ಹಂಪಿ (ವಿಜಯನಗರ): ಸಂಗೀತ ನಿರ್ದೇಶಕ ವಿ.ಹರಿಕೃಷ್ಣ ನೇತೃತ್ವದ ತಂಡ ನೋಡ್ತಾ ನೋಡ್ತಾ ಆಗೊಗೈತೆ ಶಾನೆ ಪಿರೂತಿ, ಪಸಂದ ಆಗ್ಯಾವ್ನೆ ಎಂದು ಕಾಟೇರ ಚಿತ್ರ ಹಾಡು ಆರಂಭಿಸುತ್ತಿದ್ದಂತೆ ಸೇರಿದ್ದ ನೋಡುಗರು ಚುಮು ಚುಮು ಚಳಿ ಮರೆತು ಕುಳಿತಲ್ಲೆ ಹೆಜ್ಜೆ ಹಾಕಿದರು.
ಹಂಪಿ ಉತ್ಸವದ ಅಂಗವಾಗಿ ಗಾಯತ್ರಿ ಪೀಠ ವೇದಿಕೆಯಲ್ಲಿ ಶನಿವಾರ ಜರುಗಿದ ವಿ.ಹರಿಕೃಷ್ಣ ನೈಟ್ಸ್ ನಲ್ಲಿ ಅಭಿಮಾನಿಗಳ ಸಂಭ್ರಮಕ್ಕೆ ಪಾರವೇ ಇರಲಿಲ್ಲ.
ಕಾರ್ಯಕ್ರಮ ಮುಕ್ತಾಯದ ತನಕವೂ ನಟ ದಿ.ಪುನೀತ್ ರಾಜಕುಮಾರ ಅವರ ಬೊಂಬೆ ಹೇಳುತೈತೆ ಹಾಡಿಗೆ, ಅಗಾಗ ನಿರೂಪಕರು ಪುನೀತ್ ಅವರನ್ನು ನೆನಪಿಸಿದಾಗ ನೆರೆದವರೆಲ್ಲ ಮೊಬೈಲ್ ಲೈಟ್ ಪ್ರದರ್ಶಿಸುವ ಮೂಲಕ ಅಭಿಮಾನ ವ್ಯಕ್ತಪಡಿಸುತ್ತಿದ್ದರು. ವಿ. ಹರಿಕೃಷ್ಣ ಅವರ ಕಂಠ ಸಿರಿಯಲ್ಲಿ ಜಾಕಿ ಜಾಕಿ, ಬೊಂಬೆ ಬೊಂಬೆ ಹೊರಹೊಮ್ಮುವಾಗ ಡಿಜಿಟಲ್ ಸೌಂಡ್ ಸಿಸ್ಟಂ ಏರಿ ಅಭಿಮಾನ ವ್ಯಕ್ತಪಡಿಸಿದರು. ಚೇರುಗಳ ಮೇಲೆ ನಿಂತು ಕೇಕೆ, ಶಿಳ್ಳೆಯ ಮಳೆಗರೆದರು.
ಶೇಕಿಟ್ ಪುಷ್ಪವತಿ ಹಾಡಿಗೆ ಇಡೀ ಸಭಾಂಗಣ ಕುಲುಕುಲು ಎಂದು ಕುಣಿದಾಡಿತು. ಯುವಕ, ಯುವತಿಯರು ಎದ್ದುನಿಂತು, ನಿಂತಲ್ಲಿಯೇ ಹೆಜ್ಜೆ ಹಾಕಿಬಿಟ್ಟರು. ‘ಲಕ್ಸ್ ಸೋಪ್ ಹಚ್ಚಿ ಜಳಕ ಮಾಡಿ‘ ಹಾಡಿಗೆ ಸಹ ಅಂತಹದೇ ಸ್ಪಂದನ ಸಿಕ್ಕಿಬಿಟ್ಟಿತು.
ನಟ ಸಾಧು ಕೋಕಿಲ ಅವರು ಸೌಂಡ್ ಸಿಸ್ಟಂನಿಂದ ಕೆಳಗಿಳಿಯಿರಿ, ಇಳಿಯದಿದ್ದರೆ ಕಾರ್ಯಕ್ರಮ ನಿಲ್ಲಿಸುವುದಾಗಿ ಆಗಾಗ ಮನವಿ ಮಾಡುತ್ತಲೇ ಇದ್ದರು. ಪಡ್ಡೆ ಹುಡುಗರು ಕುಳಿತ ಜಾಗದಲ್ಲೆ ಹೆಜ್ಜೆ ಹಾಕುತ್ತಿದ್ದರು. ಯುವತಿಯರು ಕಾಟೇರ ಚಿತ್ರದ ಪಸಂದ ಆಗವ್ನೆ ಹಾಡಿಗೆ ಸಾಮೂಹಿಕವಾಗಿ ದ್ವನಿಗೂಡಿಸಿದ್ದು ವಿಶೇಷವಾಗಿತ್ತು.
ಹೇಮಂತ್, ಇಂದು ನಾಗರಾಜ್ ಅವರ ಧರಣಿ ಮಂಡಲ ಮದ್ಯದೊಳಗೆ, ರೋಮಾಂಚನವೀ ಕನ್ನಡ ಹಾಡುಗಳು ನೋಡುಗರನ್ನು ಪುಳಕಗೊಳಿಸಿದವು. ಗಾಯಕರಾದ ಇಂದು ನಾಗರಾಜ್, ಸಂತೋಷ್, ವೆಂಕಿ ಅನಿರುದ್ಧ ಶೆಟ್ಟಿ, ವಾಣಿ ಅವರ ಕಂಠಸಿರಿಯಲ್ಲಿ ಹೊರಹೊಮ್ಮಿದ ಕನ್ನಡ ಗೀತೆಗಳು ಜನರನ್ನು ಕದಲಿಸಲಿಲ್ಲ.
ವೇದಿಕೆ ಸಿದ್ಧತೆ ಸಮಯದಲ್ಲಿ ಆಗೊಮ್ಮೆ ಈಗೊಮ್ಮೆ ಬರುತ್ತಿದ್ದ ಬೆಂಗಳೂರಿನ ಗಿಚ್ಚಿ ಗಿಲಿಗಿಲಿ ಶಿವಕುಮಾರ, ಜಗದೀಶ್ ಅವರ ತಂಡದ ಸದಸ್ಯರು ಮದ್ಯಪಾನದ ಜಾಗೃತಿಯ ಹಾಸ್ಯ ಪ್ರಸಂಗ ಪ್ರಸ್ತುತಪಡಿಸಿ ಜನರನ್ನು ನಗೆ ಗಡಲಲ್ಲಿ ತೇಲಿಸಿದರು.
ಇನ್ನೂ ಅರ್ಧ ಗಂಟೆ ಇರುವಾಗಲೇ ರಸಭಂಗ ಹರಿಕೃಷ್ಣ ತಂಡದ ಸಂಗೀತ ಆರಂಭವಾಗುವಾಗ ರಾತ್ರಿ 12.15 ಕಳೆದಿತ್ತು. ಪ್ರೇಕ್ಷಕರು ಕಿಕ್ಕಿರಿದು ಸೇರಿದ್ದರು. ನಾಲ್ಕೈದು ಹಾಡುಗಳನ್ನಷ್ಟೇ ಈ ತಂಡ ಹಾಡಿತ್ತು. ಆಗ ಮಧ್ಯರಾತ್ರಿ 1 ಗಂಟೆಯಾಗಿತ್ತು. ಇನ್ನೂ ಅರ್ಧ ಗಂಟೆ ರಸಮಂಜರಿ ಮುಂದುವರಿಯಲಿದೆ ಎಂದು ಸಾಧು ಕೋಕಿಲ ತಿಳಿಸಿದ್ದರು. ಆದರೆ ಪೊಲೀಸರು ಬಂದ್ ಮಾಡುವಂತೆ ಸೂಚಿಸಿದ ಕಾರಣ 1.10ರ ವೇಳೆಗೆ ರಸಮಂಜರಿ ಮುಕ್ತಾಯವಾಯಿತು. ಹರಿಕೃಷ್ಣ ನಿರ್ದೇಶಿಸಿದ ಹೆಚ್ಚಿನ ಹಾಡುಗಳು ಕುಳಿತಲ್ಲೇ ಕಾಲಲ್ಲಿ ತಾಳ ಹಾಕುವಂತಿವೆ. ಹೀಗಾಗಿ ಇನ್ನಷ್ಟು ಹಾಡುಗಳನ್ನು ಜನರು ನಿರೀಕ್ಷಿಸಿದ್ದರು. ಒಮ್ಮಿಂದೊಮ್ಮೆಲೆ ಕೊನೆಯ ಹಾಡು ಗೊಂಬೆ ಹಾಡುತೈತೆ ಎಂದು ಘೋಷಿಸಿದಾಗ ಎಲ್ಲರೂ ಅತೃಪ್ತಿಗೊಂಡಿರು. ಬೇಸರದಿಂದಲೇ ಈ ಹಾಡಿಗೆ ಮೊಬೈಲ್ ಟಾರ್ಚ್ ಲೈಟ್ ಉರಿಸಿ ಅಪ್ಪುಗೆ ಗೌರವ ಸಲ್ಲಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.