ಹೊಸಪೇಟೆ (ವಿಜಯನಗರ): ಹಂಪಿ ಉತ್ಸವದಲ್ಲಿ ಅತ್ಯಂತ ಜನಪ್ರಿಯ ಪ್ರದರ್ಶನವೆಂದರೆ ‘ವಿಜಯನಗರ ವೈಭವ ಧ್ವನಿ ಬೆಳಕು’. ಈ ಬಾರಿ ಕೇಂದ್ರ ಸರ್ಕಾರದ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಅನುಭವಿ ತಂತ್ರಜ್ಞರು ಅಲಭ್ಯರಿರುವ ಕಾರಣ ಇಡೀ ಕಾರ್ಯಕ್ರಮವೇ ಮಂಕಾಗಿ ಹೋಗುವ ಸಾಧ್ಯತೆ ದಟ್ಟವಾಗಿದೆ.
‘ವಿಜಯನಗರ ವೈಭವ’ ಧ್ವನಿ ಬೆಳಕು ಕಾರ್ಯಕ್ರಮಕ್ಕೆ ಪ್ರತಿ ವರ್ಷದಂತೆ ಈ ಬಾರಿಯೂ ತಂತ್ರಜ್ಞರನ್ನು, ತಜ್ಞರನ್ನು ಕಳುಹಿಸಿಕೊಡಬೇಕು ಎಂಬ ವಿಜಯನಗರ ಜಿಲ್ಲಾಧಿಕಾರಿ ಅವರ ಪತ್ರವನ್ನು ಬೆಂಗಳೂರಿನ ಕೇಂದ್ರ ಪ್ರಸಾರ ಇಲಾಖೆಯ ಪ್ರಾದೇಶಿಕ ಕಚೇರಿಯ ಹೆಚ್ಚುವರಿ ಮಹಾನಿರ್ದೇಶಕರು ಕೇಂದ್ರ ಸರ್ಕಾರಕ್ಕೆ ಕಳುಹಿಸಿಕೊಟ್ಟಿದ್ದರು. ಇದಕ್ಕೆ ಜ.18ರಂದು ಉತ್ತರ ಬರೆದಿರುವ ಸಹಾಯಕ ನಿರ್ದೇಶಕಿ (ಕಾರ್ಯಕ್ರಮ) ಡಾ. ಚೈತ್ರಾ ಶರ್ಮಾ ಅವರು, ಸದ್ಯ ದೇಶದಾದ್ಯಂತ ಕೇಂದ್ರ ಸರ್ಕಾರದ ಕಳೆದ 5 ವರ್ಷಗಳ ಸಾಧನೆಯನ್ನು ಬಿಂಬಿಸುವ ಮಾಹಿತಿ, ಶಿಕ್ಷಣ, ಸಂವಹನ (ಐಇಸಿ) ವ್ಯಾನ್ ಪ್ರಚಾರ ನಡೆಯುತ್ತಿರುವುದರಿಂದ ಕೇಂದ್ರ ಕಚೇರಿ ಅಥವಾ ಪ್ರಾದೇಶಿಕ ಕಚೇರಿಗಳಿಂದ ತಂತ್ರಜ್ಞರನ್ನು ಕಳುಹಿಸಿಕೊಡಲು ಸಾಧ್ಯವಿಲ್ಲ, ಈ ಬಾರಿ ನೀವೇ ಸ್ಥಳೀಯವಾಗಿ ವ್ಯವಸ್ಥೆ ಮಾಡಿಕೊಳ್ಳಿ ಎಂದು ತಿಳಿಸಿದ್ದಾರೆ. ಈ ಪತ್ರ ‘ಪ್ರಜಾವಾಣಿ’ಗೆ ಲಭ್ಯವಾಗಿದೆ.
ಆದರೆ ಈ ಆತಂಕವನ್ನು ಅಲ್ಲಗಳೆದಿರುವ ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್, ‘ನಾನೇ ಬೆಂಗಳೂರು ಮತ್ತು ದೆಹಲಿಯಲ್ಲಿರುವ ಅಧಿಕಾರಿಗಳೊಂದಿಗೆ ಮಾತನಾಡಿದ್ದೇನೆ. ಎಂಟು ಜನ ತಂತ್ರಜ್ಞರನ್ನು ಕಳುಹಿಸಿಕೊಡುವುದಾಗಿ ಹೇಳಿದ್ದಾರೆ. ಅಗತ್ಯದ ಸಾಧನಗಳು ಬೆಂಗಳೂರು ಪ್ರಾದೇಶಿಕ ಕಚೇರಿಯಲ್ಲೇ ಇದ್ದು, ಅದನ್ನು ತರಿಸಿಕೊಳ್ಳುವ ಕೆಲಸವಷ್ಟೇ ಜಿಲ್ಲಾಡಳಿತ ಮಾಡಬೇಕಿದೆ. ಅದಕ್ಕೆ ವ್ಯವಸ್ಥೆ ಮಾಡಿಕೊಳ್ಳುತ್ತಿದ್ದೇವೆ. ಹೀಗಾಗಿ ಧ್ವನಿಬೆಳಕಿಗೆ ಯಾವುದೇ ಮಂಕು ಕವಿಯುವುದಿಲ್ಲ’ ಎಂದು ‘ಪ್ರಜಾವಾಣಿ’ಗೆ ತಿಳಿಸಿದರು.
ಆತಂಕ ಏಕಾಗಿ?: ಹಂಪಿ ಉತ್ಸವ ಆರಂಭವಾಗಿ 20 ವರ್ಷ ಕಳೆಯಿತು. ಆಂದಿನಿಂದಲೂ ಇಡೀ ಉತ್ಸವದ ಮುಖ್ಯ ಆಕರ್ಷಣೆಯೇ ‘ವಿಜಯನಗರ ವೈಭವ’ ಧ್ವನಿ ಬೆಳಕಿನ ಕಾರ್ಯಕ್ರಮ. ಅದನ್ನು ಅಚ್ಚುಕಟ್ಟಾಗಿ ನಡೆಸಿಕೊಂಡು ಬರುವಲ್ಲಿ ಪುಣೆ, ಹೈದರಾಬಾದ್‌ಗಳಿಂದ ಬರುತ್ತಿದ್ದ ತಂತ್ರಜ್ಞರ ಪಾತ್ರ ದೊಡ್ಡದಿತ್ತು. ಕನ್ನಡ ಭಾಷೆ ಬಾರದಿದ್ದರೂ ಕಾರ್ಯಕ್ರಮಕ್ಕೆ ಒಂದಿಷ್ಟು ಚ್ಯುತಿ ಆಗದಂತೆ ವ್ಯವಸ್ಥೆ ಮಾಡುತ್ತಿದ್ದುದು ಅವರ ವೃತ್ತಿಪರತೆಗೆ ಸಾಕ್ಷಿಯಾಗಿತ್ತು. ಸಹಾಯಕ ನಿರ್ದೇಶಕರ ಪತ್ರವನ್ನು ನಂಬುವುದಾದರೆ ಇಂತಹ ಅನುಭವಿ ತಂತ್ರಜ್ಞರು ಈ ಬಾರಿ ಲಭ್ಯವಾಗುವುದು ಕಷ್ಟಸಾಧ್ಯ.
ಮೇಲಾಗಿ ‘ವಿಜಯನಗರ ವೈಭವ’ದ ಪ್ರಸಿದ್ಧ ನಿರ್ದೇಶಕರಾಗಿ ಗಮನ ಸೆಳೆದಿದ್ದ ಹೂಗೊಪ್ಪಲು ಕೃಷ್ಣಮೂರ್ತಿ ಮತ್ತು ಸಹಾಯಕ ನಿರ್ದೇಶಕ ಮನೋಹರ್ ಅವರು ನಿವೃತ್ತಿಯಾಗಿದ್ದಾರೆ. ರಾಜ್ಯದ ಪ್ರಾದೇಶಿಕ ಕಚೇರಿಯಲ್ಲಿ ಸಹ ಕನ್ನಡ ಬಲ್ಲ ಅಧಿಕಾರಿಗಳು, ತಂತ್ರಜ್ಞರ ಕೊರತೆ ಇದೆ. ಇದೆಲ್ಲವನ್ನೂ ಕಂಡಾಗ ಈ ಬಾರಿಯ ‘ಧ್ವನಿ ಬೆಳಕು’ ಅಷ್ಟಾಗಿ ಪ್ರಕಾಶಮಾನವಾಗಿರದು ಎಂಬ ಆತಂಕ ನೆಲೆಸಿದೆ.
ಧ್ವನಿಬೆಳಕಿನ ವೈಭವ ಪ್ರತಿ ವರ್ಷದಂತೆ ಈ ವರ್ಷವೂ ಇರುತ್ತದೆ. ಸ್ಥಳೀಯ ಕಲಾವಿದರು ಸಜ್ಜಾಗಿದ್ದು ಎಲ್ಲವೂ ಯೋಜನಾಬದ್ಧವಾಗಿಯೇ ನಡೆಯಲಿದೆಎಂ.ಎಸ್.ದಿವಾಕರ್ ಜಿಲ್ಲಾಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.