ADVERTISEMENT

ಮೈಸೂರು ದಸರಾ ನಂತರ ಹಂಪಿ ಉತ್ಸವ: ಸಚಿವ ಆನಂದ್‌ ಸಿಂಗ್‌

​ಪ್ರಜಾವಾಣಿ ವಾರ್ತೆ
Published 23 ಜನವರಿ 2023, 13:34 IST
Last Updated 23 ಜನವರಿ 2023, 13:34 IST
   

ಹೊಸಪೇಟೆ (ವಿಜಯನಗರ): ಪ್ರತಿ ವರ್ಷ ಮೈಸೂರು ದಸರಾ ಮುಗಿದ ನಂತರ ‘ಹಂಪಿ ಉತ್ಸವ’ ಆಚರಿಸಲು ಚಿಂತನೆ ನಡೆದಿದೆ ಎಂದು ಪ್ರವಾಸೋದ್ಯಮ ಸಚಿವ ಆನಂದ್‌ ಸಿಂಗ್‌ ತಿಳಿಸಿದರು.

ಸೋಮವಾರ ‘ಹಂಪಿ ಉತ್ಸವ’ದ ಸಿದ್ಧತೆ ಪರಿಶೀಲಿಸಿದ ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಮೈಸೂರು ದಸರಾದಂತೆ ಹಂಪಿ ಉತ್ಸವ ಆಗಬೇಕು. ಪ್ರತಿವರ್ಷ ವಿಜಯದಶಮಿಯಂದು ಮೈಸೂರು ದಸರಾ ನಡೆಯುತ್ತದೆ. ಅದಾದ ಬಳಿಕ ಹಂಪಿ ಉತ್ಸವದ ದಿನಾಂಕ ನಿಗದಿಪಡಿಸಲು ಚರ್ಚಿಸಿ ತೀರ್ಮಾನಿಸಲಾಗುವುದು ಎಂದರು.

ಪ್ರತಿ ವರ್ಷ ನವೆಂಬರ್‌ 3ರಿಂದ 5ರ ವರೆಗೆ ಹಂಪಿ ಉತ್ಸವ ಮಾಡಬೇಕೆಂಬ ಬೇಡಿಕೆ ಇದೆ. ಆದರೆ, ದಸರಾ ದಿನಾಂಕ ಬದಲಾದರೆ ಮೈಸೂರು ದಸರಾ ದಿನಾಂಕವೂ ಬದಲಾಗುತ್ತದೆ. ಮೈಸೂರು ದಸರಾ, ಹಂಪಿ ಉತ್ಸವ ಒಟ್ಟಿಗೆ ಆಚರಿಸಿದರೆ ಪ್ರವಾಸಿಗರಿಗೆ ಎಲ್ಲಿಗೆ ಹೋಗಬೇಕು ಎನ್ನುವುದರ ಬಗ್ಗೆ ಗೊಂದಲ ಉಂಟಾಗುತ್ತದೆ. ಮೈಸೂರು ದಸರಾ ಮುಗಿದ ಒಂಬತ್ತು ದಿನಗಳ ನಂತರ ಹಂಪಿ ಉತ್ಸವ ಸಂಘಟಿಸಲು ಆಲೋಚಿಸಲಾಗುತ್ತಿದೆ ಎಂದು ಹೇಳಿದರು.

ADVERTISEMENT

ಕೆಲಸದ ಒತ್ತಡ ಜಾಸ್ತಿ ಇದೆ. ನಾನು ಕ್ಷೇತ್ರದ ಶಾಸಕನಾಗಿ ಜವಾಬ್ದಾರಿ ಇರುತ್ತದೆ. ಅದ್ದೂರಿಯಾಗಿ ಉತ್ಸವ ಮಾಡಬೇಕಿತ್ತು. ಸರಿಯಾಗಿ ಸಮಯ ನಿಗದಿಯಾಗುತ್ತಿಲ್ಲ. ಬರುವ ವರ್ಷದಿಂದ ವ್ಯವಸ್ಥಿತವಾಗಿ ಅದ್ದೂರಿಯಾಗಿ ಆಚರಿಸಲಾಗುವುದು. ಈ ಸಲವೂ ಏನು ಕಡಿಮೆ ಮಾಡಿಲ್ಲ. ಈ ಸಲ ದೀಪಾಲಂಕಾರ ಪ್ರಮುಖ ಆಕರ್ಷಣೆ. ರಾಜ್ಯದ ಎಲ್ಲ ಕಡೆಗಳಲ್ಲಿ ಜಿಲ್ಲಾ ಉತ್ಸವ ನಡೆಯುತ್ತಿವೆ. ಅಲ್ಲಿನ ಸಲಹೆ ಪಡೆದು ಹಂಪಿ ಉತ್ಸವ ಅದ್ದೂರಿಯಾಗಿ ಆಚರಿಸಲಾಗುವುದು ಎಂದು ತಿಳಿಸಿದರು.

25ರಂದು ತುಂಗಾ ಆರತಿ:
ಜ. 25ರಂದು ಹಂಪಿ ತುಂಗಭದ್ರಾ ನದಿ ತಟದಲ್ಲಿ ತುಂಗಾ ಆರತಿ ಕಾರ್ಯಕ್ರಮ ನಡೆಯಲಿದೆ. ಅದಕ್ಕಾಗಿ ಸಿದ್ಧತಾ ಕಾರ್ಯ ನಡೆದಿದೆ. ಜ. 26ರಂದು ‘ವಸಂತ ವೈಭವ’ ಕಾರ್ಯಕ್ರಮ ಜರುಗಲಿದೆ. ಹೊಸಪೇಟೆ ನಗರದಲ್ಲಿ 100 ಕಲಾವಿದರ ತಂಡಗಳು ಇದರಲ್ಲಿ ಪಾಲ್ಗೊಳ್ಳಲಿವೆ. ಆ ದಿನ ಪ್ರತಿಯೊಬ್ಬರೂ ಮನೆ ಮುಂದೆ ರಂಗೋಲಿ ಬಿಡಿಸಿ ಹಬ್ಬದ ವಾತಾವರಣ ಸೃಷ್ಟಿಸಬೇಕು ಎಂದು ಕೋರಿದ ಅವರು, ಜ. 27ರಂದು ಸಂಜೆ 6ಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉತ್ಸವಕ್ಕೆ ಚಾಲನೆ ಕೊಡುವರು. ಹಂಪಿ ಗಾಯತ್ರಿ ಪೀಠದಲ್ಲಿ ಮುಖ್ಯ ವೇದಿಕೆ, ಎದುರು ಬಸವಣ್ಣ, ವಿರೂಪಾಕ್ಷೇಶ್ವರ ದೇವಸ್ಥಾನ ಹಾಗೂ ಸಾಸಿವೆ ಕಾಳು ಗಣಪ ಸ್ಮಾರಕದ ಬಳಿ ಸಣ್ಣ ವೇದಿಕೆ ನಿರ್ಮಿಸಲಾಗುವುದು ಎಂದು ವಿವರಿಸಿದರು.

ಜಿಲ್ಲಾಧಿಕಾರಿ ಟಿ.ವೆಂಕಟೇಶ್‌, ಉಪವಿಭಾಗಾಧಿಕಾರಿ ಸಿದ್ದರಾಮೇಶ್ವರ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಶ್ರೀಹರಿಬಾಬು ಬಿ.ಎಲ್‌., ಡಿವೈಎಸ್ಪಿ ವಿಶ್ವನಾಥರಾವ್‌ ಕುಲಕರ್ಣಿ, ಹಂಪಿ ಗ್ರಾಮ ಪಂಚಾಯಿತಿ ಸದಸ್ಯೆ ಸ್ವಾತಿ ಸಿಂಗ್ ಇದ್ದರು.

ರಾಷ್ಟ್ರೀಯ ಶಿಲ್ಪಕಲಾ ಶಿಬಿರಕ್ಕೆ ಚಾಲನೆ
ಉತ್ಸವದ ಅಂಗವಾಗಿ ಹಮ್ಮಿಕೊಂಡಿರುವ ರಾಷ್ಟ್ರೀಯ ಶಿಲ್ಪಕಲಾ ಶಿಬಿರಕ್ಕೆ ಸಚಿವ ಆನಂದ್‌ ಸಿಂಗ್‌ ಅವರು ಕಲ್ಲಿಗೆ ಉಳಿಪೆಟ್ಟು ಹಾಕುವುದರ ಮೂಲಕ ಹಂಪಿಯಲ್ಲಿ ಚಾಲನೆ ನೀಡಿದರು.

ಜ.26ರ ವರಗೆ ಶಿಬಿರ ನಡೆಯಲಿದೆ. ಕೋಲ್ಕತ್ತ, ಬೆಂಗಳೂರು, ಚೆನ್ನೈ, ಬರೋಡಾ, ಮಂಡ್ಯ, ವಿಜಯಪುರ, ಬಾಗಲಕೋಟೆ, ಹೊಸಪೇಟೆಯ ಒಟ್ಟು 20 ಕಲಾವಿದರು ಪಾಲ್ಗೊಂಡಿದ್ದಾರೆ ಎಂದು ಶಿಬಿರದ ಸಂಚಾಲಕ ಮೋಹನ್‍ರಾವ್ ಪಾಂಚಾಳ್ ತಿಳಿಸಿದರು.

ಈ ಸಲ ಹೊಸ ಪ್ರಯೋಗ
‘ಈ ಸಲದ ಹಂಪಿ ಉತ್ಸವದಲ್ಲಿ ಸ್ಥಳೀಯ ಹಾಗೂ ರಾಜ್ಯದ ಕಲಾವಿದರಿಗೆ ಹೆಚ್ಚಿನ ಆದ್ಯತೆ ನೀಡುವುದರ ಮೂಲಕ ಹೊಸ ಪ್ರಯೋಗ ಮಾಡಲಾಗುತ್ತಿದೆ’ ಎಂದು ಸಚಿವ ಆನಂದ್‌ ಸಿಂಗ್‌ ಹೇಳಿದರು.

ಮೂವರು ಬಾಲಿವುಡ್‌ ಕಲಾವಿದರನ್ನಷ್ಟೇ ಕರೆಸಲಾಗುತ್ತಿದೆ. ಒಟ್ಟು 12,000 ಅರ್ಜಿಗಳು ಬಂದಿವೆ. 3,000 ಕಲಾವಿದರು ಪಾಲ್ಗೊಳ್ಳುವರು. ಸ್ಥಳೀಯ ಪ್ರತಿಯೊಬ್ಬ ಕಲಾವಿದರಿಗೂ ಆದ್ಯತೆ ಕೊಡಲಾಗುತ್ತಿದೆ. ಅದಕ್ಕೆ ಜನ ಯಾವ ರೀತಿ ಸ್ಪಂದಿಸುತ್ತಾರೋ ಎಂಬುದನ್ನು ನೋಡಲು ಈ ಪ್ರಯೋಗ ಮಾಡಲಾಗುತ್ತಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.