ADVERTISEMENT

ಹಂಪಿ ವಿ.ವಿ | ಹಿಂದಿನ ಕುಲಪತಿಯ ಪ್ರಯಾಣ, ಅತಿಥಿ ಸತ್ಕಾರಕ್ಕೆ ₹51.15 ಲಕ್ಷ!

ಹಿಂದಿನ ಕುಲಪತಿ 2 ವರ್ಷದಲ್ಲಿ ತೋರಿಸಿದ ಖರ್ಚಿನ ವಿವರಣೆ ಒಪ್ಪದ ಲೆಕ್ಕಪರಿಶೋಧನಾಧಿಕಾರಿಗಳು

ಎಂ.ಜಿ.ಬಾಲಕೃಷ್ಣ
Published 4 ನವೆಂಬರ್ 2024, 5:39 IST
Last Updated 4 ನವೆಂಬರ್ 2024, 5:39 IST
ಸ.ಚಿ. ರಮೇಶ್‌
ಸ.ಚಿ. ರಮೇಶ್‌   

ಹೊಸಪೇಟೆ (ವಿಜಯನಗರ): ಹಂಪಿಯ ಕನ್ನಡ ವಿಶ್ವವಿದ್ಯಾಲಯ ಈಗ ದೊಡ್ಡ ಪ್ರಮಾಣದಲ್ಲಿ ಆರ್ಥಿಕ ಸಂಕಷ್ಟ ಎದುರಿಸುತ್ತಿರುವುದಕ್ಕೆ ಕಾರಣ ಈ ಹಿಂದಿನ ಕುಲಪತಿ ಪ್ರೊ.ಸ.ಚಿ.ರಮೇಶ್‌ ಅವಧಿಯಲ್ಲಿನ ಅಕ್ರಮಗಳು ಎಂಬುದು ಮೇಲಿಂದ ಮೇಲೆ ಸಾಬೀತಾಗುತ್ತಿದ್ದು, 2021–22 ಮತ್ತು 2022–23ನೇ ಸಾಲಿನಲ್ಲಿ ಅವರು ತಮ್ಮ ಪ್ರಯಾಣ ಮತ್ತು ಅತಿಥಿ ಸತ್ಕಾರಗಳಿಗೆ ₹51.15 ಲಕ್ಷ ಬಳಸಿಕೊಂಡಿದ್ದು ತೀವ್ರ ಆಕ್ಷೇಪಕ್ಕೆ ಗುರಿಯಾಗಿದೆ.

ವಿಶ್ವವಿದ್ಯಾಲಯದಲ್ಲಿ ಕಳೆದ ಸೆಪ್ಟೆಂಬರ್ 24ರಂದು ನಡೆದ ಲೆಕ್ಕಪರಿಶೋಧನಾ ವರದಿಯ ಪುನರ್ ಪರಿಶೀಲನೆ ಸಭೆಯಲ್ಲಿ ಈ ಅವ್ಯವಹಾರದ ಬಗ್ಗೆ ನೀಡಲಾದ ವಿವರಣೆಗಳನ್ನು ಕರ್ನಾಟಕ ರಾಜ್ಯ ಲೆಕ್ಕಪತ್ರ ಮತ್ತು ಲೆಕ್ಕ ಪರಿಶೋಧನೆ ಇಲಾಖೆಯ ಕಲಬುರ್ಗಿ ಪ್ರಾಂತೀಯ ಕಚೇರಿಯ ಲೆಕ್ಕಪರಿಶೋಧನಾಧಿಕಾರಿಗಳು ಒಪ್ಪಿಕೊಂಡಿಲ್ಲ ಹಾಗೂ ಸೂಕ್ತ ವಿವರಣೆ ನೀಡುವವರೆಗೆ ವರದಿಯನ್ನು ಆಕ್ಷೇಪಣೆಯಲ್ಲಿಡಲಾಗಿದೆ ಎಂದು ತಿಳಿಸಿದ್ದಾರೆ. ಇದಕ್ಕೆ ಸಬಂಧಿಸಿದ ದಾಖಲೆಗಳು ‘ಪ್ರಜಾವಾಣಿ’ಗೆ ಲಭ್ಯವಾಗಿವೆ.

ಎಷ್ಟು ವೆಚ್ಚ: ಪ್ರಯಾಣ, ಅತಿಥಿ ಸತ್ಕಾರಗಳಿಗಾಗಿ 2021–22ರಲ್ಲಿ ₹₹23.10 ಲಕ್ಷ ಹಾಗೂ 2022–23ರಲ್ಲಿ ₹28.05 ಲಕ್ಷ  (ಒಟ್ಟು ₹51.15 ಲಕ್ಷ) ಮುಂಗಡ ಪಡೆದು ಹೊಂದಾಣಿಕೆ ಮಾಡಲಾಗಿದೆ. ಇದಕ್ಕೆ ಸಮರ್ಪಕ ವಿವರಣೆ ನೀಡಿಲ್ಲ, ಪ್ರವಾಸದ ವಿವರಗಳು ಇಲ್ಲ. ಕೇವಲ ಮೂರು ಏಜೆನ್ಸಿಯವರಿಂದ ಬಿಲ್‌ ಪಡೆದು, ಒಬ್ಬರ ಕೈಬರಹದಲ್ಲೇ ಎಲ್ಲಾ ಬಿಲ್‌ಗಳೂ ಇರುವುದನ್ನು ಲೆಕ್ಕಪರಿಶೋಧನಾಧಿಕಾರಿಗಳು ಬೆಟ್ಟುಮಾಡಿ ತೋರಿಸಿದ್ದಾರೆ.

ADVERTISEMENT

ಹೂವಿನ ಬೊಕ್ಕೆ, ಹಣ್ಣಿನ ಕಾಣಿಕೆ ಬುಟ್ಟಿ, ಡ್ರೈಫ್ರೂಟ್ಸ್‌ ಬಾಕ್ಸ್‌ಗಳ ಮತ್ತು ಶಾಲುಗಳ ಬಿಲ್‌ಗಳನ್ನು ಲಗತ್ತಿಸಲಾಗಿದ್ದು, ದಾಸ್ತಾನು ಮತ್ತು ವಿತರಣೆ ಪುಸ್ತಕದಲ್ಲಿ ವಿವರಗಳು ಇಲ್ಲ. ಊಟದ ಬಿಲ್‌ಗಳು ಸಹ ಬರೋಬ್ಬರಿ ಇದ್ದು, ಮಟನ್‌/ಚಿಕನ್‌ ಸಹಿತ ಭರ್ಜರಿ ಭೋಜನದ ಬಿಲ್‌, ದುಬಾರಿ ವಸತಿ ವೆಚ್ಚದ ಬಿಲ್‌ ಹಾಕಲಾಗಿದೆ. ಕರ್ನಾಟಕ ನಾಗರಿಕ ಸೇವಾ ನಿಯಮ 451ರ ಪ್ರಕಾರ ಅರ್ಹ ಇರುವ ದಿನಭತ್ಯೆಯನ್ನು ಮಾತ್ರ ಪಾವತಿಸಲು ಅವಕಾಶ ಇದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಹಿಂದಿನ ಕುಲಪತಿ ಅವರು ಮಾಡಿರುವ ಖರ್ಚುಗಳ ವಿವರ ಗಮನಿಸಿದರೆ ಕರ್ನಾಟಕ ಆರ್ಥಿಕ ಸಂಹಿತೆ ಅನುಚ್ಛೇದ 15 ಮತ್ತು 16ರ ಸೂತ್ರಗಳನ್ನು ಪಾಲಿಸಿಲ್ಲ ಎಂಬುದು ಸ್ಪಷ್ಟ. ಅನುಚ್ಛೇದ 25ರ ಪ್ರಕಾರ ಶಂಕಾಸ್ಪದ ಕ್ಲೇಮುಗಳಾಗಿರುವುದರಿಂದ ಪಾವತಿಯಾದ ₹51.15 ಲಕ್ಷವನ್ನು ಸೂಕ್ತ ವಿವರಣೆ ನೀಡುವವರೆಗೆ ಆಕ್ಷೇಪಣೆಯಲ್ಲಿಡಲಾಗಿದೆ ಎಂದು ಲೆಕ್ಕಪರಿಶೋಧನಾಧಿಕಾರಿಗಳು ಷರಾ ಬರೆದಿದ್ದಾರೆ.

ಕುಲಪತಿ ಹೇಳಿದಂತೆ ನಡೆದೆ: ಸಭೆಯಲ್ಲಿ ಹಾಜರಿದ್ದ ಅಂದಿನ ಕುಲಪತಿ ಅವರ ಆಪ್ತ ಕಾರ್ಯದರ್ಶಿ ಮೋಹನ್‌ ಅವರು ತಾವು ಕುಲಪತಿ ಸೂಚಿಸಿದಂತೆ ನಡೆದುಕೊಂಡಿದ್ದಾಗಿ ವಿವರಣೆ ನೀಡಿದರು ಎಂದು ಮೂಲಗಳು ತಿಳಿಸಿವೆ. ಮಾಜಿ ಕುಲಪತಿಯವರಿಂದ ದುಡ್ಡು ವಸೂಲಿ ಮಾಡಿಕೊಡಿ ಇಲ್ಲವೇ ನಿಮಗೇ ಈ ಉರುಳು ಸುತ್ತಿಕೊಳ್ಳುತ್ತದೆ ಎಂಬ ಪರೋಕ್ಷ ಎಚ್ಚರಿಕೆಯನ್ನು ಲೆಕ್ಕಪರಿಶೋಧನಾಧಿಕಾರಿಗಳು ನೀಡಿದರು ಎಂದು ಹೇಳಲಾಗಿದೆ.

‘ಹಿಂದಿನ ಲೋಪಗಳಿಗೆ ಇಂದು ಶಿಕ್ಷೆ’

‘ಲೆಕ್ಕಪರಿಶೋಧನಾಧಿಕಾರಿಗಳು ಸಭೆ ಮಾಡಿದ್ದು ನಿಜ ಆಕ್ಷೇಪಣೆ ಸಲ್ಲಿಸಿದ್ದೂ ನಿಜ. ಹಿಂದೆ ಆದ ಲೋಪಗಳಿಗೆ ಇಂದು ವಿಶ್ವವಿದ್ಯಾಲಯ ಶಿಕ್ಷೆ ಅನುಭವಿಸುತ್ತಿದೆ. ತಪ್ಪು ಎಸಗಿದವರ ವಿರುದ್ಧ ಶಿಸ್ತಿನ ಕ್ರಮ ನಾನು ಕೈಗೊಳ್ಳುವಂತಿಲ್ಲ ಸರ್ಕಾರವೇ ಅದನ್ನು ನಿರ್ಧರಿಸುತ್ತದೆ. ನಾನಂತೂ ಈಗ ಅಧಿಕೃತ ಕೆಲಸಗಳಿಗೂ ಬಹುತೇಕ ಬಸ್ಸಲ್ಲೇ ಓಡಾಡುತ್ತೇನೆ’ ಎಂದು ಕುಲಪತಿ ಪ್ರೊ.ಡಿ.ವಿ.ಪರಮಶಿವಮೂರ್ತಿ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.