ಅರಸೀಕೆರೆ: ಗ್ರಾಮದಲ್ಲಿ ಹಾದು ಹೋಗಿರುವ ಗದಗ-ಮಂಡ್ಯ 47 ರಾಜ್ಯ ಹೆದ್ದಾರಿ ಸಂಪೂರ್ಣ ಹದಗೆಟ್ಟಿದ್ದು, ವಾಹನಗಳ ಓಡಾಟದಿಂದ ಉಂಟಾಗುವ ದೂಳಿನಿಂದ ಶಾಲಾ - ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರು ಹೈರಾಣರಾಗಿದ್ದಾರೆ.
ರಾಜ್ಯ ಹೆದ್ದಾರಿಗೆ ಹೊಂದಿಕೊಂಡಂತೆ ಎಸ್ಎಂಸಿಕೆ ಪದವಿ ಪೂರ್ವ ಕಾಲೇಜು ಹಾಗೂ ಸರ್ಕಾರಿ ವಿದ್ಯಾರ್ಥಿ ನಿಲಯ ಇದೆ. ವಾಹನ ಸದ್ದಿನ ಕಿರಿಕಿರಿ ಒಂದೆಡೆಯಾದರೆ, ದೂಳಿನಿಂದ ವಿದ್ಯಾರ್ಥಿಗಳು ಕಂಗೆಟ್ಟಿದ್ದಾರೆ.
ಗ್ರಾಮದ ಹೊರಲಯದಲ್ಲಿರುವ ಕಾಲೇಜಿಗೆ ಬರುವ ದಾರಿಯುದ್ದಕ್ಕೂ ಬರುವ ದೂಳಿಗೆ ವಿದ್ಯಾರ್ಥಿಗಳು ಮುಖ ಮುಚ್ಚಿಕೊಂಡು ಬರುವಂತಾಗಿದೆ. ರಭಸವಾಗಿ ಹೋಗುವ ವಾಹನದ ಹಿಂದೆ ಬರುವ ದೂಳು ವಿದ್ಯಾರ್ಥಿಗಳನ್ನು ದಟ್ಟವಾಗಿ ಆವರಿಸಿಕೊಳ್ಳುತ್ತದೆ. ಕ್ಷಣಕಾಲ ಕಣ್ಣು ಮುಚ್ಚಿಕೊಂಡು ನಿಲ್ಲಬೇಕು. ಇಲ್ಲದಿದ್ದರೆ ಕಲ್ಲಿನ ಸಣ್ಣ ಕಣಗಳು ಕಣ್ಣಿಗೆ ಹಾನಿಯನ್ನುಂಟು ಮಾಡುತ್ತದೆ. ದೂಳಿನಲ್ಲಿಯೇ ಏಕಾಏಕಿ ಬರುವ ವಾಹನಗಳು ಪ್ರಾಣಕ್ಕೆ ಸಂಚಕಾರ ತಂದೊಡ್ಡುವಂತಿದೆ.
ಹರಪನಹಳ್ಳಿ ತಾಲ್ಲೂಕಿನ ದೊಡ್ಡ ಹೋಬಳಿ ಕೇಂದ್ರವಾಗಿರುವ ಅರಸೀಕೆರೆಗೆ ಆಸ್ಪತ್ರೆ, ನಾಡ ಕಚೇರಿ, ಪೊಲೀಸ್ ಠಾಣೆ, ಬ್ಯಾಂಕ್ ಸೇರಿದಂತೆ ಅನೇಕ ಕಾರಣಕ್ಕಾಗಿ ನಿತ್ಯ ಸಾವಿರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಬರುತ್ತಾರೆ. ಆದರೆ ಹದಗೆಟ್ಟ ರಸ್ತೆಗಳಿಂದಾಗಿ ಉಂಟಾಗುವ ದೂಳಿನಿಂದ ಜನರು ನಿತ್ಯ ಪರಿತಪಿಸುವಂತಾಗಿದೆ. ಕೂಡಲೇ ದೂಳು ನಿಯಂತ್ರಿಸಿ ಅಭಿವೃದ್ಧಿ ಪಡಿಸಬೇಕು ಎಂದು ಪ್ರಗತಿಪರ ಹೋರಾಟಗಾರ ಗುಡಿಹಳ್ಳಿ ಹಾಲೇಶ್ ಆಗ್ರಹಿಸಿದ್ದಾರೆ.
ಕಾಮಗಾರಿ ಆರಂಭಿಸಲು ಕ್ರಮ ಕೈಗೊಳ್ಳಲಾಗಿದೆ. ಟ್ಯಾಂಕರ್ ಮೂಲಕ ದೂಳು ನಿಯಂತ್ರಣಕ್ಕೆ ತಾತ್ಕಾಲಿಕ ವ್ಯವಸ್ಥೆ ಮಾಡಲಾಗುವುದುಪ್ರಕಾಶ ಗೌಡ ಪಾಟೀಲ್ ಎಇಇ ಹರಪನಹಳ್ಳಿ.
ದೂಳಿನಿಂದ ವಿದ್ಯಾರ್ಥಿಗಳು ಸಿಬ್ಬಂದಿ ಹೈರಾಣಾಗಿದ್ದಾರೆ. ಕೊಠಡಿಗೆ ದೂಳು ಹೊರ ಅವರಿಸುತ್ತಿದ್ದು ಮಕ್ಕಳ ಅನಾರೋಗ್ಯದ ಭೀತಿ ಇದೆಪೂಜಾರ್ ದುರುಗೇಶ್ ಪ್ರಾಂಶುಪಾಲ ಎಸ್ಎಂಸಿಕೆ ಕಾಲೇಜು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.