ಹಗರಿಬೊಮ್ಮನಹಳ್ಳಿ: ಎಲ್ಲೆಡೆ ದೀಪಾವಳಿ ಸಂಭ್ರಮ ಕಳೆಗಟ್ಟಿದೆ. ಉತ್ತಮ ಮಳೆಯಿಂದಾಗಿ ಸಮೃದ್ಧ ಬೆಳೆ ಬಂದಿದ್ದು, ರೈತರ ಮೊಗದಲ್ಲಿ ನಗುವಿದೆ. ಜನರಲ್ಲಿ ಒಂದಿಷ್ಟು ಖರೀದಿ ಶಕ್ತಿಯೂ ಕುದುರಿದೆ. ಆದರೆ, ಹಗರಿಬೊಮ್ಮನಹಳ್ಳಿ ತಾಲ್ಲೂಕಿನಲ್ಲಿ ದೀಪಾವಳಿಯ ಮುಂಚೆ ಬಿಟ್ಟುಬಿಡದೆ ಸುರಿದ ಮಳೆಯಿಂದಾಗಿ ಹಣತೆಯಿಂದಲೇ ಬೆಳಕಿನ ಬದುಕು ಕಟ್ಟಿಕೊಳ್ಳುತ್ತಿದ್ದ ಸಮೀಪದ ಚಿಂತ್ರಪಳ್ಳಿಯ ಕುಂಬಾರರು ಸಂಕಷ್ಟಕ್ಕೀಡಾಗಿದ್ದಾರೆ.
ಸತತ 15 ದಿನ ಸುರಿದ ಮಳೆ, ಮಣ್ಣಿನ ಹಣತೆ ತಯಾರಿಕೆ ಮತ್ತು ಅವುಗಳನ್ನು ಸುಡುವ ಕಾರ್ಯಕ್ಕೆ ಸಂಪೂರ್ಣ ತಡೆಯೊಡ್ಡಿತ್ತು. ಇದರಿಂದಾಗಿ ಹೊಸಪೇಟೆ, ಗದಗ, ಕೊಪ್ಪಳ, ಹಾವೇರಿ, ದಾವಣಗೆರೆ ಜಿಲ್ಲೆಗಳಿಂದ ಸಾವಿರಾರು ಸಂಖ್ಯೆಯ ಹಣತೆ ಬೇಡಿಕೆ ಬಂದಿದ್ದರೂ ತಯಾರಿಸಲಾಗದೇ ಇಲ್ಲಿನ ಕುಂಬಾರರು ಕೈಚೆಲ್ಲಿ ಕುಳಿತುಕೊಳ್ಳುವಂತಾಗಿದೆ.
ಈ ಹಿಂದೆ ದಾಳಿ ಇಟ್ಟಿದ್ದ ತಮಿಳುನಾಡು ಹಣತೆಗಳಿಂದಾಗಿ ಕಳೆದ ಮೂರು ವರ್ಷಗಳಿಂದ ಬೆಳಕಿನ ಹಬ್ಬ ಮಸಕಾಗಿತ್ತು. ಈ ಬಾರಿ ಸಗಟು ಮಾರಾಟಗಾರರಿಂದ ಬೇಡಿಕೆ ಬಂದು ಹೊಸ ನಿರೀಕ್ಷೆ ಹುಟ್ಟಿಸಿತ್ತು. ಚಿಂತ್ರಪಳ್ಳಿಯ ಕುಂಬಾರ ರಮೇಶ್ ಮತ್ತು ವೆಂಕಟೇಶ್ ಸೇರಿದಂತೆ ಐದಾರು ಕುಟುಂಬಗಳು ದೀಪಾವಳಿಗಾಗಿ ಲಕ್ಷಾಂತರ ಸಂಖ್ಯೆಯ ಹಣತೆಗಳನ್ನು ತಯಾರಿಸುವ ಯೋಜನೆ ಹೊಂದಿತ್ತು. ಆದರೆ, ಇವರ ಆಸೆಗೆ ಮಳೆ ತಣ್ಣೀರು ಎರಚಿದೆ.
ಸ್ಥಳೀಯ ಕುಂಬಾರರು ಒಂದು ಹಣತೆಯನ್ನೂ ತಯಾರಿಸಿಲ್ಲ. ಕೆಲವರು ಅನಿವಾರ್ಯವಾಗಿ ತಮಿಳುನಾಡು ಹಣತೆಗಳನ್ನು ಖರೀದಿಸಿ ಮಾರಾಟ ಮಾಡುವ ಇರಾದೆ ಹೊಂದಿದ್ದಾರೆ. ಕೇವಲ ಕುಂಬಾರರಷ್ಟೇ ಅಲ್ಲದೆ ಎಲ್ಲ ಮಾರಾಟಗಾರರು ತಮಿಳುನಾಡು ಹಣತೆಗಳ ಮೊರೆ ಹೋಗಿದ್ದಾರೆ.
ಕುಂಬಾರ ರಮೇಶ, ಕಾವ್ಯಾ, ಕುಂಬಾರ ರೇವಣಸಿದ್ದಪ್ಪ, ರೇಣುಕಮ್ಮ ಅವರು ಬದುಕು ಕಟ್ಟಿಕೊಳ್ಳಲು ಹಣತೆಗಳ ತಯಾರಿಕೆ ಕೈಬಿಟ್ಟು, ದಿನ ಬಳಕೆಯ ಮಣ್ಣಿನ ಪಾತ್ರೆಗಳು, ಮಡಕೆಗಳು, ಪೂಜೆ ಮಗಿಗಳು, ಗಡಿಗೆ, ದೇವಸ್ಥಾನಕ್ಕೆ ಬೇಕಾದ ಕೇಲುಗಳನ್ನು ತಯಾರಿಸಲು ಮುಂದಾಗಿದ್ದಾರೆ. ಕೆರೆಯ ಮಣ್ಣಿನ ಹಣತೆಗಳು ದೀಪಾವಳಿ ಪೂಜೆಗೆ ಶ್ರೇಷ್ಠ. ಆದರೂ ಮಾರುಕಟ್ಟೆಯಲ್ಲಿ ಹುಡುಕಿದರೂ ಮಣ್ಣಿನ ಹಣತೆ ದೊರೆಯದಂತಾಗಿದೆ.
ದೀಪಾವಳಿ ಆಸುಪಾಸಿನಲ್ಲಿ ಅಂದಾಜು ಒಂದು ಲಕ್ಷ ಹಣತೆ ತಯಾರಿಸಿ ಮಾರಾಟ ಮಾಡುತ್ತಿದ್ದೆವು. ಮಳೆಯು ನಮ್ಮ ಬದುಕನ್ನು ಕಸಿದುಕೊಂಡಿದೆಕುಂಬಾರ ರಮೇಶ್ ಚಿಂತ್ರಪಳ್ಳಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.