ADVERTISEMENT

ಹುಡಾ ನಿವೇಶನ ಅಭಿವೃದ್ಧಿಗೆ ಹಸಿರು ನಿಶಾನೆ

10 ವರ್ಷಗಳ ಇಂಗಳಗಿ ಯೋಜನೆಗೆ ಮುಕ್ತಿ–ಶೀಘ್ರ ಲೇಔಟ್‌ ಅಭಿವೃದ್ಧಿ ನಿರೀಕ್ಷೆ

ಎಂ.ಜಿ.ಬಾಲಕೃಷ್ಣ
Published 20 ಸೆಪ್ಟೆಂಬರ್ 2024, 6:01 IST
Last Updated 20 ಸೆಪ್ಟೆಂಬರ್ 2024, 6:01 IST
ಎಚ್‌.ಆರ್‌. ಗವಿಯಪ್ಪ
ಎಚ್‌.ಆರ್‌. ಗವಿಯಪ್ಪ   

ಹೊಸಪೇಟೆ (ವಿಜಯನಗರ): ತಾಲ್ಲೂಕಿನ ಇಂಗಳಗಿಯಲ್ಲಿ ಹೊಸಪೇಟೆ ನಗರಾಭಿವೃದ್ಧಿ ಪ್ರಾಧಿಕಾರ (ಹುಡಾ) ಅಭಿವೃದ್ಧಿಪಡಿಸಲಿರುವ ನಿವೇಶನದ ಅಭಿವೃದ್ಧಿ ಅಂದಾಜು ಪಟ್ಟಿಗೆ ನಗರಾಭಿವೃದ್ಧಿ ಇಲಾಖೆ ಗುರುವಾರ ಒಪ್ಪಿಗೆ ನೀಡುವುದರ ಮೂಲಕ ಶೀಘ್ರ ಕಾಮಗಾರಿ ನಡೆಯುವುದು ನಿಶ್ಚಿತವಾಗಿದೆ.

ಆಗಸ್ಟ್‌ 22ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಇಂಗಳಗಿಯ ವಿವಿಧ ಸರ್ವೆ ನಂಬರ್‌ಗಳಲ್ಲಿನ 24.24 ಎಕರೆ ಜಮೀನಿನಲ್ಲಿ ಶೇ 50:50 ಅನುಪಾತದಲ್ಲಿ ಕೈಗೊಳ್ಳಲು ಉದ್ದೇಶಿಸಿರುವ ವಸತಿ ಯೋಜನೆಯ ₹11.76 ಕೋಟಿ ಪರಿಷ್ಕೃತ ಅಂದಾಜಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿತ್ತು. ಶಾಸಕ ಎಚ್‌.ಆರ್.ಗವಿಯಪ್ಪ ಅವರು ಗುರುವಾರ ಬೆಂಗಳೂರಿನಲ್ಲಿ ಇಲಾಖೆಯ ಅಧಿಕಾರಿಗಳ ಸಮ್ಮುಖದಲ್ಲೇ ಕುಳಿತು ಪರಿಷ್ಕೃತ ಅಂದಾಜಿಗೆ ಇಲಾಖೆಯ ಒಪ್ಪಿಗೆ ದೊರಕಿಸಿಕೊಟ್ಟರು. ಈ ಸಂಬಂಧ ಆದೇಶದ ಪ್ರತಿ ‘ಪ್ರಜಾವಾಣಿ’ಗೆ ಲಭ್ಯವಾಗಿದೆ.

ಇಂಗಳಗಿ ಗ್ರಾಮದ ಸ.ನಂ.237/ಬಿ2ರಲ್ಲಿ 2.22ಎಕರೆ, 247ರಲ್ಲಿ 5.54 ಎಕರೆ, 248ಎ ರಲ್ಲಿ 10.96 ಎಕರೆ, 248 ಬಿ ರಲ್ಲಿ 5.52 ಎಕರೆ ಸ್ಥಳ ಇದೆ. 2018–19ನೇ ಸಾಲಿನ ದರಪಟ್ಟಿಯಂತೆ ಈ ಮೊದಲು ₹8.42 ಕೋಟಿ ಅಂದಾಜು ಮೊತ್ತ ನಿಗದಿಪಡಿಸಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿತ್ತು. ಈಗ ವೆಚ್ಚ ಅಧಿಕವಾಗಿರುವ ಕಾರಣ ಪರಿಷ್ಕೃತ ಅಂದಾಜು ಪಟ್ಟಿ ಸಲ್ಲಿಸಲಾಗಿತ್ತು. ಅದಕ್ಕೆ ಇದೀಗ ಇಲಾಖೆಯ ಅಂತಿಮ ಒಪ್ಪಿಗೆ ಲಭಿಸಿದೆ.

ADVERTISEMENT

‘ಹುಡಾ’ ಅಧ್ಯಕ್ಷರಾಗಿ ಆಯ್ಕೆಯಾದ ತಕ್ಷಣ ಎಚ್.ಎನ್‌.ಎಫ್‌. ಮೊಹಮ್ಮದ್ ಇಮಾಮ್‌ ನಿಯಾಜಿ ಅವರು ಜಿಲ್ಲಾ ಉಸ್ತುವಾರಿ ಸಚಿವರ ಮೂಲಕ ಇಂಗಳಗಿ ನಿವೇಶನದ ಕಡತ ವಿಲೇವಾರಿಗೆ ಕ್ರಮ ಕೈಗೊಂಡಿದ್ದರು. ಅದರಂತೆ ಸಂಪುಟ ಸಭೆಯಲ್ಲಿ ಒಪ್ಪಿಗೆ ದೊರೆತಿತ್ತು. ಇದೀಗ ಶಾಸಕ ಎಚ್.ಆರ್.ಗವಿಯಪ್ಪ ಅವರು ಖುದ್ದಾಗಿ ನಗರಾಭಿವೃದ್ಧಿ ಇಲಾಖೆಯ ಅಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲವೇ ದಿನಗಳಲ್ಲಿ ಯೋಜನೆಗೆ ಅನುಮತಿ ದೊರಕಿಸಿಕೊಟ್ಟಿದ್ದಾರೆ.

ತಂಡ ಕೆಲಸ: ‘ಹಳೆಯ ಯೋಜನೆ ಇದಾಗಿತ್ತು, ಹುಡಾ ಆಯುಕ್ತರು ಈ ನಿಟ್ಟಿನಲ್ಲಿ ಉತ್ತಮವಾಗಿ ಕೆಲಸ ಮಾಡಿದ್ದರು. ಹಾಲಿ ಅಧ್ಯಕ್ಷರ ಪ್ರಯತ್ನವೂ ಶ್ಲಾಘನೀಯ. ತಂಡ ರೀತಿಯಲ್ಲಿ ಕೆಲಸ ಮಾಡಿದ್ದು, ಹೊಸಪೇಟೆ ಜನತೆಗೆ ಬೇಗ ಪ್ರಯೋಜನ ಸಿಗಬೇಕು ಎಂಬುದೇ ನಮ್ಮೆಲ್ಲರ ಉದ್ದೇಶ’ ಎಂದು ಶಾಸಕ ಎಚ್‌.ಆರ್.ಗವಿಯಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.

ಹಣದ ಲೆಕ್ಕಾಚಾರ: ನಿವೇಶನ ಅಭಿವೃದ್ಧಿಗೆ ಸಮ್ಮತಿ ಸೂಚಿಸುವಾಗ ನಗರಾಭಿವೃದ್ಧಿ ಇಲಾಖೆ ಹಣದ ಲೆಕ್ಕಾಚಾರವನ್ನು ಬಹಳ ಸೂಕ್ಷ್ಮವಾಗಿ ಗಮನಿಸಿದ್ದು, ಸರ್ಕಾರದಿಂದ ಹೆಚ್ಚುವರಿ ದುಡ್ಡು ಪಡೆಯುವಂತಿಲ್ಲ ಎಂದು ತಿಳಿಸಿದೆ. ‘ಹುಡಾ’ ಆಯುಕ್ತರು ಈ ನಿಟ್ಟಿನಲ್ಲಿ ವಿವರವಾದ ಲೆಕ್ಕಾಚಾರ ನೀಡಿದ್ದಾರೆ. ₹7.92 ಕೋಟಿಯನ್ನು ಭದ್ರತಾ ಠೇವಣಿ ರೂಪದಲ್ಲಿ ಇರಿಸಲು, ₹2.82 ಕೋಟಿಯನ್ನು ನಿಧಿ ಉಳಿತಾಯ ಖಾತೆಯಲ್ಲಿ ಇರಿಸಲು ಒಪ್ಪಿದ್ದಾರೆ. ಮೂಲೆ ನಿವೇಶನಗಳ ಹರಾಜಿನ ಮೂಲಕ ಬಂದ ₹1.15 ಕೋಟಿ ಸಂಗ್ರಹವಾಗಲಿದೆ ಎಂದಿದ್ದಾರೆ. ವಾಣಿಜ್ಯ ಪ್ಲಾಟ್‌ಗಳ ಮಾರಾಟದ ಮೂಲಕ ಬಂದ ₹2 ಕೋಟಿ ದುಡ್ಡು 2023–24ನೇ ಸಾಲಿನ ಬಜೆಟ್‌ ಆಗಿದೆ ಎಂದು ತಿಳಿಸಿದ್ದರು. ಈ ಎಲ್ಲ ಆರ್ಥಿಕ ಸ್ಥಿತಿ ಗಮನಿಸಿದ ಇಲಾಖೆ, ಇದೊಂದು ಆರ್ಥಿಕವಾಗಿ ಸದೃಢ ಯೋಜನೆ ಎಂದು ಪರಿಗಣಿಸಿ ನಿವೇಶನ ಅಭಿವೃದ್ಧಿಗೆ ಒಪ್ಪಿಗೆ ನೀಡಿದೆ.

ಸತತ ಪ್ರಯತ್ನದ ಫಲವಾಗಿ ಇಲಾಖೆಯ ಸಚಿವರು ಅಧಿಕಾರಿಗಳು ನಿವೇಶನ ಅಭಿವೃದ್ಧಿಗೆ ಅನುಮೋದನೆ ನೀಡಿ ಹೊಸಪೇಟೆ ಜನತೆಗೆ ನಿವೇಶನ ಭಾಗ್ಯ ಕರುಣಿಸಲು ಸಹಕರಿಸಿದ್ದಾರೆ
ಎಚ್.ಆರ್.ಗವಿಯಪ್ಪ ಶಾಸಕ

ಲೇಔಟ್‌ ಅಭಿವೃದ್ಧಿ–ಷರತ್ತುಗಳು

  • ಲೇಔಟ್ ಅಭಿವೃದ್ಧಿಯ ಆರಂಭದಲ್ಲಿ ಪ್ರಾಧಿಕಾರ ಒಟ್ಟು ವೆಚ್ಚದ ಶೇ 15ರಷ್ಟು ಹೂಡಿಕೆ ಮಾಡಬೇಕು

  • ಭೂಮಾಲೀಕರೊಂದಿಗೆ 50:50 ಅನುಪಾತವನ್ನು ಕಡ್ಡಾಯವಾಗಿ ಪಾಲಿಸಬೇಕು ನಿವೇಶನ ಹಂಚಿಕೆ ನಿಯಮದಂತೆ ಮೊದಲಾಗಿ ನಿವೇಶನ ಗುರುತಿಸಿ ನೀಡಬೇಕು

  • ನಿವೇಶನ ಹಂಚಿಕೆಯಾದವರಿಂದ 2ರಿಂದ 3 ಕಂತುಗಳಲ್ಲಿ ಮೊತ್ತ ಸಂಗ್ರಹಿಸಬೇಕು ಎಂಬ ಷರತ್ತು ವಿಧಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.