ADVERTISEMENT

ಹಂಪಿ ಉತ್ಸವ| ಅರ್ಜುನ್‌ ಜನ್ಯ ಹಾಡಿಗೆ ಕುಣಿದು ಕುಪ್ಪಳಿಸಿದ ಸಭಿಕರು

​ಪ್ರಜಾವಾಣಿ ವಾರ್ತೆ
Published 27 ಜನವರಿ 2023, 18:26 IST
Last Updated 27 ಜನವರಿ 2023, 18:26 IST
   

ಹೊಸಪೇಟೆ (ವಿಜಯನಗರ): ಗಾಯಕ, ಸಂಗೀತ ನಿರ್ದೇಶಕ ಅರ್ಜುನ್‌ ಜನ್ಯ ಅವರು ಹಂಪಿ ಉತ್ಸವದ ಅಂಗವಾಗಿ ಶುಕ್ರವಾರ ರಾತ್ರಿ ಹಂಪಿ ಗಾಯತ್ರಿ ಪೀಠದ ಪ್ರಧಾನ ವೇದಿಕೆಯಲ್ಲಿ ಹಾಡಿದ ಹಾಡುಗಳಿಗೆ ಸಭಿಕರು ಕುಣಿದು ಕುಪ್ಪಳಿಸಿದರು.

ರಾತ್ರಿ ಹತ್ತರ ಸುಮಾರಿಗೆ ಮೈನಡುಗುವ ಚಳಿ ನಡುವೆ ವೇದಿಕೆ ಮೇಲೇರಿ ಬಂದ ಅರ್ಜುನ್‌ ಜನ್ಯ ಅವರು ಹಾಡಿದ ಹಾಡುಗಳಿಗೆ ಜನ ಮನಸೋತು ಕುಣಿದರು. ಅವರ ಹಾಡಿನ ಮೋಡಿಗೆ ಚಳಿ ಮರೆತರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭಾಗವಹಿಸಿದ್ದ ಉದ್ಘಾಟನಾ ಸಮಾರಂಭದಲ್ಲಿ ಜನ ಇರಲಿಲ್ಲ. ಎಲ್ಲೆಡೆ ನಿರುತ್ಸಾಹ ಎದ್ದು ಕಾಣುತ್ತಿತ್ತು. ಇದರ ನಡುವೆ ವೇದಿಕೆ ಮೇಲೆ ಬಂದ ಅರ್ಜುನ್‌ ಜನ್ಯ ಅದನ್ನು ದೂರ ಮಾಡಿದರು. ಅಲ್ಲಲ್ಲಿ ನಿಂತಿದ್ದವರೆಲ್ಲ ವೇದಿಕೆ ಕಡೆಗೆ ಬಂದು ಕಾರ್ಯಕ್ರಮ ಕಣ್ತುಂಬಿಕೊಂಡರು.

‘ಜೈ ಆಂಜನೇಯ, ಪ್ರಸನ್ನ ಆಂಜನೇಯ’ ಹಾಡಿನೊಂದಿಗೆ ಅವರ ಗೀತ ಗಾಯನದ ಯಾನ ಆರಂಭಿಸಿದರು. ‘ಚುಟು ಚುಟು ಅಂತೈತೆ’, ‘ಅಧ್ಯಕ್ಷ, ಅಧ್ಯಕ್ಷ’ ಹೀಗೆ ಸಾಲು ಹಾಡುಗಳನ್ನು ಹಾಡಿದರು. ಹೀಗೆ ರಾತ್ರಿ 11ಗಂಟೆಯ ವರೆಗೂ ಕಾರ್ಯಕ್ರಮ ನಡೆಸಿಕೊಟ್ಟರು.

ADVERTISEMENT

'ಮೋಡಿ‌ ಮಾಡಿದ ಎಂ.ಡಿ.ಪಲ್ಲವಿ ಗಾಯನ'

- ಸಿ. ಶಿವಾನಂದ

ಹಂಪಿ(ಎದುರು ಬಸವಣ್ಞ ವೇದಿಕೆ):‌ ಮೋಡದೊಳಗಿಂದ ಬಂದ ಅರ್ಧ ಚಂದಿರ... ಹೀಗೆ ಖ್ಯಾತ ಗಾಯಕಿ‌ ಎಂ.ಡಿ.ಪಲ್ಲವಿ ಅವರು ಹಾಡುತ್ತಿದ್ದಂತೆ ಅಲ್ಲಿದ್ದ ಸಭಿಕರು ಶಿಳ್ಳೆ, ಚಪ್ಪಾಳೆ ಹೊಡೆಯುವುದರ ಮೂಲಕ ಅವರನ್ನು ಸ್ವಾಗತಿಸಿದರು.

ನೆಚ್ಚಿನ ಗಾಯಕಿಯ ಸಂಗೀತ ಆಲಿಸಲು ಪ್ರೇಕ್ಷಕರು ಚಳಿ ಲೆಕ್ಕಿಸದೇ ತುದಿಗಾಲಲ್ಲಿ ನಿಂತಿದ್ದರು. ‌ರಾತ್ರಿ 10.15ಕ್ಕೆ ಆರಂಭಗೊಂಡ ಅವರ ಗೀತ ಗಾಯನ ಪಯಣದಲ್ಲಿ ಸಂತ ಶಿಶುನಾಳ ಷರೀಫರ 'ಸೋರುತಿಹುದು‌ ಮನೆಯ ಮಾಳಿಗಿ ಅಜ್ಞಾನದಿಂದ', ಜಿ.ಎಸ್.ಶಿವರುದ್ರಪ್ಪ ಅವರ ‘ಕಾಣದ ಕಡಲಿಗೆ ಹಂಬಲಿಸಿದೆ ಮನ’ ಜನರನ್ನು ತಲೆದೂಗುವಂತೆ ಮಾಡಿತು.

ದುನಿಯಾ ಚಲನಚಿತ್ರದ ‘ನೋಡಯ್ಯ‌ ಕೋಟಿಲಿಂಗವೆ’ ಗೀತೆಗೆ ಕೇಕೆ ಕರಾಡತನ ವ್ಯಕ್ತವಾಯಿತು. ಹೆಬ್ಬಂಡೆಗಳ ನಡುವೆ ನಿರ್ಮಾಣಗೊಂಡ ವೇದಿಕೆಯಲ್ಲಿ ನವಿರಾದ ತಣ್ಣನೆಯ ಚಳಿಯ ಕಚಗುಳಿ ಮಧ್ಯೆ ಆರಂಭಗೊಂಡ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಬಳ್ಳಾರಿಯ ಜಿಲಾನ್ ಬಾಷಾ ಅವರ ತಂಡದಿಂದ ಸಮೂಹ ನೃತ್ಯ ಮನಸೂರೆಗೊಳಿಸಿತು.

ಪುಣೆಯ ಸುರೇಶ್ ಪದಕಿ ಅವರಿಂದ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಉತ್ತಮವಾಗಿ ಮೂಡಿಬಂತಾದರೂ ಸಮಯದ ಅಭಾವದಿಂದ ಅರ್ಧಕ್ಕೆ ಮೊಟಕುಗೊಳಿಸಿದರು. ಬೆಂಗಳೂರಿನ ವೇಮಗಲ್ ನಾರಾಯಣಸ್ವಾಮಿ ಅವರು ಮತ್ತು‌ ತಂಡ ಜನಪದ ಸಂಗೀತದಲ್ಲಿ 'ಕಿನ್ನೂರಿ ನುಡಿಸೇನ' ಮಂಟಿಸ್ವಾಮಿ ನೆನೆವ ಸಿದ್ದಯ್ಯಸ್ವಾಮಿ ಬನ್ನಿ', 'ಉತ್ತುಂಗ ನಾಡಿನಿಂದ ಒಂದು ಹುಡುಗಿ ಬಂದಾಳವ್ವ' ಎನ್ನುವ ಮೂರು ಗೀತೆಗಳನ್ನು ಪ್ರಸ್ತುತಪಡಿಸಿದರು.

ಅಂಜನಾ ಪಿ.ರಾವ್ ಅವರು ಕಾರ್ನಾಟಕ ಸಂಗೀತದಲ್ಲಿ ' ಕುಣಿದಾಡೋ ಕೃಷ್ಣ ಕುಣಿದಾಡೋ' 'ಎತ್ತಣ ಮಾಮರ, ಎತ್ತಣ ಕೋಗಿಲೆ' ಗೀತೆ ಪ್ರಸ್ತುತಪಡಿಸಿದರು. ಹುಬ್ಬಳ್ಳಿಯ ಕೃತ್ತಿಕಾ ನಾಡಿಗೇರ ಅವರು ಹಿಂದೂಸ್ತಾನಿ ಸಂಗೀತ ಈಶ್ವರ ಸ್ತುತಿ ಹಾಡುವ ಮೂಲಕ ಸಂಗೀತ ಸುಧೆ ಹರಿಸಿದರು.

ಬಳ್ಳಾರಿಯ ಸೂರ್ಯ ಕಲಾಟ್ರಸ್ಟ್ ನಿಂದ ಯಕ್ಷಗಾನ ಸಹಿತ ವಿವಿಧ ನೃತ್ಯರೂಪಕಗಳು ಜನಮನಸೂರೆಗೊಂಡಿತು, ಮಕ್ಕಳು ಸಹಿತ 25 ಕ್ಕೂ ಹೆಚ್ಚು ಕಲಾವಿದರು ಭಾಗವಹಿಸಿದ್ದರು.

ಧಾರವಾಡದ ಶಾಂತಲಾ ನೃತ್ಯಾಲಯದ ವಿಜೇತಾ ವರ್ಣೇಕರ್ ತಂಡದಿಂದ ಮೂಡಿಬಂದ ಕಥಕ್ ನೃತ್ಯ ನೆರೆದಿದ್ದ ಪ್ರೇಕ್ಷಕರನ್ನೂ ಎಲ್ಲೂ ಕದಲದಂತೆ ಹಿಡಿದಿಟ್ಟುಕೊಂಡಿತ್ತು. ಮೊಳಗಲಿ ಮೊಳಗಲಿ ನಾಡಗೀತವೂ, ಮೂಡಲಿ ಮೂಡಲಿ ಸುಪ್ರಭಾತವೂ ಗೀತೆಗಂತೂ ಸಾಮೂಹಿಕ ನೃತ್ಯಕ್ಕೆ ಹಾಕಿದ‌ ಹೆಜ್ಜೆಗೆ ಮುಖದ ಹಾವಭಾವಕ್ಕೆ ಪ್ರೇಕ್ಷಕರು ಕೆಲಕಾಲ ಶಿಲೆಗಳಂತಾಗಿ ಸ್ವಲ್ಪವೂ ಅಲ್ಲಾಡದೆ ವೀಕ್ಷಿಸಿದರು.

ಬೆಂಗಳೂರಿನ ಅಮೋಘವರ್ಷ ಮತ್ತು ತಂಡದಿಂದ ಮೂಡಿಬಂದ ಫ್ಯೂಸನ್ ನಲ್ಲಿ ಕಾಂತಾರಾ, ಪುನೀತ್ ರಾಜಕುಮಾರ್ ನಟನೆಯ ನಿನ್ನಿಂದಲೇ, ಗುಬ್ಬಚ್ಚಿ ಗೂಡಿನಲ್ಲಿ ಕದ್ದುಮುಚ್ಚಿ, ಕಾಣದಂತೆ ಮಾಯವಾದನು ಸಂಗೀತಕ್ಕೆ ಶಿಳ್ಳೆ, ಚಪ್ಪಾಳೆ ಕರಾಡತನ ವ್ಯಕ್ತವಾಯಿತು. ಎರಡು ಗಂಟೆ ತಡವಾಗಿ ಆರಂಭಗೊಂಡ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಆರಂಭದಿಂದಲೂ ಪ್ರೇಕ್ಷಕರ ಕೊರತೆ ಕಂಡುಬಂತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.