ADVERTISEMENT

ವಿದ್ಯಾರ್ಥಿನಿಯರೊಂದಿಗೆ ಅಸಭ್ಯ ವರ್ತನೆ: ಸರ್ಕಾರಿ ಶಾಲೆ ಮುಖ್ಯಶಿಕ್ಷಕ ಅಮಾನತು

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2021, 11:02 IST
Last Updated 19 ಮಾರ್ಚ್ 2021, 11:02 IST
ಮುಖ್ಯಶಿಕ್ಷಕ ಟಿ. ಜಂಬಣ್ಣ
ಮುಖ್ಯಶಿಕ್ಷಕ ಟಿ. ಜಂಬಣ್ಣ   

ಹೊಸಪೇಟೆ (ವಿಜಯನಗರ): ವಿದ್ಯಾರ್ಥಿನಿಯರೊಂದಿಗೆ ಅಸಭ್ಯವಾಗಿ ವರ್ತಿಸಿದ ತಾಲ್ಲೂಕಿನ ಸರ್ಕಾರಿ ಶಾಲೆಯ ಮುಖ್ಯಶಿಕ್ಷಕ ಟಿ. ಜಂಬಣ್ಣ ಅವರನ್ನು ಅಮಾನತುಗೊಳಿಸಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಸಿ. ರಾಮಪ್ಪ ಆದೇಶ ಹೊರಡಿಸಿದ್ದಾರೆ.

ಜಂಬಣ್ಣ ಅವರು ಅಸಭ್ಯವಾಗಿ ವರ್ತಿಸಿ, ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಇತ್ತೀಚೆಗೆ ಕೆಲವು ವಿದ್ಯಾರ್ಥಿನಿಯರು ಲಿಖಿತ ರೂಪದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಪಿ. ಸುನಂದಾ ಅವರಿಗೆ ದೂರು ಕೊಟ್ಟಿದ್ದರು. ಈ ದೂರಿನ ಮೇರೆಗೆ ಕ್ಷೇತ್ರ ಶಿಕ್ಷಣಾಧಿಕಾರಿ ಮೂವರು ಅಧಿಕಾರಿಗಳನ್ನು ಒಳಗೊಂಡ ಸಮಿತಿ ರಚಿಸಿದ್ದರು.

ತನಿಖೆ ನಡೆಸಿದ ಸಮಿತಿ, ಜಂಬಣ್ಣ ವಿದ್ಯಾರ್ಥಿನಿಯರ ಜತೆ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ವರದಿ ಕೊಟ್ಟಿತ್ತು. ಮುಖ್ಯಶಿಕ್ಷಕನ ವಿರುದ್ಧ ಶಿಸ್ತು ಕ್ರಮ ಜರುಗಿಸಬಹುದು ಎಂದು ಬಿಒ ಶಿಫಾರಸು ಮಾಡಿದ್ದರು. ಅದರಂತೆ ಈಗ ಡಿಡಿಪಿಐ ಸಿ. ರಾಮಪ್ಪ ಅವರು ಮುಖ್ಯಶಿಕ್ಷಕನನ್ನು ಮಾ. 17ರಿಂದ ಪೂರ್ವಾನ್ವಯ ಆಗುವಂತೆ ಅಮಾನತುಗೊಳಿಸಿ ಕ್ರಮ ಕೈಗೊಂಡಿದ್ದಾರೆ.

ಪೋಕ್ಸೊ ಅಡಿ ಪ್ರಕರಣ: ಕೂಡ್ಲಿಗಿ ತಾಲ್ಲೂಕಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ಇದೇ ಮುಖ್ಯಶಿಕ್ಷಕನ ವಿರುದ್ಧ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. 36 ದಿನ ಜೈಲಿನಲ್ಲಿದ್ದರು. ಬಳಿಕ ಆ ಪ್ರಕರಣದಲ್ಲಿ ನಿರ್ದೋಷಿಯಾಗಿ ಬಿಡುಗಡೆಯಾಗಿದ್ದರು. ಮುಂದಿನ ಸೇವಾ ಅವಧಿಯಲ್ಲಿ ಈ ರೀತಿಯ ಘಟನೆ ಮರುಕಳಿಸದಂತೆ ಎಚ್ಚರಿಕೆ ವಹಿಸಬೇಕೆಂದು ಇಲಾಖೆ ಎಚ್ಚರಿಕೆ ನೀಡಿತ್ತು. ಅದರ ಹೊರತಾಗಿಯೂ ಹಳೆಯ ಚಾಳಿ ಮುಂದುವರೆಸಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.