ಹೊಸಪೇಟೆ (ವಿಜಯನಗರ): ರಾಜ್ಯದಲ್ಲಿ ಬಿರುಗಾಳಿ ಎಬ್ಬಿಸಿರುವ ಶ್ರೀ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ಅಕ್ರಮ ವರ್ಗಾವಣೆಯ ಸದ್ದಿನಲ್ಲಿ ಹಂಪಿ ವಿಶ್ವವಿದ್ಯಾಲಯದ ವಾಲ್ಮೀಕಿ ಅಧ್ಯಯನ ಪೀಠದ ಅನುದಾನ ಕೊರತೆ ಕೂಗು ಅರಣ್ಯರೋದನವಾಗಿದೆ.
ಅಧ್ಯಯನ ಪೀಠಕ್ಕೆ ಒಬ್ಬ ನಿರ್ದೇಶಕರು, ಇಬ್ಬರು ಸಂಶೋಧನಾ ಸಹಾಯಕರು, ಒಬ್ಬ ಕಂಪ್ಯೂಟರ್ ಆಪರೇಟರ್, ಒಬ್ಬ ಕಿರಿಯ ಸಹಾಯಕ, ಒಬ್ಬ ಜವಾನ ಬೇಕು. ಇವರು ಯಾರೂ ಇಲ್ಲ. ವಿಶ್ವವಿದ್ಯಾಲಯದ ಅಧ್ಯಯನಾಂಗದ ನಿರ್ದೇಶಕ ಪ್ರೊ.ಅಮರೇಶ್ ಯತಗಲ್ ಅವರೇ ಪೀಠದ ಸಂಚಾಲಕರಾಗಿದ್ದು, ಸಂಚಿತ ₹15 ಲಕ್ಷ ಠೇವಣಿಗೆ ಸಿಗುವ ₹2.50 ಲಕ್ಷದಲ್ಲೇ ಪೀಠದ ಎಲ್ಲಾ ಕೆಲಸಗಳನ್ನು, ವಿಚಾರಗೋಷ್ಠಿಗಳನ್ನು ನಡೆಸಬೇಕು. ಹೀಗಾಗಿ ಕಳೆದ ನಾಲ್ಕು ವರ್ಷಗಳಿಂದ ಪೀಠದ ಬಹುತೇಕ ಕೆಲಸಗಳೂ ನಿಂತೇಹೋಗಿವೆ.
ಕೆಲಸ ನಿಂತು ಹೋಗಿದ್ದಕ್ಕೆ ₹50 ಲಕ್ಷ ವೆಚ್ಚದಲ್ಲಿ ನಿರ್ಮಿಸಿದ ಭವ್ಯ ಕಟ್ಟಡದ ಸುತ್ತಮುತ್ತ ಬೆಳೆದ ಗಿಡ ಗಂಟಿಗಳೇ ಸಾಕ್ಷಿ ಹೇಳುತ್ತಿದ್ದು, ವಿಶ್ವವಿದ್ಯಾಲಯದ ಅನುದಾನ ಕೊರತೆಯ ಗೋಳನ್ನು ಮೌನವಾಗಿ ಸಾರುತ್ತಿದೆ.
‘ವಾಲ್ಮೀಕಿ ಅಧ್ಯಯನ ಪೀಠದಲ್ಲಿ ದುಡ್ಡೇ ಇಲ್ಲ, ವಾಲ್ಮೀಕಿ ಬುಡಕಟ್ಟು ಸಂಶೋಧನಾ ಕೇಂದ್ರ ಸ್ಥಾಪಿಸಲು ಕಳೆದ ವರ್ಷ ₹2 ಕೋಟಿ ಕೊಡಿ, ಒಂದಿಷ್ಟು ಶಾಶ್ವತ ಸಂಶೋಧನಾ ಕೆಲಸ ಮಾಡಿ ದಾಖಲೀಕರಣ ಮಾಡುತ್ತೇವೆ ಎಂಬ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಿದ್ದೆವು. ಅದಕ್ಕೆ ಉತ್ತರವೇ ಬಂದಿಲ್ಲ’ ಎಂದು ಕುಲಪತಿ ಪ್ರೊ.ಡಿ.ವಿ.ಪರಮಶಿವಮೂರ್ತಿ ‘ಪ್ರಜಾವಾಣಿ’ಗೆ ಬೇಸರದಿಂದಲೇ ನುಡಿದರು.
‘ವಾಲ್ಮೀಕಿ ರಾಮಾಯಣದ ವಿವಿಧ ಆಯಾಮಗಳಲ್ಲಿ ಕೃತಿಗಳನ್ನು ಪ್ರಕಟಿಸುವುದು, ವಾಲ್ಮೀಕಿ ಸಮುದಾಯ ಮತ್ತು ಚರಿತ್ರೆ ಕುರಿತು ಕೃತಿಗಳನ್ನು ಹೊರತರುವುದು, ವಿಚಾರ ಸಂಕಿರಣ, ಕಾರ್ಯಾಗಾರ ಮತ್ತು ಕಮ್ಮಟ ನಡೆಸುವುದು, ವಾಲ್ಮೀಕಿ ಜನಾಂಗದ ಮಹಾಪುರುಷರ ಪರಿಚಯ ಮಾಲಿಕೆ ಪ್ರಕಟಿಸುವುದು, ಈ ಜನಾಂಗ ಕುರಿತ ಜನಜಾಗೃತಿ ಕಾರ್ಯಕ್ರಮ ನಡೆಸುವ ಯೋಜನೆ ರೂಪಿಸಲಾಗಿದೆ. ಆದರೆ ಅನುದಾನದ ಕೊರತೆಯಿಂದ ಯಾವ ಯೋಜನೆಯೂ ಕೈಗೂಡುತ್ತಿಲ್ಲ. ಇದುವರೆಗೆ 8 ಕೃತಿಗಳಷ್ಟೇ ಹೊರಬಂದಿವೆ. ಮೂರು ಕೃತಿಗಳು ಪ್ರಕಟಣೆಗೆ ಬಾಕಿ ಇವೆ’ ಎಂದು ಪೀಠದ ಸಂಚಾಲಕ ಪ್ರೊ.ಅಮರೇಶ್ ಯತಗಲ್ ಹೇಳಿದರು.
‘ವಾಲ್ಮೀಕಿ ಸಮುದಾಯದ ಅಭಿವೃದ್ಧಿಗೇ ಇರುವಂತಹ ನಿಗಮದ ದುಡ್ಡು ಯಾರದ್ದೋ ಜೇಬು ಸೇರಿತ್ತು. ನಿಗಮಕ್ಕೆ ನೀಡುವ ದುಡ್ಡಿನಲ್ಲಿ ಒಂದಿಷ್ಟು ಪಾಲನ್ನು ರಾಜ್ಯದ ವಿವಿಧ ವಿಶ್ವವಿದ್ಯಾಲಯಗಳಲ್ಲಿರುವ ವಾಲ್ಮೀಕಿ ಪೀಠಗಳಿಗೆ ನೀಡುವ ವ್ಯವಸ್ಥೆ ಆಗಿದ್ದರೆ ಇಂತಹ ಹಗರಣಗಳಿಗೆ ಅವಕಾಶ ಆಗುತ್ತಿರಲಿಲ್ಲವೇನೋ’ ಎಂದು ವಿಶ್ವವಿದ್ಯಾಲಯದ ಹಿರಿಯ ಪ್ರಾಧ್ಯಾಪಕರೊಬ್ಬರು ಅಭಿಪ್ರಾಯಪಟ್ಟರು.
ವಾಲ್ಮೀಕಿ ಪೀಠಕ್ಕೆ ಹೆಚ್ಚಿನ ಅನುದಾನ ನೀಡಿದರೆ ನಶಿಸಿ ಹೋಗಬಹುದಾದ ಬುಡಕಟ್ಟು ಸಮುದಾಯಗಳ ಕುರಿತು ಸಂಶೋಧನೆ ನಡೆಸಲು ಅವಕಾಶ ಆಗುತ್ತದೆಪ್ರೊ. ಡಿ.ವಿ.ಪರಮಶಿವಮೂರ್ತಿ ಕುಲಪತಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.