ಹೊಸಪೇಟೆ (ವಿಜಯನಗರ): ಪ್ರತ್ಯೇಕ ಪ್ರಕರಣಗಳಲ್ಲಿ ಜಿಲ್ಲೆಯ ಮೂರು ಚೆಕ್‌ಪೋಸ್ಟ್‌ಗಳಲ್ಲಿ 20 ತೊಲ ಚಿನ್ನಾಭರಣ, ₹6.80 ಲಕ್ಷ ನಗದು ಹಣವನ್ನು ಪೊಲೀಸರು ಭಾನುವಾರ ವಶಪಡಿಸಿಕೊಂಡಿದ್ದಾರೆ.
ನಗರದ ಟಿ.ಬಿ. ಡ್ಯಾಂ ಸಮೀಪದ ಗಣೇಶ ಗುಡಿ ಚೆಕ್‌ಪೋಸ್ಟ್‌ನಲ್ಲಿ ಮಂತ್ರಾಲಯದಿಂದ ಬೆಂಗಳೂರಿನ ಕಡೆಗೆ ಕಾರು ಹೋಗುತ್ತಿತ್ತು. ಅದನ್ನು ತಡೆದು ಪರಿಶೀಲಿಸಿದಾಗ ದಾಖಲೆಗಳಿಲ್ಲದ 20 ತೊಲೆ ಬಂಗಾರ, ₹80 ಸಾವಿರ ನಗದು ವಶಪಡಿಸಿಕೊಳ್ಳಲಾಗಿದೆ. ಚಿನ್ನಾಭರಣಗಳ ಮೌಲ್ಯ ಸರಿಸುಮಾರು ₹11 ಲಕ್ಷ ಅಂದಾಜಿಸಲಾಗಿದೆ.
ತಾಲ್ಲೂಕಿನ ಭುವನಹಳ್ಳಿ ಚೆಕ್ ಪೋಸ್ಟ್‌ನಲ್ಲಿ ಬಳ್ಳಾರಿಯಿಂದ ಹುಬ್ಬಳ್ಳಿ ಕಡೆಗೆ ಸಾಗಿಸುತ್ತಿದ್ದ ₹4 ಲಕ್ಷ ಹಾಗೂ ಹೂವಿನಹಡಗಲಿ ತಾಲ್ಲೂಕಿನ ಮೈಲಾರ ಚೆಕ್‌ಪೋಸ್ಟ್‌ನಲ್ಲಿ ಹಿರೇಕೆರೂರಿನಿಂದ ಮಾಗಳಕ್ಕೆ ಕೊಂಡೊಯ್ಯುತ್ತಿದ್ದ ₹2 ಲಕ್ಷ ನಗದು ಹಣ ವಶಪಡಿಸಿಕೊಳ್ಳಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ. ಟಿ.ಬಿ. ಡ್ಯಾಂ, ಗ್ರಾಮೀಣ ಠಾಣೆ ಮತ್ತು ಹಿರೇಹಡಗಲಿ ಪೊಲೀಸ್ ಠಾಣೆಗಳಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿವೆ.
₹4.82 ಲಕ್ಷ ವಶ– (ರೋಣ (ಗದಗ ಜಿಲ್ಲೆ) ವರದಿ): ಸಾರಿಗೆ ಸಂಸ್ಥೆ ಬಸ್‌ನಲ್ಲಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ ₹4.82 ಲಕ್ಷ ನಗದನ್ನು ತಾಲ್ಲೂಕಿನ ಹಿರೇಹಾಳ ಚೆಕ್‌ಪೋಸ್ಟ್‌ನಲ್ಲಿ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
₹2.76 ಲಕ್ಷ ನಗದು ವಶ– (ಕಾರವಾರ ವರದಿ): ಸಮರ್ಪಕ ದಾಖಲೆ ಇಲ್ಲದೆ ಸಾಗಿಸಲಾಗುತ್ತಿದ್ದ ₹2.76 ಲಕ್ಷ ಹಣವನ್ನು ಯಲ್ಲಾಪುರ ತಾಲ್ಲೂಕು ಕಿರವತ್ತಿ ಚೆಕ್‍ಪೋಸ್ಟ್‌ನಲ್ಲಿ ಭಾನುವಾರ ಸ್ಥಿರ ಕಣ್ಗಾವಲು ತಂಡದ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಮಹಾರಾಷ್ಟ್ರದ ಪುಣೆಯವರಾದ ಯೋಗೇಶ ಪೂಜಾರಿ ಮತ್ತು ಬೇಬಿಕುಮಾರ ಪೂಜಾರಿ ಸಂಚರಿಸುತ್ತಿದ್ದ ಕಾರು ತಪಾಸಣೆ ನಡೆಸಿದ ವೇಳೆ ನಗದು ಹಣ ಪತ್ತೆಯಾಗಿದೆ. ಇದಕ್ಕೆ ಸೂಕ್ತ ದಾಖಲೆ ಇರಲಿಲ್ಲ ಎಂದು ಅಧಿಕಾರಿ ಸಚಿನ್ ಶಿವಪ್ಪಯ್ಯನಮಠ ತಿಳಿಸಿದ್ದಾರೆ.
54 ಡಿನ್ನರ್ ಸೆಟ್ ವಶ: ಕುಣಿಗಲ್ ತಾಲ್ಲೂಕಿನ ಹುರ್ತಿದುರ್ಗ ಹೋಬಳಿ ನಾಗನಹಳ್ಳಿ ಬಳಿ ಮತದಾರರಿಗೆ ಹಂಚುತ್ತಿದ್ದ ಶಾಸಕ ಡಾ.ರಂಗನಾಥ್ ಮತ್ತು ಸಂಸದ ಡಿ.ಕೆ.ಸುರೇಶ್ ಭಾವಚಿತ್ರವಿದ್ದ 54 ಡಿನ್ನರ್ ಸೆಟ್‌ಗಳನ್ನು ವಶಕ್ಕೆ ಪಡೆದ ಅಧಿಕಾರಿಗಳು, ಇಬ್ಬರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
1,337 ಸೀತಾರಾಮ ಕಲ್ಯಾಣೋತ್ಸವ ಫೋಟೊಗಳ ಜಪ್ತಿ
ನಂಗಲಿ (ಮುಳಬಾಗಿಲು): ಆಂಧ್ರಪ್ರದೇಶಕ್ಕೆ ಹೊಂದಿಕೊಂಡಿರುವ ಜೆಎಸ್‌ಆರ್ ಟೋಲ್ ಗೇಟ್ ಬಳಿಯ ಚೆಕ್‌ಪೋಸ್ಟ್‌ನಲ್ಲಿ ದಾಖಲೆ ಇಲ್ಲದ ₹41,701 ಮೌಲ್ಯದ 1,337 ಸೀತಾರಾಮ ಕಲ್ಯಾಣೋತ್ಸವ ಫೋಟೊಗಳನ್ನು ವಶಪಡಿಸಿಕೊಳ್ಳಲಾಗಿದೆ.
ಮತದಾರರಿಗೆ ಹಂಚಲು ಆಂಧ್ರಪ್ರದೇಶದ ಚಿತ್ತೂರು ಕಡೆಯಿಂದ ರಾಜ್ಯಕ್ಕೆ ಫೋಟೊಗಳನ್ನು ಕಾರಿನಲ್ಲಿ ರಾಜ್ಯದ ಗಡಿ ಮೂಲಕ ಸಾಗಿಸಲಾಗುತ್ತಿತ್ತು.
ಫೋಟೊಗಳ ಮೇಲೆ ಉದ್ಯಮಿ ಹಾಗೂ ಶಿಡ್ಲಘಟ್ಟ ಬಿಜೆಪಿ ಮುಖಂಡ ಸೀಕಲ್ ರಾಮಚಂದ್ರಗೌಡ ಎಂದು ಬರೆದಿದ್ದು ನಂಗಲಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
‘ಚುನಾವಣೆಗೆ ಸಂಬಂಧಿಸಿದ್ದಲ್ಲ’
ವಿಜಯಪುರ: ‘ಮುದ್ದೇಬಿಹಾಳ ತಾಲ್ಲೂಕಿನ ಬಾಲಾಜಿ ಸಕ್ಕರೆ ಕಾರ್ಖಾನೆ ಮೇಲೆ ಚುನಾವಣಾಧಿಕಾರಿಗಳು ದಾಳಿ ನಡೆಸಿ ವಶಪಡಿಸಿಕೊಂಡಿರುವ ಗೋಡೆ ಗಡಿಯಾರ, ಟೀ ಶರ್ಟ್ ಸೇರಿದಂತೆ ಇನ್ನಿತರ ವಸ್ತುಗಳು ಚುನಾವಣೆಗೆ ಸಂಬಂಧಿಸಿದ್ದಲ್ಲ’ ಎಂದು ಬೀಳಗಿ ಶುಗರ್ಸ್‌ನ ಮಾಲೀಕರೂ ಆದ ಮಾಜಿ ಸಚಿವ ಎಸ್.ಆರ್.ಪಾಟೀಲ ಸ್ಪಷ್ಟನೆ ನೀಡಿದ್ದಾರೆ.
ಈ ಕುರಿತು ‘ಪ್ರಜಾವಾಣಿ’ಗೆ ದೂರವಾಣಿ ಮೂಲಕ ಸ್ಪಷ್ಟನೆ ನೀಡಿರುವ ಅವರು, ‘ಕಾರ್ಖಾನೆಯ ಆಡಳಿತ ಮಂಡಳಿ ಸಭೆಯಲ್ಲಿ ಠರಾವು ಪಾಸ್ ಮಾಡಿಯೇ ವಸ್ತುಗಳನ್ನು ಖರೀದಿಸಲಾಗಿದೆ. ಜಿಎಸ್‌ಟಿ ಪಾವತಿಸಿರುವ ಬಿಲ್ ಇದೆ’ ಎಂದರು. ‘ಚುನಾವಣಾಧಿಕಾರಿಗಳು ವಶಪಡಿಸಿಕೊಂಡಿರುವ ವಸ್ತುಗಳ ಮೇಲೆ ನಮ್ಮ ಪಕ್ಷದ ಚಿಹ್ನೆ, ರಾಜಕೀಯ ಸಂಬಂಧಿಸಿದ ಗುರುತುಗಳಿಲ್ಲ’ ಎಂದು ಸ್ಪಷ್ಟಪಡಿಸಿದರು.
₹19.5 ಲಕ್ಷ ಮೌಲ್ಯದ ವಸ್ತುಗಳು, ₹90 ಸಾವಿರ ನಗದು ಜಪ್ತಿ
ಶಿವಮೊಗ್ಗ: ಜಿಲ್ಲೆಯ ವಿವಿಧೆಡೆ ಸೂಕ್ತ ದಾಖಲೆಗಳಿಲ್ಲದೇ ಸಾಗಿಸುತ್ತಿದ್ದ ಅಕ್ಕಿ ಹಾಗೂ ಬೆಡ್‌ಶೀಟ್, ಜಮಖಾನೆ ಹಾಗೂ ₹ 90,000 ನಗದನ್ನು ಪೊಲೀಸರು ಶನಿವಾರ ರಾತ್ರಿ ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆ ವೇಳೆ ವಶಪಡಿಸಿಕೊಂಡಿದ್ದಾರೆ.
ತೀರ್ಥಹಳ್ಳಿ ತಾಲ್ಲೂಕಿನ ಆಗುಂಬೆ ಬಳಿ ಲಾರಿಯಲ್ಲಿ ಸಾಗಣೆ ಮಾಡುತ್ತಿದ್ದ ₹ 5 ಲಕ್ಷ ಮೌಲ್ಯದ 115 ಕ್ವಿಂಟಲ್ ಅಕ್ಕಿಯನ್ನು ಚೆಕ್‌ಪೋಸ್ಟ್‌ನಲ್ಲಿ ವಶಪಡಿಸಿಕೊಳ್ಳಲಾಗಿದೆ. ಮೂರು ಸರಕು ಸಾಗಣೆ ವಾಹನಗಳಲ್ಲಿ ಸಾಗಣೆ ಮಾಡುತ್ತಿದ್ದ ₹ 4.5 ಲಕ್ಷ ಮೌಲ್ಯದ ಬೆಡ್ ಶೀಟ್ ಹಾಗೂ ಜಮಖಾನಗಳನ್ನು ವಶಕ್ಕೆ ಪಡೆಯಲಾಗಿದೆ.
ಶಿವಮೊಗ್ಗದ ದೊಡ್ಡಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಗೋದಾಮಿನಲ್ಲಿ ಸಂಗ್ರಹಿಸಲಾಗಿದ್ದ ₹ 10 ಲಕ್ಷ ಮೌಲ್ಯದ ಅಕ್ಕಿ, ಬೇಳೆ, ಎಣ್ಣೆ, ಶಾವಿಗೆ, ಸಕ್ಕರೆ ಸೇರಿದಂತೆ ದಿನಸಿ ಪದಾರ್ಥಗಳನ್ನು ಒಳಗೊಂಡ 500 ಪ್ಯಾಕೆಟ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಕುಂಸಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಾಹನದಲ್ಲಿ ಕೊಂಡೊಯ್ಯುತ್ತಿದ್ದ ₹ 90,000 ನಗದನ್ನು ದಾಖಲೆಗಳಿಲ್ಲದ್ದರಿಂದ ವಶಕ್ಕೆ ಪಡೆಯಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.