ADVERTISEMENT

ನಾಗತಿಬಸಾಪುರ: ಹಾಲಸ್ವಾಮಿ ಮುಳ್ಳು ಗದ್ದುಗೆ ಉತ್ಸವ

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2024, 15:28 IST
Last Updated 15 ನವೆಂಬರ್ 2024, 15:28 IST
ಹೂವಿನಹಡಗಲಿ ತಾಲ್ಲೂಕು ನಾಗತಿಬಸಾಪುರ ಗ್ರಾಮದಲ್ಲಿ ಹಾಲಸ್ವಾಮಿ ಮುಳ್ಳು ಗದ್ದುಗೆ ಉತ್ಸವ ಜರುಗಿತು 
ಹೂವಿನಹಡಗಲಿ ತಾಲ್ಲೂಕು ನಾಗತಿಬಸಾಪುರ ಗ್ರಾಮದಲ್ಲಿ ಹಾಲಸ್ವಾಮಿ ಮುಳ್ಳು ಗದ್ದುಗೆ ಉತ್ಸವ ಜರುಗಿತು    

ಹೂವಿನಹಡಗಲಿ: ತಾಲ್ಲೂಕಿನ ನಾಗತಿಬಸಾಪುರ ಗ್ರಾಮದಲ್ಲಿ 59ನೇ ವರ್ಷದ ಹಾಲಸ್ವಾಮಿ ಮುಳ್ಳು ಗದ್ದುಗೆ ಉತ್ಸವ ಗುರುವಾರ ರಾತ್ರಿ ಸಂಭ್ರಮದಿಂದ ಜರುಗಿತು.

ಹಾಲಸ್ವಾಮಿ ಮಠದ ಧಾರ್ಮಿಕ ಪರಂಪರೆಯಂತೆ ಪೂಜಾ ಅನುಷ್ಠಾನ ಕೈಗೊಂಡಿದ್ದ ತೆಗ್ಗಿನಮಠ ಗಿರಿರಾಜ ಹಾಲ ಸ್ವಾಮೀಜಿ ಅವರು ಸ್ವಾಮಿಯ ಗದ್ದುಗೆಗೆ ಪೂಜೆ ನೆರವೇರಿಸಿ ಮುಳ್ಳಿನ ಮಂಟಪ ಆರೋಹಣ ಮಾಡಿದರು.

‘ಹಾಲಸ್ವಾಮಿ ದೊರೆಯೇ ನಿನಗಾರು ಸರಿಯೇ ಸರಿಸರಿ ಎಂದವರ ಹಲ್ಲು ಮುರಿಯೇ ಬಹುಪರಾಕ್’,  ‘ಹರ ಹರ ಮಹಾದೇವ’ ಎಂಬ ಭಕ್ತರ ಜಯಘೋಷ, ಹರ್ಷೋದ್ಘಾರದ ನಡುವೆ ಉತ್ಸವ ಪ್ರಾರಂಭವಾಯಿತು.

ADVERTISEMENT

ಶ್ರೀಮಠದ ಬಳಿ ರಾತ್ರಿ 10.30 ಗಂಟೆಗೆ ಆರಂಭವಾದ ಮುಳ್ಳು ಗದ್ದುಗೆ ಉತ್ಸವ, ಗ್ರಾಮದ ಮುಖ್ಯ ಬೀದಿಯ ಮೂಲಕ ಸಾಗಿ ಬೆಳಗಿನ ಜಾವ ಮೂಲ ಸ್ಥಳದಲ್ಲಿ ಸಂಪನ್ನಗೊಂಡಿತು. ಸಮಾಳ, ನಂದಿಕೋಲು, ಮಂಗಳವಾದ್ಯ, ಮಹಿಳಾ ಡೊಳ್ಳು ಕುಣಿತ ವಾದ್ಯ ವೈಭವ ಉತ್ಸವದ ಮೆರಗನ್ನು ಹೆಚ್ಚಿಸಿದ್ದವು. ನಾಗತಿಬಸಾಪುರ ಸುತ್ತಮುತ್ತಲಿನ ಗ್ರಾಮಗಳ ಅಪಾರ ಭಕ್ತರು ಉತ್ಸವದಲ್ಲಿ ಪಾಲ್ಗೊಂಡಿದ್ದರು.

ಗ್ರಾಮದಲ್ಲಿ ಶುಕ್ರವಾರ ಸಂಜೆ ಹಾಲಸ್ವಾಮಿ ರಥೋತ್ಸವ ವಿಜೃಂಭಣೆಯಿಂದ ಜರುಗಿತು. ಅಪಾರ ಭಕ್ತರು ರಥೋತ್ಸವದಲ್ಲಿ ಭಾಗವಹಿಸಿ, ರಥಕ್ಕೆ ಬಾಳೆಹಣ್ಣು ಎಸೆದು ಭಕ್ತಿಯನ್ನು ಸಮರ್ಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.