ಹೂವಿನಹಡಗಲಿ (ವಿಜಯನಗರ): ‘ಮಳೆ ಬೆಳೆ ಸಂಪಾತಲೇ ಪರಾಕ್’ ಇದು ತಾಲ್ಲೂಕಿನ ಐತಿಹಾಸಿಕ ಪ್ರಸಿದ್ಧ ಧಾರ್ಮಿಕ ಸುಕ್ಷೇತ್ರ ಮೈಲಾರದಲ್ಲಿ ಮೊಳಗಿದ ಮೈಲಾರಲಿಂಗೇಶ್ವರ ಸ್ವಾಮಿಯ ಕಾರಣಿಕ ನುಡಿ.
ಮೈಲಾರದ ಡೆಂಕನ ಮರಡಿಯಲ್ಲಿ ಶುಕ್ರವಾರ ಸಂಜೆ ಅಪಾರ ಭಕ್ತರ ಜಯಘೋಷ, ಹರ್ಷೋದ್ಘಾರದ ನಡುವೆ ಪ್ರಸಕ್ತ ಸಾಲಿನ ಕಾರಣಿಕ ನುಡಿ ಮೊಳಗಿತು.
ಸುಕ್ಷೇತ್ರದ ಧರ್ಮಕರ್ತ ವೆಂಕಪ್ಪಯ್ಯ ಒಡೆಯರ್ ಅವರಿಂದ ಭಂಡಾರದ ಆಶೀರ್ವಾದ ಪಡೆದು ಸುಕ್ಷೇತ್ರದ ಪರಂಪರೆಯ ಸಂಕೇತವಾಗಿರುವ ಬಿಲ್ಲು ಏರಿದ ಗೊರವಯ್ಯ ರಾಮಣ್ಣ ‘ಸದ್ದಲೇ’ ಎಂದು ಕೂಗುತ್ತಿದ್ದಂತೆ ಡೆಂಕನಮರಡಿಯಲ್ಲಿ ಸೇರಿದ್ದ ಭಕ್ತ ಪರಿಷೆ, ಜೀವಸಂಕುಲ ಕ್ಷಣಕಾಲ ಸ್ತಬ್ದವಾಯಿತು. ಆಗ ಗೊರವಯ್ಯ ಮೇಲಿನಂತೆ ಕಾರಣಿಕ ನುಡಿದು ಪಶ್ಚಿಮ ದಿಕ್ಕಿಗೆ ಹಿಮ್ಮುಖವಾಗಿ ಜಿಗಿದರು. ನೆರೆದಿದ್ದ ಗೊರವ ಸಮೂಹ ಅವರನ್ನು ಕಂಬಳಿಯಲ್ಲಿ ಹಿಡಿದರು.
ಪ್ರಸಕ್ತ ವರ್ಷದ ಕಾರಣಿಕ ನುಡಿ ಶುಭ ಸೂಚಕ ಎಂದು ಭಕ್ತರು ಅರ್ಥೈಸುತ್ತಿದ್ದರು. ಈ ವರ್ಷ ಮಳೆ, ಬೆಳೆ ಸಮೃದ್ದವಾಗಿ ರೈತರ ಬದುಕು ಹಸನಾಗಲಿದೆ. ಕೃಷಿ, ರಾಜಕೀಯ, ವಾಣಿಜ್ಯ ಸೇರಿದಂತೆ ಎಲ್ಲ ಕ್ಷೇತ್ರಕ್ಕೂ ಒಳಿತಾಗುವ ಸೂಚನೆ ಕಾಣಿಸುತ್ತದೆ ಎಂದು ವಿಶ್ಲೇಷಿಸುತ್ತಿದ್ದರು.
ಶುಕ್ರವಾರ ಮುಂಜಾನೆಯಿಂದ ನಿರ್ಬಂಧ ತೆರವುಗೊಳಿಸಿದ್ದರಿಂದ ಲಕ್ಷಾಂತರ ಭಕ್ತರು ಸುಕ್ಷೇತ್ರಕ್ಕೆ ಆಗಮಿಸಿದ್ದರು. ಡೆಂಕನಮರಡಿ ತುಂಬಾ ಜನ ಸಾಗರ ಸೇರಿದ್ದರಿಂದ ಗತಕಾಲದ ಕಾರಣೀಕೋತ್ಸವ ಸಂಭ್ರಮ ಕಂಡುಬಂತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.