ಹಂಪಿ (ವಿಜಯನಗರ): ಐತಿಹಾಸಿಕ ಸ್ಮಾರಕಗಳ ನಡುವೆ ರವಿ ಮರೆಯಾಗುತ್ತಿದ್ದಂತೆ ಇತ್ತ ಹಂಪಿಯ ಬೀದಿಗಳಲ್ಲಿ ಜಾನಪದ ಕಲಾಲೋಕ ಮೇಳೈಸಿತು. ರಾಜ್ಯದ ನಾನಾ ಭಾಗಗಳಿಂದ ಬಂದಿದ್ದ ಕಲಾವಿದರು ಸಾಂಸ್ಕೃತಿಕ ಲೋಕವನ್ನ ಸೃಷ್ಟಿಸಿದರು.
ಉದ್ದಾನ ವೀರಭದ್ರೇಶ್ವರ ದೇವಸ್ಥಾನದಿಂದ ಆರಂಭವಾದ ಜಾನಪದ ವಾಹಿನಿಯ ಮೆರವಣಿಗೆಯಲ್ಲಿ ರಸ್ತೆಯುದ್ದಕ್ಕೂ ಕಲಾವಿದರು ಹೆಜ್ಜೆ ಹಾಕಿದರು. ರಾಜಗಾಂಭಿರ್ಯದಿಂದ ಗಜರಾಜ ಮುಂದೆ ಹೆಜ್ಜೆ ಹಾಕಿದರೆ, ಅಲಕೃಂತ ಮಂಟಪದಲ್ಲಿ ತಾಯಿ ಭುವನೇಶ್ವರಿಯ ಉತ್ಸವ ಮೂರ್ತಿ ಹಿಂದೆ ಸಾಗಿತು, ರಸ್ತೆಯುದ್ದಕ್ಕೂ ನಿಂತಿದ ಜನ ಕೈ ಮುಗಿದು ಭಕ್ತಿ ಸಮರ್ಪಿಸಿದರು.
ರಸ್ತೆಯ ಎರಡೂ ಬದಿ ನಿಂತಿದ್ದ ಜನರು ಕಲಾವಿದರನ್ನು ಹುರಿದುಂಬಿಸಿ ಹುಮ್ಮಸ್ಸು ತುಂಬಿದರು. ವಿದೇಶಿ ಪ್ರಜೆಗಳು ಸೇರಿ ಫೋಟೊ, ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದರು. ತಾಯಿ ಭುವನೇಶ್ವರಿಗೆ ನಮಿಸಿದರು.
ಉದ್ದಾನ ವೀರಭದ್ರೇಶ್ವರ ದೇವಸ್ಥಾನದಿಂದ ಆರಂಭವಾದ ಮೆರವಣಿಗೆ, ವಿರೂಪಾಕ್ಷೇಶ್ವರ ದೇವಸ್ಥಾನದ ರಥಬೀದಿಯವರೆಗೆ ನಡೆಯಿತು.
ಮೆರವಣಿಗೆಯಲ್ಲಿ ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ತಂಬ್ರಹಳ್ಳಿಯ ವೀರಭದ್ರೇಶ್ವರ ತಂಡ, ಕೂಡ್ಲಿಗಿ ತಾಲ್ಲೂಕಿನ ಚೌಡಪುರದವರ ಬಸವೇಶ್ವರ ತಂಡದ ನಂದಿ ಧ್ವಜ ಕುಣಿತ, ರಾಣೆಬೆನ್ನೂರಿನ ಮಲ್ಲೆಪ್ಪ, ಮಂಡ್ಯದ ಸಿದ್ದಾರ್ಥ್ ತಂಡದ ವೀರಗಾಸೆ, ರಾಮಸಾಗರದ ಛಲವಾದಿ ಕಾಳೆ ವಾದಕ, ಗಾದಿಗನೂರಿನ ಅಲಿಗೆ ವಾದನ ನೆರದವರ ಗಮನ ಸೆಳೆಯಿತು.
ಹಳೆ ಮಲಪನ ಗುಡಿಯ ಉಲ್ತೆಪ್ಪ ತಂಡ, ಜಯಲಕ್ಷ್ಮಿ ಮಕ್ಕಳ ಡೊಳ್ಳು ಕುಣಿತ ತಂಡದ ಕುಣಿತ, ರಾಮನಗರ ಮಾರಮ್ಮ ತಂಡ, ಮಂಡ್ಯದ ಸವಿತಾ ಚಿರ್ ಕುಣಯ ಅವರ ಪೂಜಾ ಕುಣಿತ, ಕೊಪ್ಪಳ, ಹಗರಿಬೊಮ್ಮನಹಳ್ಳಿ ಬುಡ್ಗ ಜಂಗಮ ತಂಡಗಳ ಹಗಲು ವೇಷ ಹಾಗೂ ವಿವಿಧ ಕಲಾ ತಂಡಗಳ ಸಾಂಸ್ಕೃತಿಕ ಕಾರ್ಯಕ್ರಮಗಳು ಉತ್ಸವಕ್ಕೆ ಮೆರಗು ನೀಡಿದವು.
ಜಾನಪದ ವಾಹಿನಿಗೆ ಶಾಸಕ ಎಚ್.ಆರ್.ಗವಿಯಪ್ಪ ಚಾಲನೆ ನೀಡಿದರು, ಮೆರವಣಿಗೆಯೂದ್ದಕ್ಕೂ ಹರಪನಹಳ್ಳಿ ಶಾಸಕಿ ಲತಾ ಮಲ್ಲಿಕಾರ್ಜುನ, ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್ ಹೆಜ್ಜೆ ಹಾಕಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.