ADVERTISEMENT

ಸ್ಮಶಾನ ಕಾರ್ಮಿಕರ ಗಣತಿ ನಡೆಸಿ: ಕರ್ನಾಟಕ ರಾಜ್ಯ ಮಸಣ ಕಾರ್ಮಿಕರ ಸಂಘ ಒತ್ತಾಯ

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2024, 7:30 IST
Last Updated 30 ಆಗಸ್ಟ್ 2024, 7:30 IST
   

ಹೊಸಪೇಟೆ (ವಿಜಯನಗರ): ಮಸಣ ಕಾರ್ಮಿಕರನ್ನು ಕೊನೆಗೂ ರಾಜ್ಯ ಸರ್ಕಾರ ಗುರುತಿಸಿದ್ದು, ಕೆಲವೊಂದು ಸೌಲಭ್ಯ ಕಲ್ಪಿಸಲು ಮುಂದಾಗಿದೆ. ಆದರೆ ಗಣತಿ ನಡೆಸಿದರೆ ಮಾತ್ರ ಸೌಲಭ್ಯ ನಿಜ ಫಲಾನುಭವಿಗಳಿಗೆ ದೊರೆಯಲು ಸಾಧ್ಯ, ಸರ್ಕಾರ ತಕ್ಷಣ ಇದನ್ನು ಮಾಡಬೇಕು ಎಂದು ಕರ್ನಾಟಕ ರಾಜ್ಯ ಮಸಣ ಕಾರ್ಮಿಕರ ಸಂಘ ಒತ್ತಾಯಿಸಿದೆ.

ಸಂಘದ ರಾಜ್ಯ ಸಂಚಾಲಕ ಯು.ಬಸವರಾಜ ಅವರು ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಸರ್ಕಾರಿ ಸೌಲಭ್ಯಗಳು ಸಿಗಬೇಕಾದಲ್ಲಿ ‘ಮಸಣ ಕಾರ್ಮಿಕರು’ ಎಂಬುದಕ್ಕೆ ಸರ್ಟಿಫಿಕೇಟ್ ಕೇಳುತ್ತಿದ್ದಾರೆ. ಗಣತಿ ನಡೆದರೆ ಮಾತ್ರ ಈ ಪ್ರಮಾಣಪತ್ರ ಸಿಗಲು ಸಾಧ್ಯ. ಹೀಗಾಗಿ ತಕ್ಷಣ ಗಣತಿ ನಡೆಸಬೇಕು ಮತ್ತು ಕನಿಷ್ಠ 45 ವಯೋಮಾನದಿಂದ ಮಾಸಿಕ ₹3,000 ಪಿಂಚಣಿ ಘೋಷಿಸಬೇಕು ಎಂದು ಒತ್ತಾಯಿಸಿದರು.

‘ಕುಣಿ ಅಗೆದು ಮತ್ತು ಶವ ಹೂಳುವ ಕೆಲಸವನ್ನು ಉದ್ಯೋಗ ಖಾತ್ರಿಯಡಿ ತಂದು ಅದನ್ನು ಉದ್ಯೋಗ ಖಾತ್ರಿ ಕೆಲಸವೆಂದು ಪರಿಗಣಿಸಬೇಕು, ಸುರಕ್ಷತಾ ಕ್ರಮಗಳು ಮತ್ತು ಪರಿಕರಗಳನ್ನು ಒದಗಿಸಬೇಕು. ಪ್ರತಿ ಗ್ರಾಮ ಪಂಚಾಯಿತಿಗೆ ಕನಿಷ್ಠ ಒಬ್ಬ ಮಸಣ ಕಾರ್ಮಿಕರನ್ನು ಕಾಯಂ ಆಗಿ ಕೆಲಸಕ್ಕೆ ನಿಯೋಜಿಸಬೇಕು’ ಎಂದು ಅವರು ಆಗ್ರಹಿಸಿದರು.

ADVERTISEMENT

‘ರಾಜ್ಯದಲ್ಲಿ 35 ಸಾವಿರದಿಂದ 40 ಸಾವಿರದಷ್ಟು ಸ್ಮಶಾನಗಳಿವೆ. ಇಲ್ಲಿ ದುಡಿಯುವ ಕಾರ್ಮಿಕರನ್ನು ಲೆಕ್ಕ ಹಾಕಿದರೆ ಕನಿಷ್ಠ 2 ಲಕ್ಷ ಕುಟುಂಬಗಳು ಇರಬಹುದು ಎಂಬ ಅಂದಾಜು ಮಾಡಲಾಗಿದೆ. ಇದರ ಹೊರತಾಗಿ ಕೆಲವು ಜಾತಿ, ಸಮುದಾಯಗಳಿಗೆ ಸಂಬಂಧಿಸಿದ ಪ್ರತ್ಯೇಕ ಸ್ಮಶಾನಗಳಿವೆ. ಅಲ್ಲಿಯೂ ಸಾವಿರಾರು ಸಂಖ್ಯೆಯಲ್ಲಿ ಕಾರ್ಮಿಕರು ಇದ್ದಾರೆ. ಎಲ್ಲಾ ಸ್ಮಶಾನ ಕಾರ್ಮಿಕರಿಗೂ ಸರ್ಕಾರದ ಸೌಲಭ್ಯ ದೊರಕಬೇಕು ಎಂಬುದು ಸಂಘದ ಉದ್ದೇಶ’ ಎಂದರು.

ಕೃತಜ್ಞತೆ ಸಲ್ಲಿಕೆ: ರಾಜ್ಯದ ಮಸಣ ಕಾರ್ಮಿಕರ ಮಕ್ಕಳ ಶಿಕ್ಷಣಕ್ಕೆ ವಿಶೇಷ ಪ್ರವರ್ಗಗಳಡಿ ಶಿಕ್ಷಣದಲ್ಲಿ ಮೀಸಲಾತಿ ಹಾಗು ಅವರಿಗೆ ಇತರೆ ಸರ್ಕಾರಿ ಸೌಲಭ್ಯ ಒದಗಿಸಲು ಕ್ರಮ ಕೈಗೊಂಡ ಸರ್ಕಾರಕ್ಕೆ ಬಸವರಾಜ ಅವರು ಕೃತಜ್ಞತೆ ಸಲ್ಲಿಸಿದರು. 

ಬಹುತೇಕ ಬಿಟ್ಟಿ ಚಾಕರಿಯಲ್ಲಿ ತೊಡಗಿರುವ ಮಸಣ ಕಾರ್ಮಿಕರು ಸಂಘಟಿತರಾಗಿ, ಸಾವಿರಾರು ವರ್ಷಗಳಿಂದ ತಮಗಾದ ಅನ್ಯಾಯವನ್ನು ಸರಿಪಡಿಸಿ ನ್ಯಾಯ ಒದಗಿಸಲು ಕೋರಿ ಹಲವು ಬಾರಿ ಮನವಿ ಮಾಡಿದ ಮೇರೆಗೆ, ಅವರ  ಹಕ್ಕೊತ್ತಾಯಗಳಿಗೆ ಸರ್ಕಾರ ಕೊನೆಗೂ ಸ್ವಲ್ಪ ಮಟ್ಟಿಗೆ ಸ್ಪಂದಿಸಿದೆ ಎಂದು ಅವರು ಹೇಳಿದರು.

ಸಂಘದ ಸಹ ಸಂಚಾಲಕಿ ಬಿ.ಮಾಳಮ್ಮ, ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಆರ್.ಭಾಸ್ಕರ ರೆಡ್ಡಿ, ವಿವಿಧ ತಾಲ್ಲೂಕುಗಳ ಸಂಚಾಲಕರಾದ ರುದ್ರೇಶ್‌, ಪೋಗಣ್ಣ, ಕಲ್ಯಾಣಪ್ಪ, ಕುಡುಚಪ್ಪ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.