ಹೊಸಪೇಟೆ (ವಿಜಯನಗರ): ಸಾಮಾನ್ಯ ಸಭೆಯಲ್ಲಿ ಮಹಿಳಾ ಸದಸ್ಯರನ್ನು ಕೇವಲ ಕಡತಗಳ ಸಹಿಗೆ ಸೀಮಿತಗೊಳಿಸದೆ ಪಟ್ಟಣದ ಅಭಿವೃದ್ಧಿಗಾಗಿ ನಡೆಸುವ ಚರ್ಚೆಗಳಲ್ಲಿ ನಮ್ಮ ಅಭಿಪ್ರಾಯ ಪಡೆದುಕೊಳ್ಳಬೇಕು ಎಂದು ಕಮಲಾಪುರ ಪಟ್ಟಣ ಪಂಚಾಯಿತಿ ಮಹಿಳಾ ಸದಸ್ಯರು ಆಗ್ರಹಿಸಿದರು.
ತಾಲ್ಲೂಕಿನ ಕಮಲಾಪುರದಲ್ಲಿ ಸೋಮವಾರ ಅಧ್ಯಕ್ಷ ಸೈಯದ್ ಅಮಾನುಲ್ಲಾ ಅಧ್ಯಕ್ಷತೆಯಲ್ಲಿ ನಡೆದ ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಮಹಿಳಾ ಸದಸ್ಯೆಯರು ಮೇಲಿನಂತೆ ಒತ್ತಾಯ ಮಾಡಿದರು.
ನಮ್ಮ ವಾರ್ಡ್‌ಗಳ ಸಮಸ್ಯೆಗಳನ್ನು ಈ ಹಿಂದಿನ ಸಭೆಯಲ್ಲಿ ಮಂಡಿಸಲಾಗಿತ್ತು. ಆದರೆ, ಅವುಗಳನ್ನು ಬಗೆಹರಿಸಿಕೊಳ್ಳಲು ಜನಸಾಮಾನ್ಯರಿಗಿಂತ ಹೆಚ್ಚಾಗಿ ಅಲೆಯುತ್ತಿದ್ದೇವೆ. ಆದರೂ ಯಾವುದೇ ಕೆಲಸಗಳು ಆಗುತ್ತಿಲ್ಲ. ಸಭೆ ಬಂದರೆ ಖರ್ಚುಗಳ ಪಟ್ಟಿ ದೊಡ್ಡದಾಗಿ ಮಾಡುತ್ತೀರಿ. ಆದರೆ, ಯಾವುದೇ ಸಮಸ್ಯೆಗೆ ಪರಿಹಾರ ಸಿಗುತ್ತಿಲ್ಲ ಎಂದು ಆರೋಪಿಸಿದರು.
ಡಿಸಿ, ಎಸಿ ಬಳಿ ಕೇವಲ ಅಧ್ಯಕ್ಷರು, ಅಧಿಕಾರಿಗಳು ಭೇಟಿ ನೀಡುತ್ತೀರಿ. ಮಹಿಳಾ ಸದಸ್ಯೆಯರನ್ನು ಕರೆದೊಯ್ಯಬೇಕು. ಎಲ್ಲ ಸಮಸ್ಯೆ, ವಿಷಯಗಳ ಕುರಿತು ಮುಕ್ತ ಚರ್ಚೆ ನಡೆಸಿ, ನಮ್ಮ ವಿಚಾರ ಆಲಿಸಬೇಕು ಎಂದು ಹೇಳಿದರು.
ರಸ್ತೆ, ಶೌಚಾಲಯ, ಕಟ್ಟಡ ಸೇರಿದಂತೆ ಇತರೆ ಕಾಮಗಾರಿಗಳನ್ನು ಕಡಿಮೆ ವೆಚ್ಚದಲ್ಲಿ ಮಾಡಬೇಕು. ಗುಣಮಟ್ಟದ ಕಾಮಗಾರಿಗೆ ಒತ್ತು ಕೊಡಬೇಕು. ಅನುದಾನವನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದರು. ಮುಖ್ಯಾಧಿಕಾರಿ ನಾಗೇಶ್, ಸದಸ್ಯರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.