ADVERTISEMENT

ಹಂಪಿಯಲ್ಲಿ ಹಿಂದೂ ಸಂಪ್ರದಾಯದಂತೆ ಬೆಲ್ಜಿಯಂ ಯುವತಿ–ಹಂಪಿ ಯುವಕನ ಮದುವೆ

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2022, 6:30 IST
Last Updated 25 ನವೆಂಬರ್ 2022, 6:30 IST
ಬೆಲ್ಜಿಯಂ ಯುವತಿ–ಹಂಪಿ ಯುವಕನ ಮದುವೆ
ಬೆಲ್ಜಿಯಂ ಯುವತಿ–ಹಂಪಿ ಯುವಕನ ಮದುವೆ   

ಹೊಸಪೇಟೆ (ವಿಜಯನಗರ): ಬೆಲ್ಜಿಯಂ ದೇಶದ ಕೆಮಿಲ್‌ ಹಾಗೂ ಪ್ರವಾಸಿ ಮಾರ್ಗದರ್ಶಿ (ಗೈಡ್‌) ಅನಂತರಾಜು ಅವರ ಮದುವೆ ಇಲ್ಲಿನ ಹಂಪಿ ವಿರೂಪಾಕ್ಷೇಶ್ವರ ದೇವಸ್ಥಾನದಲ್ಲಿ ಶುಕ್ರವಾರ ಹಿಂದೂ ಸಂಪ್ರದಾಯದಂತೆ ನೆರವೇರಿತು.

ವಿರೂಪಾಕ್ಷನ ಸನ್ನಿಧಿಯಲ್ಲಿ ಶುಕ್ರವಾರ ಬೆಳಿಗ್ಗೆ ಕುಂಭ ಲಗ್ನದಲ್ಲಿ ಶಾಸ್ತ್ರೋಕ್ತವಾಗಿ ಇಬ್ಬರು ಸಪ್ತಪದಿ ತುಳಿದರು. ವಧು–ವರರ ಕುಟುಂಬದವರು, ಸಂಬಂಧಿಕರು, ಪ್ರವಾಸಿ ಮಾರ್ಗದರ್ಶಿಗಳು ಉಪಸ್ಥಿತರಿದ್ದರು. ವಿದೇಶಿ ಯುವತಿಯೊಂದಿಗೆ ಹಂಪಿ ಜನತಾ ಕಾಲೊನಿ ಯುವಕ ವಿವಾಹವಾಗುತ್ತಿರುವುದನ್ನು ಪ್ರವಾಸಿಗರು ಕೂಡ ಕೆಲಹೊತ್ತು ನಿಂತು ಕಣ್ತುಂಬಿಕೊಂಡರು.

ಗುರುವಾರ ಇಬ್ಬರ ನಿಶ್ಚಿತಾರ್ಥವಾಗಿತ್ತು. ಕೆಮಿಲ್‌ ಅವರು ಐದು ವರ್ಷಗಳ ಹಿಂದೆ ಹಂಪಿ ವೀಕ್ಷಣೆಗೆ ಬಂದಿದ್ದರು. ಆಗ ಅನಂತರಾಜು ಅವರ ಪರಿಚಯವಾಗಿತ್ತು. ಕೆಮಿಲ್‌ ಅವರು ಬೆಲ್ಜಿಯಂಕ್ಕೆ ಹಿಂತಿರುಗಿದ ನಂತರವೂ ಇಬ್ಬರು ಸಂಪರ್ಕದಲ್ಲಿದ್ದರು. ಪರಿಚಯ, ಸ್ನೇಹಕ್ಕೆ ತಿರುಗಿ ಅನಂತರ ಇಬ್ಬರ ನಡುವೆ ಪ್ರೇಮಾಂಕುರವಾಗಿದೆ. ಹಿಂದೂ ಸಂಸ್ಕೃತಿ, ಸಂಪ್ರದಾಯ, ಆಚರಣೆ, ಧಾರ್ಮಿಕ ನಂಬಿಕೆ, ಕೌಟುಂಬಿಕ ಪದ್ಧತಿಗೆ ಕೆಮಿಲ್‌ ಮಾರು ಹೋಗಿದ್ದರು. ಇಬ್ಬರ ಕುಟುಂಬದವರು ಮದುವೆಗೆ ಒಪ್ಪಿಗೆ ಸೂಚಿಸಿದ್ದರಿಂದ ಶುಕ್ರವಾರ ದಾಂಪತ್ಯ ಜೀವನಕ್ಕೆ ಕಾಲಿರಿಸಿದರು.

ADVERTISEMENT

ವಧು–ವರರು, ಅವರ ಕುಟುಂಬ ಸದಸ್ಯರು ‘ಪ್ರಜಾವಾಣಿ’ ಜೊತೆ ಮಾತನಾಡಲು ನಿರಾಕರಿಸಿದರು. ‘ಇದು ನಿಮ್ಮ ಖಾಸಗಿ ವಿಷಯ. ದಯವಿಟ್ಟು ಏನೂ ಬೇಡ’ ಎಂದಷ್ಟೇ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.