ಹೊಸಪೇಟೆ (ವಿಜಯನಗರ): ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿದ್ಯುತ್ ಬಿಲ್ ಬಾಕಿ ಮೊತ್ತ ₹1.05 ಕೋಟಿ ಬಿಡುಗಡೆ ಮಾಡಲು ಉನ್ನತ ಶಿಕ್ಷಣ ಇಲಾಖೆ ಒಪ್ಪಿಕೊಂಡಿದೆ.
ಈ ಬಗ್ಗೆ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಡಿ.ವಿ.ಪರಮಶಿವಮೂರ್ತಿ ಅವರಿಗೆ ಪತ್ರ ಬರೆದಿರುವ ಇಲಾಖೆ, ‘ಹಣವನ್ನು ವಿಶ್ವವಿದ್ಯಾಲಯದ ಹಣಕಾಸು ಅಧಿಕಾರಿಗೆ ಕಳುಹಿಸಲಾಗುವುದು. ಗುಲಬರ್ಗಾ ವಿದ್ಯುತ್ ಸರಬರಾಜು ಕಂಪನಿಗೆ (ಜೆಸ್ಕಾಂ) ವಿದ್ಯುತ್ ಬಿಲ್ ಬಾಕಿ ಪಾವತಿಸಿದ್ದರ ಕುರಿತು ವರದಿ ಕಳುಹಿಸಬೇಕು’ ಎಂದು ತಿಳಿಸಿದೆ.
ವಿಶ್ವವಿದ್ಯಾಲಯವು ಎರಡು ವರ್ಷಗಳಿಂದ ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿದೆ. ಕಳೆದ ವರ್ಷದ ಫೆಬ್ರುವರಿಯಲ್ಲಿ ₹1.05 ಕೋಟಿ ವಿದ್ಯುತ್ ಬಿಲ್ ಬಾಕಿ ಉಳಿದಿತ್ತು. ಆಗ ವಿದ್ಯುತ್ ಸಂಪರ್ಕ ಕಡಿತ ಮಾಡಲಾಗಿತ್ತು. ತಕ್ಷಣ ₹30 ಲಕ್ಷ ಹೊಂದಿಸಿದ್ದರಿಂದ ವಿದ್ಯುತ್ ಪೂರೈಕೆ ಪುನರ್ ಸ್ಥಾಪನೆಗೊಂಡಿತ್ತು. ಕಳೆದ ವರ್ಷ ಜೂನ್‌ನಲ್ಲಿ ₹85 ಲಕ್ಷ ಬಾಕಿ ಇದ್ದ ವಿದ್ಯುತ್ ಬಿಲ್, ಡಿಸೆಂಬರ್ ಅಂತ್ಯದ ವೇಳೆಗೆ ₹97 ಲಕ್ಷಕ್ಕೆ ಏರಿಕೆಯಾಗಿತ್ತು. ಒಂದು ದಿನ ವಿಶ್ವವಿದ್ಯಾಲಯದ ವಿದ್ಯುತ್ ಸಂಪರ್ಕ ಕಡಿತ ಮಾಡಲಾಗಿತ್ತು.
ಈ ವರ್ಷದ ಫೆಬ್ರುವರಿ 2ನೇ ವಾರ ಮತ್ತೆ ವಿಶ್ವವಿದ್ಯಾಲಯಕ್ಕೆ ನೋಟಿಸ್ ನೀಡಿದ್ದ ‘ಜೆಸ್ಕಾಂ’, ವಿದ್ಯುತ್ ಕಡಿತದ ಎಚ್ಚರಿಕೆ ನೀಡಿತ್ತು. ಈ ಎಲ್ಲ ವಿದ್ಯಮಾನಗಳನ್ನು ಹಾಗೂ ವಿಶ್ವವಿದ್ಯಾಲಯ ಎದುರಿಸುತ್ತಿರುವ ಆರ್ಥಿಕ ಸಂಕಷ್ಟದ ಕುರಿತು ‘ಪ್ರಜಾವಾಣಿ’ ಆಗಾಗ್ಗೆ ವರದಿ ಮಾಡಿತ್ತು. ಸರ್ಕಾರ ಸ್ಪಂದಿಸಿದ ಹಿನ್ನೆಲೆಯಲ್ಲಿ ಪ್ರೊ.ಡಿ.ವಿ.ಪರಶಿವಮೂರ್ತಿ ಅವರು ‘ಪ್ರಜಾವಾಣಿ’ಗೆ ಕೃತಜ್ಞತೆ ಸಲ್ಲಿಸಿದ್ದಾರೆ.
₹2.50 ಕೋಟಿ ಅಗತ್ಯ:
‘ವಿಶ್ವವಿದ್ಯಾಲಯದ ದೊಡ್ಡ ಭಾರ ಇದೀಗ ಕಡಿಮೆಯಾಗಿದೆ. ಹೊರಗುತ್ತಿಗೆ ಸಿಬ್ಬಂದಿ ಮತ್ತು ತಾತ್ಕಾಲಿಕ ಸಿಬ್ಬಂದಿಗೆ ₹2.50 ಕೋಟಿ ವೇತನ ಪಾವತಿ ಬಾಕಿ ಉಳಿದಿದೆ. ಆ ಮೊತ್ತವನ್ನೂ ಬಿಡುಗಡೆ ಮಾಡಲು ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಸರ್ಕಾರ ಶೀಘ್ರ ಸ್ಪಂದಿಸುವ ವಿಶ್ವಾಸ ಇದೆ’ ಎಂದು ಪ್ರೊ. ಡಿ.ವಿ.ಪರಮಶಿವಮೂರ್ತಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.