ADVERTISEMENT

ಹಂಪಿ ಉತ್ಸವ: ಗತ ವೈಭವ ಮರಳಿಸಲು ಯತ್ನ- ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್‌

ಹಂಪಿ ಉತ್ಸವ: 4 ವೇದಿಕೆಗಳಲ್ಲಿ ಕಾರ್ಯಕ್ರಮ– ಎತ್ತು, ಕುರಿ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 17 ಜನವರಿ 2024, 9:32 IST
Last Updated 17 ಜನವರಿ 2024, 9:32 IST
   

ಹೊಸಪೇಟೆ (ವಿಜಯನಗರ): ಹಂಪಿ ಉತ್ಸವದ ರೂವಾರಿ ದಿವಂಗತ ಎಂ.ಪಿ.ಪ್ರಕಾಶ್ ಅವರು ಬಯಸಿದಂತಹ ಅತ್ಯುತ್ತಮ ಕಾರ್ಯಕ್ರಮಗಳನ್ನು ಪ್ರದರ್ಶಿಸುವ ಮೂಲಕ ಗತ ವೈಭವ ಮರಳಿಸಲು ಈ ಬಾರಿ ಪ್ರಯತ್ನಿಸಲಾಗುವುದು ಎಂದು ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್‌ ಹೇಳಿದರು.

ತಮ್ಮ ಕಚೇರಿಯಲ್ಲಿ ಬುಧವಾರ ಶಾಸಕರಾದ ಎಚ್‌.ಆರ್.ಗವಿಯಪ್ಪ ಮತ್ತು ಎಂ.ಪಿ.ಲತಾ ಮಲ್ಲಿಕಾರ್ಜುನ ಅವರ ಉಪಸ್ಥಿತಿಯಲ್ಲಿ ನಡೆದ ಪೂರ್ವಸಿದ್ಧತಾ ಸಭೆಯಲ್ಲಿ ಮಾತನಾಡಿದ ಅವರು, ನಾಲ್ಕು ವೇದಿಕೆಗಳಲ್ಲಿ ಕಾರ್ಯಕ್ರಮ ಆಯೋಜಿಸಲಾಗುವುದು. ಗ್ರಾಮೀಣ ಕ್ರೀಡೆಗಳು, ಶಾಸ್ತ್ರೀಯ ಕಾರ್ಯಕ್ರಮಗಳು, ಹಂಪಿಯ ಇತಿಹಾಸ ತಿಳಿಸುವ ಕಾರ್ಯಕ್ರಮಗಳ ಸಹಿತ ಹಲವು ಉಪಯುಕ್ತ ಹಾಗೂ ಮನರಂಜನೆಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ಗ್ರಾಮೀಣ ಕ್ರೀಡೆಗಳಲ್ಲಿ ಮುಖ್ಯವಾಗಿ ಗುಂಡು ಎತ್ತುವುದು, ಕುಸ್ತಿ, ಎತ್ತಿನ ಗಾಡಿಗಳ ಗಾಲಿ ಜೋಡಿಸುವ ಸ್ಪರ್ಧೆಗಳು ಇರಲಿವೆ ಎಂದರು.

‘ನಮ್ಮ ಬಯಲಾಟ ಕಲಾವಿದರು ಅಯೋದ್ಯೆಯಲ್ಲೂ ಹೆಸರು ಮಾಡಿದ್ದಾರೆ. ಅದನ್ನು ಹಂಪಿ ಉತ್ಸವದಲ್ಲೂ ಪ್ರದರ್ಶಿಸಲಾಗುವುದು. ಈ ಬಾರಿ ಎತ್ತುಗಳ ಪ್ರದರ್ಶನ, ಕುರಿಗಳ ಪ್ರದರ್ಶನ, ಶ್ವಾನ ಪ್ರದರ್ಶನ, ಗಾಳಿ ಪಟ ಉತ್ಸವ ಸಹಿತ ಹಲವಾರು ಮನರಂಜನಾ ಕಾರ್ಯಕ್ರಮಗಳಿರುತ್ತವೆ. ಪ್ರತಿ ವರ್ಷ ನಡೆಯುವ ಫೋಟೊ ಸ್ಪರ್ಧೆ, ಪಾಕ ಸ್ಪರ್ಧೆ ಸಹಿತ ಹಲವಾರು ಕಾರ್ಯಕ್ರಮಗಳು ಈ ಬಾರಿಯೂ ಇರಲಿವೆ’ ಎಂದು ಅವರು ಮಾಹಿತಿ ನೀಡಿದರು.

ADVERTISEMENT

ಫೆ.2ರಂದು ಉದ್ಘಾಟನೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಫೆಬ್ರುವರಿ 2ರಂದು ಸಂಜೆ 5.30ಕ್ಕೆ ಹಂಪಿ ಉತ್ಸವ ಉದ್ಘಾಟಿಸಲಿದ್ದಾರೆ. ಗಾಯತ್ರಿ ಮಂಟಪ ಸಮೀಪದ ಮುಖ್ಯ ವೇದಿಕೆಯಲ್ಲಿ ಉದ್ಘಾಟನಾ ಸಮಾರಂಭ ಹಾಗೂ ಪ್ರಮುಖ ಕಾರ್ಯಕ್ರಮಗಳು ಇರಲಿವೆ. ಎದುರು ಬಸವಣ್ಣ ಮಂಟಪದ ಸಮೀಪ ಇನ್ನೊಂದು ವೇದಿಕೆ ನಿರ್ಮಾಣವಾಗಲಿದೆ. ವಿರೂಪಾಕ್ಷ ದೇವಸ್ಥಾನದ ಆವರಣದೊಳಗೆ ಮೂರನೇ ವೇದಿಕೆ ಹಾಗೂ ಸಾಸಿವೆ ಕಾಳು ಗಣೇಶ ಸಮೀಪ ನಾಲ್ಕನೇ ವೇದಿಕೆ ನಿರ್ಮಿಸಲಾಗುವುದು ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.

ವಿರೂಪಾಕ್ಷ ದೇವಸ್ಥಾನದೊಳಗಿನ ವೇದಿಕೆಯಲ್ಲಿ ಮೊದಲ ದಿನ ಹಂಪಿ ಇತಿಹಾಸ ಕುರಿತು ವಿಚಾರಗೋಷ್ಠಿ, 2ನೇ ದಿನ ಮಹಿಳಾ ಕವಿಗೋಷ್ಠಿ, 3ನೇ ದಿನ ಮಕ್ಕಳ ಕವಿಗೋಷ್ಠಿ ನಡೆಯಲಿದೆ ಎಂದು ಹೇಳಿದರು.

ಹಂಪಿ ಉತ್ಸವದ ಸಮಯದಲ್ಲಿ ಹೊಸಪೇಟೆಯಿಂದ ಹಂಪಿಗೆ ಉಚಿತ ಬಸ್ ವ್ಯವಸ್ಥೆ ಮಾಡಲಾಗುವುದು. ತಾಲ್ಲೂಕು ಕೇಂದ್ರಗಳಿಂದ ಹಾಗೂ ಸುತ್ತಮುತ್ತಲಿನ ಜಿಲ್ಲೆಗಳಿಂದಲೂ ಅಧಿಕ ಬಸ್ ವ್ಯವಸ್ಥೆ ಮಾಡಲಾಗುವುದು ಎಂದು ಶಾಸಕ ಎಚ್.ಆರ್‌.ಗವಿಯಪ್ಪ ತಿಳಿಸಿದರು.

ಎಂ.ಪಿ.ಪ್ರಕಾಶ್ ಅವರ ಆಶಯದಂತೆ ನವೆಂಬರ್‌ ಮೊದಲ ವಾರದಲ್ಲೇ ಹಂಪಿ ಉತ್ಸವ ನಡೆಯಬೇಕಿದ್ದು, ಮುಂದಿನ ವರ್ಷದಿಂದಲಾದರೂ ಅದನ್ನು ಜಾರಿಗೆ ತರಬೇಕು ಎಂದು ಶಾಸಕಿ ಲತಾ ಮನವಿ ಮಾಡಿದರು.

ಜಿಲ್ಲಾ ಪಂಚಾಯಿತಿ ಸಿಇಒ ಸದಾಶಿವ ಪ್ರಭು ಬಿ., ಹೆಚ್ವುವರಿ ಜಿಲ್ಲಾಧಿಕಾರಿ ಅನುರಾಧ ಜಿ., ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸಲೀಂ ಪಾಶಾ, ಉಪವಿಭಾಗಾಧಿಕಾರಿ ಮೊಹಮ್ಮದ್ ಅಲಿ ಅಕ್ರಂ ಷಾ ಇದ್ದರು

====

ಹಂಪಿ ಬೈ ಸ್ಕೈ

ಹಂಪಿಯ ಸ್ಮಾರಕಗಳನ್ನು ಆಗಸದಿಂದ ನೋಡುವ ನಿಟ್ಟಿನಲ್ಲಿ ಹೆಲಿಕಾಪ್ಟರ್‌ಗಳಲ್ಲಿ ವಿಹಾರ ಕೈಗೊಳ್ಳಲು ವ್ಯವಸ್ಥೆ ಮಾಡಲಾಗುವುದು. ಕಳೆದ ವರ್ಷ ದುಬಾರಿ ಎಂಬ ಕಾರಣಕ್ಕೆ ಜನರು ಅದನ್ನು ಅಷ್ಟಾಗಿ ಸ್ವೀಕರಿಸಿರಲಿಲ್ಲ. ಆದರೆ ಕಳೆದ ವರ್ಷ ಮೂರನೇ ದಿನ ಉತ್ತಮವಾಗಿ ಜನ ಹೆಲಿಕಾಪ್ಟರ್‌ನಲ್ಲಿ ಪ್ರಯಾಣ ಮಾಡಿದ್ದರು. ಈ ಬಾರಿ ಮೊದಲ ದಿನದಿಂದಲೇ ಹೆಲಿಕಾಪ್ಟರ್‌ಗೆ ಜನರನ್ನು ಸೆಳೆಯಲು ಪ್ರಯತ್ನಿಸಲಾಗುವುದು, 5 ನಿಮಿಷದ ಬದಲಿಗೆ 7 ನಿಮಿಷಗಳ ಕಾಲ ಆಗಸದಲ್ಲಿ ಸುತ್ತಾಡಿಸಲು ಆಯೋಜಕರಿಗೆ ಸೂಚಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಜನಮೆಚ್ಚುಗೆ ಗಳಿಸಿದ ಧ್ವನಿ ಬೆಳಕಿನ ಕಾರ್ಯಕ್ರಮ ಒಂದು ವಾರ ನಡೆಯಲಿದೆ. ಆನೆ, ಕುದುರೆಗಳ ಪ್ರದರ್ಶನದ ವಸಂತ ವೈಭವ ಕಾರ್ಯಕ್ರಮವೂ ಇರಲಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.