ADVERTISEMENT

ವಿಜಯನಗರ | ಗುತ್ತಿಗೆ ನೌಕರಿ ರದ್ದುಪಡಿಸಿ: ಸರ್ಕಾರಿ ನೌಕರರ ಒಕ್ಕೂಟ ಒತ್ತಾಯ

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2024, 12:20 IST
Last Updated 24 ನವೆಂಬರ್ 2024, 12:20 IST
<div class="paragraphs"><p>ಶ್ರೀಕುಮಾರ್</p></div>

ಶ್ರೀಕುಮಾರ್

   

ಹೊಸಪೇಟೆ (ವಿಜಯನಗರ): ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹೊರಗುತ್ತಿಗೆ ಪದ್ಧತಿಯನ್ನು ಹೆಚ್ಚಿನ ಪ್ರಮಾಣದಲ್ಲಿ ಜಾರಿಗೆ ತಂದು ಇಡೀ ವ್ಯವಸ್ಥೆಯನ್ನೇ ಬುಡಮೇಲು ಮಾಡುವ ಹುನ್ನಾರ ನಡೆಸುತ್ತಿವೆ. ಪಿಂಚಣಿಯಲ್ಲಿ ಸಹ ನೌಕರರಿಗೆ ಅನ್ಯಾಯ ಮಾಡುತ್ತಿದೆ. ಇದರ ವಿರುದ್ಧ ಮುಂದಿನ ದಿನಗಳಲ್ಲಿ ತೀವ್ರತರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಅಖಿಲ ಭಾರತ ರಾಜ್ಯ ಸರ್ಕಾರಿ ನೌಕರರ ಒಕ್ಕೂಟ (ಎಐಎಸ್‌ಜಿಇಎಫ್‌) ಹೇಳಿದೆ.

ಒಕ್ಕೂಟದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಶ್ರೀಕುಮಾರ್ ಭಾನುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸರ್ಕಾರಿ ಇಲಾಖೆಗಳಲ್ಲಿ ಶೇ 50ರಷ್ಟು ಹುದ್ದೆಗಳು ಖಾಲಿಬಿದ್ದಿವೆ. ಒಪಿಎಸ್ ರದ್ದುಪಡಿಸಿ ಎನ್‌ಪಿಸಿ ಹಾಗೂ ಇದೀಗ ಯುಪಿಎಸ್ ಪಿಂಚಣಿ ಪದ್ಧತಿ ತರಲು ಹೊರಟಿರುವುದು ಖಾಸಗೀಕರಣದ ಭಾಗ. ಇದನ್ನು ವಿರೋಧಿಸಿ ಮುಂದಿನ ತಿಂಗಳು ಒಕ್ಕೂಟದಿಂದ ರಾಷ್ಟ್ರಮಟ್ಟದ ಹೋರಾಟದ ರೂಪುರೇಷೆ ಸಿದ್ಧಪಡಿಸಲಾಗುವುದು ಎಂದರು.

ADVERTISEMENT

ಕೇಂದ್ರ ಸರ್ಕಾರ ಸಹ ತನ್ನ ಹಲವು ಯೋಜನೆಗಳನ್ನು ಹೊರಗುತ್ತಿಗೆ ನೌಕರರಿಂದಲೇ ಮಾಡಿಸುತ್ತಿದೆ, ಇದರಿಂದ ನೌಕರರಿಗೆ ಬದ್ಧತೆ ಇಲ್ಲವಾಗುತ್ತದೆ ಮತ್ತು ದೀರ್ಘಾವಧಿಯಲ್ಲಿ ಇಡೀ ವ್ಯವಸ್ಥೆಯೇ ಕುಸಿಯುವ ಹಂತ ತಲುಪಬಹುದು. ಕೋವಿಡ್‌ ಸಮಯದಲ್ಲಿ ದೇಶದಲ್ಲಿ ಸಾವು ಕಡಿಮೆ ಸಂಭವಿಸಿದ್ದಕ್ಕೆ ಇಲ್ಲಿ ಆರೋಗ್ಯ ಸಿಬ್ಬಂದಿ ಅಧಿಕ ಪ್ರಮಾಣದಲ್ಲಿ ಇದ್ದುದೇ ಕಾರಣವಾಗಿತ್ತು. ಆದರೆ ಹೊರಗುತ್ತಿಗೆ ವ್ಯವಸ್ಥೆ ಮುಂದಿನ ದಿನಗಳಲ್ಲಿ ಹೆಚ್ಚಿದರೆ ಆರೋಗ್ಯ ಕ್ಷೇತ್ರವೂ ಕುಸಿಯುವುದು ನಿಶ್ಚಿತ. ಶಿಕ್ಷಣ ಕ್ಷೇತ್ರದಲ್ಲಿ ಈಗಾಗಲೇ ಇದರ ಕರಾಳ ಮುಖ ಗೋಚರಿಸಿದೆ ಎಂದರು.

ಜರ್ಮನಿ ಸಹಿತ ಮುಂದುವರಿದ ದೇಶಗಳಲ್ಲಿ ಹೊರಗುತ್ತಿಗೆ ಪದ್ಧತಿ ಇರುವುದನ್ನೇ ಭಾರತದಲ್ಲೂ ಅನುಸರಿಸುವುದು ಸರಿಯಲ್ಲ, ಏಕೆಂದರೆ ಅಲ್ಲಿ ಸಾಮಾಜಿಕ ಸುರಕ್ಷತೆಗೆ ಅಧಿಕ ಒತ್ತು ನೀಡಲಾಗಿರುತ್ತದೆ ಎಂದರು.

ಒಕ್ಕೂಟದ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಎಸ್.ಜೈಕುಮಾರ್‌ ಮಾತನಾಡಿ, ರಾಜ್ಯದಲ್ಲಿ  35 ಸಾವಿರ ಶಿಕ್ಷಕರ ಹುದ್ದೆ ಸಹಿತ 2.5 ಲಕ್ಷ ಸರ್ಕಾರಿ ಹುದ್ದೆಗಳು ಖಾಲಿ ಬಿದ್ದಿವೆ, ಹೊರಗುತ್ತಿಗೆ ಪದ್ಧತಿ  ಎಂದರೆ ಅದು ಖಾಸಗೀಕರಣದ ಭಾಗ ಹೊರತು ಬೇರೆಲ್ಲ, ಇದನ್ನು ಒಕ್ಕೂಟ ತೀವ್ರವಾಗಿ ವಿರೋಧಿಸುತ್ತದೆ ಎಂದರು.

ಒಕ್ಕೂಟದ ಗೌರವಾಧ್ಯಕ್ಷ ಮಹದೇವಯ್ಯ ಮಠಪತಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್‌.ಶೋಭಾ ಲೋಕನಾಗಣ್ಣ, ಚಿತ್ರಕಲಾ  ಶಿಕ್ಷಕರ ಒಕ್ಕೂಟದ ಅಧ್ಯಕ್ಷ ಬಿ.ಜಿ.ಆವಟಿ ಮಾತನಾಡಿದರು. ರಾಷ್ಟ್ರೀಯ ಸದಸ್ಯ ರಂಗನಾಥ ಹವಾಲ್ದಾರ್, ಜಿಲ್ಲಾ ಅಧ್ಯಕ್ಷ ನಾಗರಾಜ ಪತ್ತಾರ್ ಇದ್ದರು.

ನಗರದ ಪರಿವೀಕ್ಷಣಾ ಮಂದಿರದಲ್ಲಿ ಭಾನುವಾರ ನೌಕರರ ಕಲಬುರ್ಗಿ ವಿಭಾಗೀಯ ಮಟ್ಟದ ಕಾರ್ಯಾಗಾರ ನಡೆದ ಹಿನ್ನೆಲೆಯಲ್ಲಿ ಈ ಪತ್ರಿಕಾಗೋಷ್ಠಿ ನಡೆಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.