ADVERTISEMENT

ಹರಪನಹಳ್ಳಿಗೆ ಗರಡಿ ಮನೆಗಳ ಮೆರುಗು

ವಿಶ್ವನಾಥ ಡಿ.
Published 10 ಸೆಪ್ಟೆಂಬರ್ 2023, 5:00 IST
Last Updated 10 ಸೆಪ್ಟೆಂಬರ್ 2023, 5:00 IST
ಹರಪನಹಳ್ಳಿ ಪಟ್ಟಣದ ಗೌಡರ ಗರಡಿ ಮನೆಯಲ್ಲಿ ಕುಸ್ತಿ ಪೈಲ್ವಾನರು ಅಭ್ಯಾಸ ಮಾಡುತ್ತಿರುವುದು
ಹರಪನಹಳ್ಳಿ ಪಟ್ಟಣದ ಗೌಡರ ಗರಡಿ ಮನೆಯಲ್ಲಿ ಕುಸ್ತಿ ಪೈಲ್ವಾನರು ಅಭ್ಯಾಸ ಮಾಡುತ್ತಿರುವುದು   

ಹರಪನಹಳ್ಳಿ: ಕುಸ್ತಿ ಹಾಗೂ ಗರಡಿಮನೆಗೆ ಹರಪನಹಳ್ಳಿ ಹೆಸರುವಾಸಿ. ಇಲ್ಲಿನ ಕುಸ್ತಿಪಟುಗಳು ಜಿಲ್ಲೆ ಮಾತ್ರವಲ್ಲದೆ, ರಾಜ್ಯ–ಹೊರ ರಾಜ್ಯಗಳಲ್ಲಿಯೂ ಸಾಧನೆ ಮಾಡಿದ್ದಾರೆ. ‘ಹಂಪಿ ಕೇಸರಿ’, ‘ಹಂಪಿ ಕುವರ’ ಸೇರಿದಂತೆ ಅನೇಕ ಪ್ರತಿಷ್ಠಿತ ಪ್ರಶಸ್ತಿಗಳಿಗೂ ಭಾಜನರಾಗಿದ್ದಾರೆ.

12 ಜನ ಬ್ರಾಹ್ಮಣ, 12 ಅಗಸಿಗಳು, 12 ಗರಡಿ ಮನೆಗಳು, 12 ಆಂಜನೇಯ ದೇವಸ್ಥಾನಗಳಿರುವ ವಿಶೇಷ ಊರೇ ಹರಪನಹಳ್ಳಿ ಎಂದು ಈ ಹಿಂದೆ ಹೆಸರಿಸಲಾಗಿದೆ. ವಿಜಯನಗರ ಅರಸರು ಮಹಾನವಮಿ ಉತ್ಸವದಲ್ಲಿ ಏರ್ಪಡಿಸುತ್ತಿದ್ದ ಮಲ್ಲಯುದ್ಧದಲ್ಲಿ ಸಾವಿರ ಜಟ್ಟಿಗಳನ್ನು ಸೇರಿಸುತ್ತಿದ್ದರು. ಆ ಜಟ್ಟಿಕಾಳಗ ಪರಂಪರೆಯನ್ನು ಸಾಮಂತ ಅರಸರಾದ ಪಾಳೆಗಾರರು ಹರಪನಹಳ್ಳಿಯಲ್ಲಿ ಕಾಪಾಡಿಕೊಂಡು ಬಂದಿದ್ದರು. ಇದೀಗ ಈ ಪರಂಪರಯನ್ನೇ ಮುಂದುವರಿಸಲಾಗಿದೆ. ಸದ್ಯ ತಾಲ್ಲೂಕಿನ 19 ಗ್ರಾಮಗಳಲ್ಲಿ ಗರಡಿ ಮನೆಗಳಿವೆ. ಕುಸ್ತಿಪಟುಗಳನ್ನು ತಯಾರು ಮಾಡುತ್ತಾ ಆಕರ್ಷಿಸುತ್ತಿವೆ.

ಸೊಂಟಕ್ಕೆ ಜರತಾರಿ ನಡಪಟ್ಟಿ, ತಲೆಗೆ ಕುಲಾಯಿ, ಹಣೆಗೆ ಕುಂಕುಮದ ತಿಲಕ, ಕೊರಳಲ್ಲಿ ಹೂ ಮಾಲೆ, ಬಿಗಿಯಾದ ಕಾಸೆ(ಕಿರುಪಂಚೆ) ಧರಿಸಿ ಕುಸ್ತಿ ಪೈಲ್ವಾನರು ಗರಡಿಮನೆಗಳಲ್ಲಿ ನಿತ್ಯ ತಾಲೀಮು ನಡೆಸುತ್ತಾರೆ. ಗುಂಡು ಕಲ್ಲು ಎತ್ತುವುದು, ಗದೆ ಬೀಸುವುದು, ಸಾಮು ತೆಗೆಯುವಲ್ಲಿ ನಿರತರಾಗಿರುತ್ತಾರೆ.

ADVERTISEMENT
ಪದವಿ ಓದುವಾಗ ರಾಜ್ಯಮಟ್ಟದ ಕುಸ್ತಿ ಪಂದ್ಯದಲ್ಲಿ ಪ್ರಥಮ ಸ್ಥಾನ ಪಡೆದಿದ್ದೆ. ಕುಸ್ತಿ ಪಟ್ಟುಗಳನ್ನು ಕರಗತ ಮಾಡಿಕೊಂಡರೆ ಸೋಲು ಸಾಧ್ಯವಿಲ್ಲ ಕುಸ್ತಿಯಿಂದ ದೇಹವೂ ಸದೃಢವಾಗಿರುತ್ತದೆ.
ಕೃಷ್ಣ, ರಾಜ್ಯ ಕುಸ್ತಿಪಟು

ಗರಡಿ ಮನೆಯೊಳಗೆ ಆಂಜನೇಯನ ಮೂರ್ತಿ ಇಟ್ಟು ವಿಶೇಷ ಪೂಜೆ ಸಲ್ಲಿಸಿದ ಬಳಿಕ ತಾಲೀಮು ನಡೆಸುತ್ತಾರೆ. ಗರಡಿ ಮನೆಯೊಳಗೆ ಫಲವತ್ತಾದ ಕೆಂಪು ಮಣ್ಣು ಹಾಕಿ, ಅದಕ್ಕೆ ಹಾಲು, ತುಪ್ಪ, ಕರ್ಪೂರ ಬೆರೆಸಿ, ತಿಂಗಳಿಗೆ ಎರಡು ಬಾರಿ ಹದಗೊಳಿಸುತ್ತಾರೆ. ಹೀಗಾಗಿಯೇ ಈ ಮಣ್ಣು ಸದಾ ಮಲ್ಲಿಗೆ ಹೂವಿನ ಕಂಪು ಬೀರುತ್ತದೆ.

‘ಕುಸ್ತಿ ಆಡುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ಪುರಾತನ ಗರಡಿ ಮನೆಗಳ ಸಂಕ್ಷಿಸಬೇಕಿದೆ. ಕುಸ್ತಿಪಟುಗಳಿಗಾಗಿ ತಾಲ್ಲೂಕಿಗೊಂದು ಹಾಸ್ಟೆಲ್ ಆರಂಭಿಸಿದರೆ, ಕುಸ್ತಿಯಲ್ಲಿ ಸಾಧನೆಗೆ ಪೂರಕವಾಗುತ್ತದೆ’ ಎನ್ನುವುದು ಕುಸ್ತಿಪಟುಗಳಾದ ಕೆ.ಅಂಜಿನಪ್ಪ, ತಿಪ್ಪೇಶ್ ಅವರ ಅಭಿಪ್ರಾಯ.

ಗರಡಿ ಮನೆಗಳು ಎಲ್ಲೆಲ್ಲಿವೆ?

ಹರಪನಹಳ್ಳಿ ಪಟ್ಟಣದಲ್ಲಿ ಚಿತ್ತಾರಗೇರಿ ಗರಡಿ ಬಾಣಗೇರಿ ಗರಡಿ ಹುಲಿ ಬೆಂಚಿ ಉಕ್ಕಡ ಗರಡಿ ಹುಲ್ಲು ಗರಡಿ ಗೌಳೇರಕೇರಿ ಗರಡಿ ದೊಡ್ಡ ಗರಡಿ ತೆಕ್ಕದಕೇರಿ ಗರಡಿ ಸೈನಾನ ಗರಡಿ ಗೌಡರ ಗರಡಿ ಕಾತರಕಿ ಗರಡಿ ಕುರುಬರಗೇರಿ ಗರಡಿ ಗುಡೆಕೋಟೆ ಗರಡಿ ಮನೆಗಳಿವೆ. ಇವುಗಳಲ್ಲಿ ಕೆಲವು ಮನೆಗಳಲ್ಲಿ ಕುಸ್ತಿ ಪಟ್ಟುಗಳ ಸದ್ದು ನಿಂತಿದೆ. ಹಲವಾಗಲು ತೆಲಿಗಿ ಗರಡಿ ಮನೆಗಳು ಗಮನ ಸೆಳೆಯುತ್ತಿವೆ.

ಹರಪನಹಳ್ಳಿ ಪಟ್ಟಣದ ಹಳೇ ಬಸ್ ನಿಲ್ದಾಣ ಸಮೀಪದಲ್ಲಿರುವ ಗರಡಿಮನೆ
ಹರಪನಹಳ್ಳಿ ಪಟ್ಟಣದ ಗೌಡರ ಗರಡಿ ಮನೆಯಲ್ಲಿ ಅಭ್ಯಾಸಕ್ಕೆ ಸಿದ್ಧಗೊಳಿಸಿದ ಕುಸ್ತಿ ಪೈಲ್ವಾನರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.