ADVERTISEMENT

ಹಂಪಿ ಕನ್ನಡ ವಿಶ್ವವಿದ್ಯಾಲಯ | ಬೋಧಕರಿಲ್ಲ, ಸಂಶೋಧನೆಯೂ ಇಲ್ಲ

ಆತಂಕದಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯದ ಬೋಧನಾ ಗುಣಮಟ್ಟ

ಎಂ.ಜಿ.ಬಾಲಕೃಷ್ಣ
Published 18 ಜೂನ್ 2024, 5:59 IST
Last Updated 18 ಜೂನ್ 2024, 5:59 IST
ಹಂಪಿ ಕನ್ನಡ ವಿಶ್ವವಿದ್ಯಾಲಯ
ಹಂಪಿ ಕನ್ನಡ ವಿಶ್ವವಿದ್ಯಾಲಯ   

ಹೊಸಪೇಟೆ (ವಿಜಯನಗರ): ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಬೋಧಕರ ಕೊರತೆ ನೀಗಿಸುವ ಪ್ರಯತ್ನ ನಡೆಯುತ್ತಿದ್ದರೂ, ಹಣಕಾಸು ಇಲಾಖೆಯಿಂದ ಒಪ್ಪಿಗೆಯೇ ಸಿಗುತ್ತಿಲ್ಲ. ಹೀಗಾಗಿ ಸಂಶೋಧನಾ ಕೆಲಸಗಳೂ ಬಹಳಷ್ಟು ಕಡಿಮೆಯಾಗತೊಡಗಿವೆ.

ಮಲ್ಲಿಕಾ ಘಂಟಿ ಅವರು ಕುಲಪತಿಯಾಗಿದ್ದ ಅವಧಿಯಲ್ಲಿ ಎಂಟು ಮಂದಿ ಬೋಧಕರ ನೇಮಕಾತಿ ನಡೆದಿತ್ತು. ಅದುವೇ ಕೊನೆ. ಬಳಿಕ ಸುಮಾರು ಆರು ವರ್ಷದಿಂದ ನೇಮಕಾತಿಯೇ ನಡೆದಿಲ್ಲ. ಕುಲಪತಿ ಸ.ಚಿ.ರಮೇಶ್ ಅವಧಿಯಲ್ಲಿ ನಡೆದ ನೇಮಕಾತಿ ಪ್ರಕ್ರಿಯೆಯಲ್ಲಿ ಹಗರಣ ನಡೆದ ವಾಸನೆ ಬಡಿದ ಕಾರಣ ಅದು ಸ್ಥಗಿತಗೊಂಡಿತ್ತು.

1997ರಲ್ಲಿ ಚಂದ್ರಶೇಖರ ಕಂಬಾರ ಅವರು ಕುಲಪತಿಯಾಗಿದ್ದ ವೇಳೆ ರಾಜ್ಯದ ವಿವಿಧ ಭಾಗಗಳಿಂದ 60ಕ್ಕೂ ಅಧಿಕ ಬೋಧಕರನ್ನು ನೇಮಕ ಮಾಡಿಕೊಳ್ಳಲಾಗಿತ್ತು. ಅವರಲ್ಲಿ ಬಹುತೇಕರು ಇದೀಗ ನಿವೃತ್ತಿಯ ಹಂತಕ್ಕೆ ಬಂದಿದ್ದಾರೆ, ಕೆಲವರು ಈಗಾಗಲೇ ನಿವೃತ್ತರಾಗಿದ್ದಾರೆ. ಇನ್ನು ಕೆಲವೇ ತಿಂಗಳಲ್ಲಿ ನಾಲ್ಕೈದು ಮಂದಿ ನಿವೃತ್ತರಾಗಲಿದ್ದಾರೆ. 73 ಬೋಧಕರ ಪೈಕಿ ಸದ್ಯ 40 ಮಂದಿಯಷ್ಟೇ ಇದ್ದು, 33 ಹುದ್ದೆಗಳು ಖಾಲಿ ಇವೆ.

ADVERTISEMENT

ಕಠಿಣ ನಿಯಮ: ಕನ್ನಡ ವಿಶ್ವವಿದ್ಯಾಲಯ ಸ್ಥಾಪನೆಯಾದುದು ವಿಶೇಷ ಕಾರಣಕ್ಕೆ. ಕನ್ನಡ ನಾಡು, ನುಡಿ, ಸಂಸ್ಕೃತಿ, ಇತಿಹಾಸ ಅಧ್ಯಯನಕ್ಕಾಗಿಯೇ ಮೀಸಲಾದ ವಿಶ್ವವಿದ್ಯಾಲಯ ಇದು. ಇಲ್ಲಿ ಕಾಯಂ ಬೋಧಕರು ಮಾತ್ರ ಸಂಶೋಧನಾರ್ಥಿಗಳಿಗೆ ಮಾರ್ಗದರ್ಶನ ಮಾಡಬಹುದಷ್ಟೇ, ಅಷ್ಟಕ್ಕೂ ಅವರಿಗೆ ಎರಡು ವರ್ಷಗಳ ಸೇವಾ ಅನುಭವ ಅಗತ್ಯ. ಒಬ್ಬ ಬೋಧಕರು ಗರಿಷ್ಠ 8 ಮಂದಿಗೆ ಮಾರ್ಗದರ್ಶನ ಮಾಡಬಹದು. ಅಂದರೆ ಇಲ್ಲಿ ಬೋಧಕರ ಹುದ್ದೆ ಪೂರ್ಣ ಭರ್ತಿಗೊಂಡರೆ ಸುಮಾರು 700ರಷ್ಟು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಬಹುದು. ಸದ್ಯ ಭಾರಿ ಪ್ರಮಾಣದಲ್ಲಿ ಬೋಧಕರ ಕೊರತೆ ಇರುವ ಕಾರಣ ಸಂಶೋಧನಾರ್ಥಿಗಳ ಸಂಖ್ಯೆ ತೀರಾ ಕಡಿಮೆಯಾಗಿದೆ. ಒಬ್ಬ ಬೋಧಕ ನಿವೃತ್ತನಾದ ಎಂದರೆ ಕನಿಷ್ಠ ನಾಲ್ಕು ಸಂಶೋಧನಾರ್ಥಿ ವಿದ್ಯಾರ್ಥಿಗಳ ಅವಕಾಶ ತಪ್ಪಿತು ಎಂದೇ ಅರ್ಥ.

ಕಲ್ಯಾಣ ಕರ್ನಾಟಕದ ಎಲ್ಲಾ ಶೈಕ್ಷಣಿಕ ಸಂಸ್ಥೆಗಳಿಗೆ ಸಂವಿಧಾನದ 371 ಜೆ. ಅನ್ವಯವಾಗುತ್ತದೆ. ಅಂದರೆ ಇಲ್ಲಿನ ಶೇ 80ರಷ್ಟು ನೇಮಕಾತಿಯನ್ನು ಕಲ್ಯಾಣ ಕರ್ನಾಟಕ ಭಾಗದವರನ್ನೇ ಮೀಸಲಾತಿ ಆಧಾರದಲ್ಲಿ ತೆಗೆದುಕೊಳ್ಳಬೇಕಾಗುತ್ತದೆ. ನೇಮಕಾತಿಗೆ ಎಷ್ಟು ಬಜೆಟ್ ಬೇಕು ಎಂಬುದರ ವಿವರ ಕೇಳಿ ಹಣಕಾಸು ಇಲಾಖೆ ಮಾಹಿತಿ ಪಡೆಯುತ್ತಿದೆ, ವಿಶ್ವವಿದ್ಯಾಲಯ ಕಳುಹಿಸುತ್ತಲೇ ಇದೆ. ಆದರೆ ಬೋಧಕರ ನೇಮಕಾತಿಗೆ ಹಣಕಾಸು ಇಲಾಖೆ ಉನ್ನತ ಶಿಕ್ಷಣ ಇಲಾಖೆಗೆ ಅನುಮತಿ ನೀಡುತ್ತಲೇ ಇಲ್ಲ.

ಸಂಶೋಧನೆ ಕಡಿಮೆಯಾಗಬಾರದು ಎಂಬ ಕಾರಣಕ್ಕೆ ರಾಜ್ಯದಾದ್ಯಂತ ಇರುವ ಸುಮಾರು 22 ಕೇಂದ್ರಗಳಲ್ಲಿ ಸಂಶೋಧನಾ ವಿದ್ಯಾರ್ಥಿಗಳನ್ನು ಸೇರಿಸಿಕೊಂಡು, ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ಪ್ರಮಾಣಪತ್ರ ನೀಡುವ ವ್ಯವಸ್ಥೆ ಜಾರಿಯಲ್ಲಿದೆ. ಆದರೆ ಅಲ್ಲಿನ ಗುಣಮಟ್ಟದ ಬಗ್ಗೆ ಸಂಶಯ ಇದ್ದು, ಕನ್ನಡ ವಿಶ್ವವಿದ್ಯಾಲಯಕ್ಕೆ ಕೆಟ್ಟ ಹೆಸರು ಬಂದಿರುವ ನಿದರ್ಶನವೂ ಇದೆ. ಇದೇ ಕಾರಣಕ್ಕೆ ವಿಶ್ವವಿದ್ಯಾಲಯದಲ್ಲಿ ಕಾಯಂ ಬೋಧಕರನ್ನು ನೇಮಿಸಬೇಕು ಎಂಬ ಒತ್ತಡ ಹೆಚ್ಚುತ್ತಿದೆ.

‘ನಾವು ಸರ್ಕಾರಕ್ಕೆ ಮೇಲಿಂದ ಮೇಲೆ ಪ್ರಸ್ತಾವ ಸಲ್ಲಿಸುತ್ತಲೇ ಇದ್ದೇವೆ. ಇತರ ವಿಶ್ವವಿದ್ಯಾಲಯಗಳಲ್ಲಿ ಸಹ ಇಂತಹದೇ ಸಮಸ್ಯೆ ಇದ್ದರೂ, ನಮ್ಮಲ್ಲಿ ಅತಿಥಿ ಪ್ರಾಧ್ಯಾಪಕರಿಂದ ಸಂಶೋಧನಾರ್ಥಿಗಳಿಗೆ ಮಾರ್ಗದರ್ಶನ ನೀಡುವಂತಿಲ್ಲ ಎಂಬ ನಿಯಮ ನಮ್ಮ ಕೈ ಕಟ್ಟಿಹಾಕಿದೆ. ಸರ್ಕಾರ ನಮ್ಮ ಬೇಡಿಕೆಗೆ ಶೀಘ್ರ ಸ್ಪಂದಿಸುವ ವಿಶ್ವಾಸ ಇದೆ’ ಎಂದು ಕುಲಪತಿ ಪ್ರೊ.ಡಿ.ವಿ.ಪರಮಶಿವಮೂರ್ತಿ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರೊ.ಡಿ.ವಿ.ಪರಮಶಿವಮೂರ್ತಿ
ಕನ್ನಡ ವಿಶ್ವವಿದ್ಯಾಲಯದ ಕೆಲವು ಸಮಸ್ಯೆಗಳಿಗೆ ಸರ್ಕಾರ ಸ್ಪಂದಿಸಿದೆ ಸಂಶೋಧನೆಯ ಗುಣಮಟ್ಟ ಹೆಚ್ಚಳವಾಗಲು ಬೋಧಕರ ನೇಮಕಾತಿ ಮುಖ್ಯ ಅದಕ್ಕೆ ಸರ್ಕಾರದಿಂದ ಅನುಮತಿ ಪಡೆಯುವ ವಿಶ್ವಾಸದಲ್ಲಿದ್ದೇವೆ
ಪ್ರೊ.ಡಿ.ವಿ.ಪರಮಶಿವಮೂರ್ತಿ ಕುಲಪತಿ

4 ವಿಭಾಗಗಳಲ್ಲಿ ತಲಾ ಒಬ್ಬರೇ ಕನ್ನಡ ವಿಶ್ವವಿದ್ಯಾಲಯದ ನಾಲ್ಕು ವಿಭಾಗಗಳಲ್ಲಿ  ಸದ್ಯ ತಲಾ ಒಬ್ಬರಷ್ಟೇ ಬೋಧಕರಿದ್ದಾರೆ. ಜಾನಪದ ಅಧ್ಯಯನ ವಿಭಾಗದ ಮುಖ್ಯಸ್ಥರಾಗಿರುವ ಮೊಗಳ್ಳಿ ಗಣೇಶ್ ಮುಂದಿನ ತಿಂಗಳು ನಿವೃತ್ತರಾಗಲಿದ್ದು ಆಗ ಬೇರೆ ವಿಭಾಗದ ಒಬ್ಬರಿಗೆ ಉಸ್ತುವಾರಿ ನೀಡಬೇಕಾಗುತ್ತದೆ. ಇದೇ ರೀತಿ ಇನ್ನೂ ಕೆಲವು ವಿಭಾಗಗಳಿಗೆ ಈಗಾಗಲೇ ಬೇರೆ ವಿಭಾಗದವರನ್ನು ಹೆಚ್ಚುವರಿಯಾಗಿ ನಿಯೋಜಿಸಲಾಗಿದೆ. ಇದರಿಂದ ಸಂಶೋಧನಾ ಗುಣಮಟ್ಟ ಹೇಗೆ ಸುಧಾರಿಸುತ್ತದೆ ಎಂದು ಹಲವರು ಮೂಗು ಮುರಿಯುತ್ತಲೇ ಇದ್ದಾರೆ. ಸರ್ಕಾರ ಈ ಹಂತದಲ್ಲಾದರೂ ಬೋಧಕರ ನೇಮಕಾತಿ ಮಾಡಿದರೆ ಮಾತ್ರ 20 25 ವರ್ಷ ವಿಶ್ವವಿದ್ಯಾಲಯ ಸರಾಗವಾಗಿ ಮುನ್ನಡೆಯಲು ಸಾಧ್ಯ ಎಂದು ಶಿಕ್ಷಣ ತಜ್ಞರು ಹೇಳುತ್ತಿದ್ದಾರೆ.

371 ಜೆ: ಗುಣಮಟ್ಟದ ಮೇಲೆ ದುಷ್ಪರಿಣಾಮ? ಶೇ 80ರಷ್ಟು ಬೋಧಕರನ್ನು ಕಲ್ಯಾಣ ಕರ್ನಾಟಕ ಭಾಗದವರನ್ನೇ ನೇಮಿಸಿಕೊಳ್ಳಬೇಕಾದ ಅನಿವಾರ್ಯತೆಯಿಂದ ವಿಶ್ವವಿದ್ಯಾಲದಯ ಸಂಶೋಧನಾ ಗುಣಮಟ್ಟಕ್ಕೆ ಧಕ್ಕೆ ಬಂದಿದೆ ಎಂಬ ಆರೋಪ ಈಗಾಗಲೇ ಕೇಳಿಬಂದಿದೆ. ಮೊದಲ ಕುಲಪತಿ ಚಂದ್ರಶೇಖರ ಕಂಬಾರ ಅವರು ರಾಜ್ಯದ ವಿವಿಧ ಭಾಗದಿಂದ ನುರಿತ ತಜ್ಞ ಬೋಧಕರನ್ನಷ್ಟೇ ನೇಮಕ ಮಾಡಿದ್ದರಿಂದ ವಿಶ್ವವಿದ್ಯಾಲಯ ಇದುವರೆಗೆ ನಡೆದು ಬಂದಿದೆ ಇಲ್ಲವಾಗಿದ್ದರೆ ಅದು ಇಲ್ಲಿಯವರೆಗೆ ಉಳಿಯುತ್ತಲೇ ಇರಲಿಲ್ಲ. ಭವಿಷ್ಯದಲ್ಲಿ 371 ಜೆ ನಿಯಮದಿಂದಾಗಿ ಈ ಅವಕಾಶ ಇಲ್ಲ ವಿಶ್ವವಿದ್ಯಾಲದಯ ಭವಿಷ್ಯದ ಬಗ್ಗೆ ಆತಂಕ ಮೂಡಲು ಇದು ದೊಡ್ಡ ಕಾರಣವಾಗುತ್ತಿದೆ ಎಂದು ಹಿರಿಯ ಪ್ರಾಧ್ಯಾಪಕರೊಬ್ಬರು ಬೇಸರದಿಂದಲೇ ನುಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.