್‌) ಮುಂಗಡವಾಗಿ ನೀಡಿದ ₹89.19 ಲಕ್ಷದ ಪೈಕಿ ₹72.64 ಲಕ್ಷ ಹಾಗೂ ಸಂಗೀತ ವಿಭಾಗದ ವಿಸ್ತರಣಾ ಕಟ್ಟಡ ನಿರ್ಮಾಣಕ್ಕೆ ಮುಂಗಡವಾಗಿ ನೀಡಲಾಗಿದ್ದ ₹77.75 ಲಕ್ಷದಲ್ಲಿ ₹17.82 ಲಕ್ಷ ಸೇರಿ ಒಟ್ಟು ₹90.46 ಲಕ್ಷ ವಿಶ್ವವಿದ್ಯಾಲಯಕ್ಕೆ ವಾಪಸ್ ನೀಡಬೇಕು, ಇಲ್ಲವೇ ಆ ಮೊತ್ತದ ಕಾಮಗಾರಿ ನಡೆಸಬೇಕು. ಆದರೆ ಅದೆರಡೂ ಆಗಿಲ್ಲದಿರುವುದರ ಕುರಿತ ದಾಖಲೆ ‘ಪ್ರಜಾವಾಣಿ’ಗೆ ಲಭ್ಯವಾಗಿದೆ.

ಅತಿಥಿಗೃಹ ಕಟ್ಟಡ ನಿರ್ಮಾಣಕ್ಕಾಗಿ ಕೆಆರ್‌ಐಡಿಲ್‌ಗೆ 2018ರ ಸೆಪ್ಟೆಂಬರ್ 14ರಂದು ₹89.19 ಲಕ್ಷ ಮುಂಗಡ ಪಾವತಿಸಲಾಗಿತ್ತು. ನಿಗಮ ಅಡಿಪಾಯ ಹಾಕುವಷ್ಟರಲ್ಲಿ ಅಂದಿನ ಕುಲಪತಿ ಪ್ರೊ.ಸ.ಚಿ.ರಮೇಶ್‌ ಅವರ ಸೂಚನೆಯಂತೆ ಕಾಮಗಾರಿ ಸ್ಥಗಿತಗೊಳಿಸಲಾಗಿತ್ತು. ನಿಗಮದ ಬಳಿ ಆಗ ₹72.64 ಲಕ್ಷ ಹಣ ಇತ್ತು. ಈ ವಿಷಯವನ್ನು ಐದು ವರ್ಷಗಳ ವರೆಗೆ ಮುಚ್ಚಿಟ್ಟ ಕಾರ್ಯನಿರ್ವಾಹಕ ಎಂಜಿನಿಯರ್‌ ಜೆ.ಎಸ್.ನಂಜಯ್ಯನವರ, ತಾವು ನಿವೃತ್ತಿಯಾಗುವುದಕ್ಕೆ ಒಂದು ದಿನ ಮೊದಲು ಅಂದರೆ 2024ರ ಮೇ 30ರಂದು ಕುಲಸಚವರಿಗೆ ಮಾಹಿತಿ ನೀಡಿದ್ದರು!

ADVERTISEMENT

ಮಾಹಿತಿ ಮುಚ್ಚಿಟ್ಟದ್ದು ಏಕೆ?: ಕಾಮಗಾರಿಗಳ ನಿರ್ವಹಣೆ ಕುರಿತ ಕಡತವನ್ನು ತಡವಾಗಿ ನೀಡಿದ್ದು ಏಕೆ ಎಂದು ಕೇಳಿ ಕುಲಸಚಿವರು 2024ರ ಜುಲೈ 23ರಂದು ನಂಜಯ್ಯನವರ್‌ ಅವರಿಗೆ ಪತ್ರ ಬರೆದಿದ್ದರು. ಅದೇ ದಿನ ಲಿಖಿತ ಉತ್ತರ ನೀಡಿದ್ದ ನಂಜಯ್ಯನವರ್‌, ಸ.ಚಿ.ರಮೇಶ್ ಅವರ ಸೂಚನೆಯಂತೆಯೇ ಅತಿಥಿಗೃಹ ಕಟ್ಟಡದ ಕಾಮಗಾರಿ ಸ್ಥಗಿತಗೊಳಿಸಲಾಗಿತ್ತು, ನುಡಿ ಕಟ್ಟಡ ಮತ್ತು ಸಂಗೀತ ಕಟ್ಟಡ ಪೂರ್ಣಗೊಂಡು ಬಳಕೆಯಾಗುತ್ತಿದೆ. ಈ ಕಟ್ಟಡಗಳ ಕಾಮಗಾರಿ ಪೂರ್ಣಗೊಳಿಸಲು ಕ್ರೆಡಿಲ್‌ಗೆ ಪತ್ರ ಬರೆಯಲಾಗಿದೆ. ಆದರೆ ಸಂಸ್ಥೆ ಇದುವರೆಗೂ ಸಮಂಜಸ ಬಿಲ್ಲನ್ನು ನೀಡಿಲ್ಲ, ಅದಕ್ಕಾಗಿಯೇ ಕಡತ ಸಲ್ಲಿಸಲು ವಿಳಂಬವಾಗಿದೆ’ ಎಂಬ ವಿವರಣೆ ನೀಡಿದ್ದರು.

‘ತನ್ನ ದುಡ್ಡನ್ನು ಇತರರಿಗೆ ಕೊಟ್ಟು ಕೈ ಕೈಸುಟ್ಟುಕೊಂಡ ವಿಶ್ವವಿದ್ಯಾಲಯವನ್ನು ಈ ಸ್ಥಿತಿಗೆ ತಂದ ತಾಂತ್ರಿಕ ಅಧಿಕಾರಿಯ ವಿರುದ್ಧ, ಹಿಂದಿನ ಕುಲಪತಿ ವಿರುದ್ಧ ಏನು ಕ್ರಮ ಕೈಗೊಂಡಿದ್ದೀರಿ’ ಎಂಬ ಪ್ರಶ್ನೆ ಕ್ಯಾಂಪಸ್‌ ತುಂಬ ಕೇಳಿಸುತ್ತಿದ್ದು, ವಿಶ್ವವಿದ್ಯಾಲಯದ ಬಳಿ ಸಮರ್ಪಕ ಉತ್ತರವೇ ಇಲ್ಲವಾಗಿದೆ.

‘ಐದು ವರ್ಷ ಯಾರ ಗಮನಕ್ಕೂ ಬಾರದಂತೆ ಕಡತ ಬಚ್ಚಿಟ್ಟಿದ್ದು ನಿಜ, ಇದೀಗ ವಿಷಯ ಗೊತ್ತಾದ ಕಾರಣ ಸಿಂಡಿಕೇಟ್‌ನಲ್ಲಿ ವಿಷಯ ಪ್ರಸ್ತಾಪವಾಗಿದೆ.  ಕ್ರೆಡಿಲ್‌ನಿಂದ ವರದಿ ತರಿಸಿಕೊಳ್ಳುತ್ತೇವೆ, ಒಪ್ಪಂದದ ಪ್ರಕಾರವೇ ಅವರು ನಡೆದುಕೊಂಡರೆ ಯಾವುದೇ ಸಮಸ್ಯೆ ಇರಲಾರದು, ತಪ್ಪಿದಲ್ಲಿ ಕಾನೂನು ಹೋರಾಟ ಅನಿವಾರ್ಯವಾಗಬಹುದು. ಮಾಹಿತಿ ಬಚ್ಚಿಟ್ಟ ಅಧಿಕಾರಿಯಿಂದ ವಿವರಣೆ ಕೇಳಿದ್ದೇವೆ, ಅವರು ಲಿಖಿತ ವಿವರಣೆ ಕೊಟ್ಟಿದ್ದಾರೆ. ಇದರ ಹೊರತಾಗಿ ಅವರ ವಿರುದ್ಧ ಕ್ರಮ ಕೈಗೊಳ್ಳುವ ಬಗ್ಗೆ ಯೋಚಿಸಿಲ್ಲ’ ಎಂದು ಕುಲಸಚಿವ ಪ್ರೊ.ವಿಜಯ್ ಪೂಣಚ್ಚ ತಂಬಂಡ ಹೇಳಿದರು.

ಹಣಕಾಸಿನ ಮುಗ್ಗಟ್ಟಿನ ಈ ಸ್ಥಿತಿಯಲ್ಲಿ ಹೀಗೆ ಆಗಬಾರದಿತ್ತು ಹಿಂದಿನ ಕುಲಪತಿ ಕುಲಸಚಿವರು ಎಂಜಿನಿಯರ್ ಮಾಹಿತಿ ಮುಚ್ಚಿಟ್ಟದ್ದು ತಪ್ಪು ನಮಗೆ ಈಗ ಗೊತ್ತಾಗಿದೆ ತಕ್ಷಣ ಕ್ರಮಕ್ಕೆ ಮುಂದಾಗಿದ್ದೇವೆ
ಪ್ರೊ.ಡಿ.ವಿ.ಪರಮಶಿವಮೂರ್ತಿ ಕುಲಪತಿ

ಅವ್ಯವಹಾರದ ವಾಸನೆ ‘ಕಾಮಗಾರಿಗೆ ಮೊದಲಾಗಿಯೇ ದುಡ್ಡು ಪಾವತಿಸಿದ್ದು ಕೇವಲ ಒಂದಿಷ್ಟು ಕೆಲಸ ಆದಾಗ ಕಾಮಗಾರಿ ಸ್ಥಗಿತಗೊಳಿಸಲು ಹೇಳಿದ್ದು ಐದು ವರ್ಷ ಈ ಕಡತ ಯಾರ ಕೈಗೆ ಸಿಗದಂತೆ ಇಟ್ಟುಕೊಂಡಿದ್ದರ ಅವ್ಯವಹಾರ ಇಲ್ಲವೇ ಷಡ್ಯಂತ್ರದ ವಾಸನೆ ಇದೆ ಯಾರಿಂದ ಆಗಿದೆ ಹೇಗೆ ಆಗಿದೆ ಎಂಬುದರ ಬಗ್ಗೆ ಸಿಂಡಿಕೇಟ್‌ ಸಭೆ ಗಂಭೀರವಾಗಿ ಯೋಚನೆ ಮಾಡಬೇಕು. ತಪ್ಪು ಮಾಡಿದವರ ವಿರುದ್ಧ ಕ್ರಮಕ್ಕೆ ಮುಂದಾಗದಿದ್ದರೆ ವಿಶ್ವವಿದ್ಯಾಲಯದ ಘನತೆಗೆ ಧಕ್ಕೆ ಮಾತ್ರವಲ್ಲ ಆರ್ಥಿಕ ವ್ಯವಹಾರವನ್ನು ಸರಿಯಾಗಿ ಮಾಡುತ್ತಿಲ್ಲ ಎಂಬ ಕಾರಣಕ್ಕೆ ಸರ್ಕಾರದ ನಿರ್ಲಕ್ಷ್ಯ ಇನ್ನೂ ಮಂದುವರಿಯುವುದಕ್ಕೆ ಕಾರಣವಾಗಬಹುದು ಹಣಕಾಸಿನ ಮುಗ್ಗಟ್ಟು ಎದುರಿಸುತ್ತಿರುವಾಗ ಆರ್ಥಿಕ ಶಿಸ್ತನ್ನು ಕಾಪಾಡುವ ಹೊಣೆಯನ್ನು ಈಗಿನ ಕುಲಪತಿ ಕುಲಸಚಿವರು ಹೊತ್ತುಕೊಂಡು ಸರಿಯಾಗಿ ನಿಭಾಯಿಸಬೇಡವೇ?’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಕ್ಯಾಂಪಸ್‌ನೊಳಗಿನ ಹೊಣೆಯರಿತ ವ್ಯಕ್ತಿಯೊಬ್ಬರು ಪ್ರಶ್ನಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.