ಹೊಸಪೇಟೆ (ವಿಜಯನಗರ): ಫಲಪೂಜಾ ಮಹೋತ್ಸವದ ಪ್ರಯುಕ್ತ ಹಂಪಿಯಲ್ಲಿ ಮಂಗಳವಾರ ರಾತ್ರಿ ಗಿರಿಜನ ಉತ್ಸವ ಹಾಗೂ ಮರಿದೇವ ಸಂಗೀತ ಸಾಂಸ್ಕೃತಿಕ ಕಲಾ ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಬಳ್ಳಾರಿ ಅಂಜಲಿ ತಂಡದಿಂದ ಹಕ್ಕಿಪಿಕ್ಕಿ, ಇಂದ್ರಾಣಿ ತಂಡದಿಂದ ಸಮೂಹ ನೃತ್ಯ, ಬೆಂಗಳೂರಿನ ಗೋವಿಂದರಾಜು ತಂಡದಿಂದ ಪೂಜಾ ಕುಣಿತ, ಕೊಪ್ಪಳದ ಶಕುಂತಲಾ ಬೆನ್ನಾಳ್ ಅವರು ಹಿಂದೂಸ್ತಾನಿ ಸಂಗೀತ ಗಾಯನ ಕಾರ್ಯಕ್ರಮ ನಡೆಸಿಕೊಟ್ಟರು.
ಚಂದನ ಅವರು ಭಕ್ತಿಗೀತೆಗಳನ್ನು ಹಾಡಿ ಮನರಂಜಿಸಿದರೆ, ಸೋಗಿ ನಾಗರತ್ನಮ್ಮ ತಂಡವು ಬಯಲಾಟ, ಬೆಂಗಳೂರಿನ ಮೋಹನ್ ರಂಗನಾಥ ತಂಡ ಯಕ್ಷಗಾನ, ಡಿ. ಶೈಲಾ ಕಂಪ್ಲಿ ಸುಗಮ ಸಂಗೀತ ಕಾರ್ಯಕ್ರಮ ಮನಸೂರೆಗೊಳಿಸಿತು.
ಇದಕ್ಕೂ ಮುನ್ನ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ದಲಿಂಗೇಶ ಕೆ.ರಂಗಣ್ಣನವರ್ ಉದ್ಘಾಟಿಸಿ, ‘ಧಾರ್ಮಿಕ ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸುವುದರಿಂದ ಹಂಪಿಗೆ ಬರುವ ದೇಶ–ವಿದೇಶದ ಪ್ರವಾಸಿಗರು ಅದನ್ನು ಕಣ್ತುಂಬಿಕೊಳ್ಳುತ್ತಾರೆ. ನಮ್ಮ ಕಲಾ ಪ್ರಕಾರ ಅವರಿಗೆ ಪರಿಚಯಿಸಿದಂತಾಗುತ್ತದೆ’ ಎಂದರು.
ಹಂಪಿ ವಿದ್ಯಾರಣ್ಯ ಭಾರತಿ ಸ್ವಾಮೀಜಿ, ಆನೆಗುಂದಿ ರಾಜವಂಶಸ್ಥ ಕೃಷ್ಣದೇವರಾಯ, ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ಸಹಾಯಕ ಆಯುಕ್ತ ಎಚ್.ಎಂ.ಪ್ರಕಾಶ್‍ರಾವ್, ಪುರೋಹಿತ ಚಿಕ್ಕಮೋಹನ್ ಭಟ್, ಕಲಾವೃಂದದ ಸಂಸ್ಥಾಪಕ ಅಧ್ಯಕ್ಷ ಅಂಗಡಿ ವಾಮದೇವ, ಎಚ್.ಕೆ.ಶರಣೇಶ, ಕಮಲಾಪುರದ ಕುಶಾಲ್ ಜಿಂಗಾಡೆ, ಎ.ದೊಡ್ಡ ಬಸಪ್ಪ, ಕೆ.ಪಂಪನಗೌಡ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.