ಹಂಪಿ ( ವಿಜಯನಗರ): ಮುದ ನೀಡಿದ ಭರತನಾಟ್ಯ, ಅರಿವಿಗೆ ಕರೆದೊಯ್ದ ಜಾನಪದ, ತತ್ವಪದಗಳು, ಇಂಪಾಗಿಸಿದ ಶಾಸ್ತ್ರೀಯ ಸಂಗೀತ, ರೋಮಾಂಚನ ಸೃಷ್ಟಿಸಿದ ಜಾನಪದ ಸಮೂಹ ನೃತ್ಯಗಳು...
ಈಗೆ ಹಂಪಿ ಉತ್ಸವದ ಎದುರು ಬಸವಣ್ಣ ವೇದಿಕೆಯಲ್ಲಿ ಭಾನುವಾರ ವಿವಿಧ ಕಲಾ ಗುಚ್ಚಗಳು ಅನಾವರಣಗೊಂಡವು.
ಸ್ವರಾಮಿ ಮಹಾಗಣಪತಿ ಭಕ್ತಿಗೀತೆಗೆ ಗಂಗಾವತಿಯ ದೀಪ ಶಾಂ ದರೋಜಿಯವರ ಭರತನಾಟ್ಯ ಮುದ ನೀಡಿತು.
ಲಕ್ಕುಂಡಿ ಶಿವು ಭಜಂತ್ರಿ ತಂಡ ಶಿಶುನಾಳ ಶರೀಫರ ‘ಕೋಡಗನ ಕೋಳಿ ನುಂಗಿತ್ತ’ ತತ್ವಪದ, '‘ಗುರುವೇ ನಿನ್ನ ಅಟ ಬಲ್ಲವರು ಯಾರ್ಯಾರು’ ಜಾನಪದ ಗೀತೆಗೆ ವೀಕ್ಷಕರು ವಿರುಪಾಕ್ಷೇಶ್ವರ ಸ್ವಾಮಿಗೆ ಜೈಕಾರ ಕೂಗಿ ಪ್ರೋತ್ಸಾಹಿಸಿದರು.
ನಂಜನಗೂಡಿನ ಶ್ರೀನಿವಾಸ ಮೂರ್ತಿ ಅವರ ಜಾನಪದ ಗೀತಾ ಗಾಯನಕ್ಕೆ ನೆರೆದವರು ತಲೆದೂಗಿದರು. ಬಾಗಲಕೋಟೆ ನಾಗಪ್ಪ ಗೋವಿಂದಪ್ಪ ಅವರ ಭಜನೆ , ಬೆಂಗಳೂರಿನ ಮುನೇಶ್ವರ ಅವರ ತತ್ವಪದಗಳು ಜಾಗೃತಿ ಮೂಡಿಸಿದವು.
ಕುಷ್ಟಗಿಯ ದಾವಲ್ ಸಾಬ್ ರ ಗೀಗಿ ಪದಗಳು, ಹೊಸಪೇಟೆ ಅಪೂರ್ವ ತಂಡದ ಜಾನಪದ ನೃತ್ಯ, ಡಿ.ಕೆ.ಮಾದವಿ ಅವರ ನೃತ್ಯ, ಬೆಳಗಾವಿ ಬೆಳ್ಳಿ ಚುಕ್ಕೆ ಗಾಯಕರು ಜಾನಪದ ಗೀತೆಗಳ ರಸದೌತಣ ಉಣಬಡಿಸಿದರು.
ಸಮೂಹ ನೃತ್ಯ, ಬಳ್ಳಾರಿ ಆರ್.ಹೇಮಾವತಿ ತಂಡದ 20ಕ್ಕೂಹೆಚ್ಚು ಕಲಾವಿದರ ಗುರು ಬ್ರಹ್ಮ, ಗುರು ವಿಷ್ಣುವಿನ ಗೀತೆಗೆ ಮಾಡಿದ ನೃತ್ಯ , ಮುದ್ಲಾಪುರದ ರಾಮಲಿತಂಡ, ಮರಿಯಮ್ಮನಹಳ್ಳಿ ವೀರೇಶ ಬಾಬು ತಂಡ, ಬೆಂಗಳೂರಿನ ಸುಷ್ಮ ತಂಡದ ಸಮೂಹ ನೃತ್ಯಗಳು, ಡಾ.ರಕ್ಷಿತ್ ಕಾರ್ತಿಕರ ನೃತ್ಯ, ಅಪೂರ್ವ ತಂಡದ ಜಾನಪದ ನೃತ್ಯಗಳು ಕುಳಿತವರ ಕಣ್ಣು ತಂಪಾಗಿಸಿದವು.
ರಾಮನಗರದ ದ್ರಾಕ್ಷಾಯಣಿ ತಂಡದ ಪುಟಾಣಿಗಳ ಇಂಪಾದ ಕಂಠಸಿರಿಯಲ್ಲಿ ಹೊಮ್ಮಿದ ‘ಭುವನೆದೆಡೆಗೆ’ ಭಾವಗೀತೆಗೆ ನೋಡುಗರು ಕಿವಿಯಾದರು.
ಚಳ್ಳಕೆರೆ ಡಾ.ಬಿ.ಆರ್.ಅಂಬೇಡ್ಕರ್ ಜಾನಪದ ಸಾಂಸ್ಕೃತಿಕ ಕಲಾ ಸಂಘದ ಸುಗಮ ಸಂಗೀತ, ಹುಬ್ಬಳ್ಳಿಯ ಬಿ.ಎಚ್.ಆನಂದಪ್ಪ ಅವರ ಗೀಗಿ ಪದಗಳು, ನಂದಿಬೇವೂರು ಚಂದ್ರಪ್ಪರ ರಂಗಗೀತೆ ಉತ್ಸವದ ಮೆರುಗು ಹೆಚ್ಚಿಸಿದವು.
ಉದ್ಘಾಟಿಸಿದ ಮಂಜಮ್ಮ ಜೋಗತಿ ಮಾತನಾಡಿ, ‘ಕಲಾವಿದರು ನಿಂದಿಸುವವರ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ. ಕಲೆಯನ್ನು ಹವ್ಯಾಸವಾಗಿಸಿ, ವೃತ್ತಿಯನ್ನಾಗಿಸಬೇಡಿ’ ಎಂದು ಸಲಹೆ ನೀಡಿದರು.
ಹರಪನಹಳ್ಳಿ ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನ್ ಮಾತನಾಡಿ, ತಂದೆ ದಿವಂಗತ ಎಂ.ಪಿ.ಪ್ರಕಾಶ್ ಅವರ ಕನಸಿನ ಉತ್ಸವ ಇಂದಿಗೂ ಯಶಸ್ವಿಯಾಗಿ ನಡೆಯುತ್ತಿದೆ. ಬಸವಣ್ಣ ಮುಖ್ಯ ವೇದಿಕೆಯಾಗಿದ್ದು, ಹಿಂದೆ ಮಂಟಪದ ಮೇಲೆ ಕುಳಿತು ಉತ್ಸವ ವೀಕ್ಷಿಸುತ್ತಿದ್ದೆವು’ ಎಂದು ಸ್ಮರಿಸಿದರು.
ಶಾಸಕ ಎಚ್.ಆರ್.ಗವಿಯಪ್ಪ, ಜಿಲ್ಲಾಧಿಕಾರಿ ಎನ.ಎಸ್.ದಿವಾಕರ, ತಹಶೀಲ್ದಾರ್ ಚಂದ್ರಶೇಖರ ಶಂಬಣ್ಣ ಗಾಳಿ, ಮಂಜುನಾಥ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.