ಹೊಸಪೇಟೆ : ಹಂಪಿ ಉತ್ಸವಕ್ಕೆ ವಿಶ್ವ ಪಾರಂಪರಿಕ ತಾಣ ಹಂಪಿ ಮತ್ತು ಹೊಸಪೇಟೆ ಸಜ್ಜಾಗಿದ್ದು, ರಾಜ್ಯ ಸರ್ಕಾರ ಮಂಜೂರು ಮಾಡಿದ ₹ 14 ಕೋಟಿ ಅನುದಾನದಲ್ಲಿ ಮೂರು ದಿನಗಳ ಉತ್ಸವ ಶುಕ್ರವಾರ ಆರಂಭಗೊಳ್ಳಲಿದೆ.
‘ಮಳೆ ಕೊರತೆಯಿಂದ ಈ ಬಾರಿ ಕಮಲಾಪುರ ಕೆರೆಯಲ್ಲಿ ಸಾಹಸ ಜಲಕ್ರೀಡೆಗಳನ್ನು ಹಮ್ಮಿಕೊಳ್ಳುತ್ತಿಲ್ಲ. ಉಳಿದಂತೆ ಈ ಹಿಂದಿನ ವರ್ಷಗಳಲ್ಲಿ ನಡೆದ ಬಹುತೇಕ ಮನರಂಜನಾ ಕಾರ್ಯಕ್ರಮಗಳು, ಸ್ಪರ್ಧೆಗಳು, ಪ್ರದರ್ಶನಗಳು ಇರಲಿವೆ. ಹಂಪಿಯನ್ನು ಹೆಲಿಕಾಪ್ಟರ್‌ನಿಂದ ನೋಡುವಂತಹ ‘ಹಂಪಿ ಬೈ ಸ್ಕೈ’ ಕಾರ್ಯಕ್ರಮಕ್ಕೆ ಗುರುವಾರ ಬೆಳಿಗ್ಗೆ ಚಾಲನೆ ನೀಡಲಾಗುವುದು’ ಎಂದು ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್ ಬುಧವಾರ ತಮ್ಮ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
‘ಹಂಪಿ ಉತ್ಸವಕ್ಕೆ ₹17.50 ಕೋಟಿಗೆ ಬೇಡಿಕೆ ಸಲ್ಲಿಸಲಾಗಿತ್ತು. ಸರ್ಕಾರ ₹14 ಕೋಟಿ ಮಂಜೂರು ಮಾಡಿದೆ. ಲಭ್ಯ ಅನುದಾನದಲ್ಲಿ ಉತ್ಸವಕ್ಕೆ ಯಾವುದೇ ಚ್ಯುತಿ ಬಾರದಂತೆ ಕಾರ್ಯಕ್ರಮಗಳನ್ನು ಸಂಯೋಜಿಸಲಾಗುವುದು. ಜಿಲ್ಲೆ ಮತ್ತು ಸುತ್ತಮುತ್ತಲಿನ ಜಿಲ್ಲೆಗಳ ಜನರಿಗೆ ಗರಿಷ್ಠ ಮನರಂಜನೆ ಒದಗಿಸುವ ನಿಟ್ಟಿನಲ್ಲಿ ಎಲ್ಲಾ ಸಿದ್ಧತೆ ಮಾಡಲಾಗಿದೆ. ಹೊಸಪೇಟೆಯಿಂದ 80 ಬಸ್‌ಗಳು ನಿರಂತರ ಉಚಿತ ಸೇವೆ ಒದಗಿಸಲಿದ್ದರೆ, ಜಿಲ್ಲೆಯ ಎಲ್ಲಾ 137 ಗ್ರಾಮ ಪಂಚಾಯಿತಿಗಳಿಂದಲೂ ಬಸ್ ಮೂಲಕ ಉಚಿತವಾಗಿ ಜನರನ್ನು ಕರೆತರುವ ವ್ಯವಸ್ಥೆ ಮಾಡಲಾಗಿದೆ’ ಎಂದು ಅವರು ವಿವರಿಸಿದರು.
ಬೈಕ್ ರ‍್ಯಾಲಿ: ಗುರುವಾರ ಬೆಳಿಗ್ಗೆ 8.30ಕ್ಕೆ ಜಿಲ್ಲಾಧಿಕಾರಿ ಕಚೇರಿಯಿಂದ ಹಂಪಿಯವರೆಗೆ ಮಾನ್ಯ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಬೈಕ್ ರ್ಯಾಲಿ ಜರುಗಲಿದ್ದು ಈಗಾಗಲೇ ನಗರದ 50ಕ್ಕೂ ಹೆಚ್ಚು ವಿವಿಧ ಸಂಘ ಸಂಸ್ಥೆಗಳು ಸದರಿ ರ್ಯಾಲಿಯಲ್ಲಿ ಭಾಗವಹಿಸಲು ನೊಂದಣಿಯನ್ನು ಮಾಡಿಕೊಂಡಿವೆ. ಬೆಳಿಗ್ಗೆ 10ರಿಂದ ‘ಹಂಪಿ ಬೈ ಸ್ಕೈ’ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು. ಮಧ್ಯಾಹ್ನ 3ಕ್ಕೆ ವಡಕರಾಯನ ದೇವಸ್ಥಾನದಿಂದ ಜಿಲ್ಲಾ ಕ್ರೀಡಾಂಗಣದವರೆಗೆ ವಸಂತ ವೈಭವ ಭವ್ಯ ಮೆರವಣಿಗೆ ಕಾರ್ಯಕ್ರಮ ಜರುಗಲಿದೆ. ಈ ಮೆರವಣಿಗೆಯಲ್ಲಿ ಜಿಲ್ಲೆಯ ಹಾಗೂ ಇತರೆ ಜಿಲ್ಲೆಗಳ 70 ರಿಂದ 100 ವಿಶೇಷ ಕಲಾ ತಂಡಗಳು ಭಾಗವಹಿಸುತ್ತವೆ. ಹಂಪಿಯ ದೇವಸ್ಥಾನ ಲಕ್ಷ್ಮೀ ಆನೆಯೊಂದಿಗೆ ಪಲ್ಲಕ್ಕಿ ಮೆರವಣಿಗೆ ನಗರದ ಜನರಿಗೆ ಭಕ್ತಿ ಸಿಂಚನವನ್ನು ಉಂಟು ಮಾಡುವ ಮೂಲಕ ನಗರದ ಜನರಿಗೆ ಉತ್ಸವದ ಸವಿರುಚಿಯನ್ನು ಉಣಬಡಿಸಲಿವೆ.
ಫೆ.2ರಂದು ಬೆಳಿಗ್ಗೆ 10ಕ್ಕೆ ಕಮಲಾಪುರದ ಹಂಪಿ ವಿಶ್ವ ಪಾರಂಪರಿಕ ತಾಣ ನಿರ್ವಹಣಾ ಪ್ರಾಧಿಕಾರ (ಹವಾಮ) ಕಚೇರಿಯ ಹಿಂಭಾಗದ ಆವರಣದಲ್ಲಿ ಅತ್ಯುತ್ತಮವಾದ ಎತ್ತುಗಳ ಪ್ರದರ್ಶನಕ್ಕೆ ಚಾಲನೆ ನೀಡಲಾಗುವುದು.ಅದೇ ಹೊತ್ತಲ್ಲಿ ವಿರೂಪಾಕ್ಷೇಶ್ವರ ದೇವಸ್ಥಾನ ವೇದಿಕೆಯಲ್ಲಿ ಹಂಪಿ ಇತಿಹಾಸದ ಕುರಿತು ವಿಚಾರ ಸಂಕೀರ್ಣ ಹಾಗೂ ಕವಿಗೋಷ್ಠಿ ಜರುಗಲಿದೆ. 11ಕ್ಕೆ ವಸ್ತು ಪ್ರದರ್ಶನ ಹಾಗೂ ಫಲಪುಷ್ಪ ಪ್ರದರ್ಶನಕ್ಕೆ ಚಾಲನೆ ನೀಡಲಾಗುವುದು. ಅದೇ ದಿನ ಬೆಂಗಳೂರಿನಿಂದ 50ಕ್ಕೂ ಹೆಚ್ಚು ಬೈಕ್‌ಗಳಲ್ಲಿ ಹಂಪಿಗೆ ಬರಲಿರುವ ಜನರು, ಹಂಪಿ ಉತ್ಸವದ ಸಂದೇಶ ಸಾರಲಿದ್ದಾರೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.
ರಾತ್ರಿ 8ಕ್ಕೆ ಚಾಲನೆ: ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ರಾತ್ರಿ 8 ಗಂಟೆಗೆ ಹಂಪಿ ಉತ್ಸವಕ್ಕೆ ವಿಧ್ಯುಕ್ತ ಚಾಲನೆ ನೀಡಲಿದ್ದಾರೆ. ಹಲವು ಫೂರ್ವ ನಿರ್ಧರಿತ ಕಾರ್ಯಕ್ರಮಗಳು ಇರುವ ಕಾರಣ ಅವರು ಈ ಬಾರಿ ವಿರೂಪಾಕ್ಷನ ದರ್ಶನ ಪಡೆಯುತ್ತಿಲ್ಲ’ ಎಂದು ಶಾಸಕ ಎಚ್.ಆರ್.ಗವಿಯಪ್ಪ ಹೇಳಿದರು.
ಉದ್ಘಾಟನಾ ದಿನ ರಾತ್ರಿ ಪ್ರವೀಣ್ ಗೋಡ್ಖಿಂಡಿ ಅವರಿಂದ ಕೊಳಲು ವಾದನ ಹಾಗೂ 10ರಿಂದ ವಿಜಯಪ್ರಕಾಶ್ ಮತ್ತು ತಂಡದವರಿಂದ ಸಂಗೀತ ರಸಮಂಜರಿ ಇರಲಿದೆ.
ಫೆ.3ರಂದು ಹವಾಮ ಕಚೇರಿಯ ಹಿಂಭಾಗ ಬೆಳಿಗ್ಗೆ 10ಕ್ಕೆ ಕುರಿಗಳ ಪ್ರದರ್ಶನ ಇರಲಿದೆ. ಬೆಳಿಗ್ಗೆ 11ಕ್ಕೆ ಹೊಸ ಮಲಪನಗುಡಿಯ ಹತ್ತಿರ ಸಜ್ಜುಗೊಳಿಸಿರುವ ಅಖಾಡದಲ್ಲಿ ಕುಸ್ತಿ, ಭಾರ ಎತ್ತುವ ಸ್ಪರ್ಧೆ ಹಾಗೂ ಚಕ್ಕಡಿಯನ್ನು ಬಿಚ್ಚಿ ತೊಡಿಸುವ ಸ್ಪರ್ಧೆಗೆ ಚಾಲನೆ ನೀಡಲಾಗುತ್ತದೆ.
ಸಂಜೆಯ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ನಟ ದರ್ಶನ್ ಪ್ರಮುಖ ಆಕರ್ಷಣೆಯಾಗಿರಲಿದ್ದಾರೆ. ಕೋಲ್ಕೊತ್ತದ ಗೋಲ್ಡನ್ ಗರ್ಲ್ಸ್ ತಂಡದಿಂದ ನೃತ್ಯ, ವೈಜಯಂತಿ ಕಾಶಿ ಅವರಿಂದ ನೃತ್ಯ ರೂಪಕ, ಸಂಗೀತ ನಿರ್ದೇಶಕ ವಿ.ಹರಿಕೃಷ್ಣ ತಂಡದವರಿಂದ ರಸಮಂಜರಿ ನಡೆಯಲಿದೆ.
ಫೆ.4ರಂದು ಸಂಜೆ 3ಕ್ಕೆ ಉದ್ದಾನ ವೀರಭದ್ರೇಶ್ವರ ದೇವಸ್ಥಾನದಿಂದ ಶ್ರೀ ವಿರೂಪಾಕ್ಷೇಶ್ವರ ದೇವಸ್ಥಾನದವರೆಗೆ ಜಾನಪದ ವಾಹಿನಿ ಮೆರವಣಿಗೆ ಕಾರ್ಯಕ್ರಮ ಜರುಗಲಿದೆ. ಸಂಜೆ 7ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು, ನಟ ವಿ.ರವಿಚಂದ್ರನ್ ಪ್ರಮುಖ ಆಕರ್ಷಣೆಯಾಗಿರಲಿದ್ದಾರೆ. ಆ ದಿನ ರಾಗಿಣಿ ದ್ವಿವೇದಿ, ಸಂಯುಕ್ತಾ ಹೆಗ್ಡೆ, ಅಜಯ್ ರಾವ್ ಸಹಿತ ಹಲವು ಚಲನಚಿತ್ರ ನಟ, ನಟಿಯರು ನೃತ್ಯ ಕಾರ್ಯಕ್ರಮ ನಡೆಸಿಕೊಡಲಿದ್ದು, ಸಾಧು ಕೋಕಿಲಾ ತಂಡದ ರಸಮಂಜರಿಯೊಂದಿಗೆ ಹಂಪಿ ಉತ್ಸವಕ್ಕೆ ತೆರೆ ಬೀಳಲಿದೆ. ಗಾಯತ್ರಿ ಪೀಠದ ಪ್ರಧಾನ ವೇದಿಕೆಯ ಜತೆಗೆ ಇತರ ಮೂರು ವೇದಿಕೆಗಳಲ್ಲಿ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ಆನೆ ಲಾಯ, ಕುದುರೆ ಲಾಯ ಪ್ರದೇಶದಲ್ಲಿ ‘ವಿಜಯನಗರ ವೈಭವ‘ ಧ್ವನಿ ಬೆಳಕಿನ ಕಾರ್ಯಕ್ರಮ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.
ಜಿಲ್ಲಾ ಪೊಲೀಸ್ ವರಿಷ್ಠ ಶ್ರೀಹರಿಬಾಬು ಬಿ.ಎಲ್., ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಸದಾಶಿವ ಪ್ರಭು ಬಿ., ಹೆಚ್ಚುವರಿ ಜಿಲ್ಲಾಧಿಕಾರಿ ಅನುರಾಧಾ ಜಿ. ಇದ್ದರು.
2 ಸಾವಿರ ಸಾವಿರ ಪೊಲೀಸರ ನಿಯೋಜನೆ
‘ಹಂಪಿ ಉತ್ಸವದ ವೇಳೆ ಭದ್ರತಾ ಕಾರ್ಯಗಳಿಗಾಗಿ ಜಿಲ್ಲೆ ಮತ್ತು ಹೊರ ಜಿಲ್ಲೆಗಳ ಎರಡು ಸಾವಿರದಷ್ಟು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗುವುದು. 4 ಎಎಸ್‌ಪಿ, 8 ಡಿವೈಎಸ್‌ಪಿ, 32 ಸಿಪಿಐ, 64 ಪಿಎಸ್‌ಐ, 170 ಎಎಸ್‌ಐ, 914 ಹೆಡ್ ಕಾನ್‌ಸ್ಟೆಬಲ್ ಮತ್ತು ಕಾನ್‌ಸ್ಟೆಬಲ್‌ಗಳು, 500 ಗೃಹರಕ್ಷಕ ಸಿಬ್ಬಂದಿ, 4 ಕೆಎಸ್‌ಆರ್‌ಪಿ, 2 ಡಿಎಆರ್ ತುಕಡಿಗಳಿಂದ ಭದ್ರತೆ ಒದಗಿಸಲಾಗುವುದು’ ಎಂದು ಜಿಲ್ಲಾ ಪೊಲೀಸ್ ವರಿಷ್ಠ ಶ್ರೀಹರಿಬಾಬು ಬಿ.ಎಲ್. ತಿಳಿಸಿದರು.
100 ಮಂದಿ ಮಹಿಳಾ ಪೊಲೀಸ್ ಸಿಬ್ಬಂದಿ ಕರ್ತವ್ಯ ನಿರ್ವಹಿಸಲಿದ್ದು, ಮಫ್ತಿಯಲ್ಲಿ 110 ಪೊಲೀಸರು ಕೆಲಸ ಮಾಡಲಿದ್ದಾರೆ. 150 ಹೆಚ್ಚುವರಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ ಎಂದರು.
ಈ ಬಾರಿ ಇದೇ ಪ್ರಥಮ ಬಾರಿಗೆ 19 ಕಡೆಗಳಲ್ಲಿ ವಾಹನ ನಿಲುಗಡೆ ವ್ಯವಸ್ಥೆ ಮಾಡಲಾಗಿದೆ. ಮೂರೂ ದಿನ ಸಂಜೆ ಹೊತ್ತು ಕಡ್ಡಿರಾಂಪುರ–ಹಂಪಿ–ಕಮಲಾಪುರ ನಡುವೆ ಏಕಮುಖ ಸಂಚಾರ ವ್ಯವಸ್ಥೆ ಇರುತ್ತದೆ. ದೂರದ ವಾಹನ ನಿಲುಗಡೆ ಸ್ಥಳದಿಂದ ಪ್ರಧಾನ ವೇದಿಕೆ, ಮಾತಂತ ಬೆಟ್ಟದವರೆಗೆ ಬಸ್‌ಗಳಲ್ಲಿ ಉಚಿತವಾಗಿ ಸಂಚರಿಸಬಹುದು. ಪ್ರಧಾನ ವೇದಿಕೆಯ ಬಳಿ ಪೊಲೀಸರ ಅನುಮತಿ ಪಡೆಯದೆ ಡ್ರೋನ್ ಹಾರಾಟ ನಡೆಸುವಂತಿಲ್ಲ ಎಂದು ಅವರು ತಿಳಿಸಿದರು.
ಶಾಸಕರಿಂದ ಊಟದ ವ್ಯವಸ್ಥೆ
ಉತ್ಸವದ ಮೂರೂ ದಿನಗಳಂದು ಹಂಪಿಯ ಕೃಷ್ಣ ದೇವಸ್ಥಾನದ ಬಳಿ ತಮ್ಮ ಸ್ವಂತ ಖರ್ಚಿನಲ್ಲಿ ಸಾರ್ವಜನಿಕರಿಗೆ ಊಟದ ವ್ಯವಸ್ಥೆ ಮಾಡಿರುವುದಾಗಿ ಶಾಸಕ ಎಚ್.ಆರ್.ಗವಿಯಪ್ಪ ತಿಳಿಸಿದರು.
ಮಧ್ಯಾಹ್ನ 12ರಿಂದ ಹಾಗೂ ಸಂಜೆ 7ರಿಂದ ಊಟ ಆರಂಭವಾಗಲಿದೆ. ಎಷ್ಟೇ ಜನ ಊಟ ಮಾಡಿದರೂ ಅಡುಗೆ ತಯಾರಿಸುವ ಮತ್ತು ಬಡಿಸುವ ವ್ಯವಸ್ಥೆಗೆ ಧಕ್ಕೆ ಬರದಂತೆ ಕ್ರಮ ಕೈಗೊಳ್ಳಲಾಗುವುದು. ಅನ್ನ, ಸಾಂಬಾರ್, ಪಲ್ಯ, ಒಂದು ಬಗೆಯ ಸಿಹಿ ಇರಲಿದೆ ಎಂದು ಅವರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.