ಹೊಸಪೇಟೆ (ವಿಜಯನಗರ): ‘ಹಂಪಿ ಉತ್ಸವ’ದ ಮೊದಲ ದಿನಕ್ಕೆ ಹೋಲಿಸಿದರೆ ಎರಡನೇ ದಿನವಾದ ಶನಿವಾರ ಸಂಜೆ ಉತ್ತಮ ಎಂಬಂತಿತ್ತು.
ಉದ್ಘಾಟನಾ ಸಮಾರಂಭ ನಡೆದ ಹಂಪಿ ಗಾಯತ್ರಿ ಪೀಠದ ಪ್ರಧಾನ ವೇದಿಕೆ ಸೇರಿದಂತೆ ಇತರೆ ಮೂರು ವೇದಿಕೆಗಳಲ್ಲಿ ನಡೆದ ಕಾರ್ಯಕ್ರಮಗಳಲ್ಲಿ ಶುಕ್ರವಾರ ಜನರೇ ಇರಲಿಲ್ಲ. ವೇದಿಕೆ ಎದುರು ಹಾಕಿದ್ದ ಬಹುತೇಕ ಕುರ್ಚಿಗಳು ಖಾಲಿ ಇದ್ದವು. ಕಲಾವಿದರು, ಪೊಲೀಸರ ಸಂಖ್ಯೆಯೇ ಹೆಚ್ಚಿತ್ತು.
ಆದರೆ, ಎರಡನೇ ದಿನ ಜಿಲ್ಲಾಡಳಿತವು ಹೊಸಪೇಟೆ ನಗರದಿಂದ ಬಂದು ಹೋಗಲು ಉಚಿತ ಬಸ್ ವ್ಯವಸ್ಥೆ ಕಲ್ಪಿಸಿತು. ಹಂಪಿ ಪರಿಸರದೊಳಗೆ ಸಾರ್ವಜನಿಕರ ಎಲ್ಲಾ ರೀತಿಯ ವಾಹನಗಳಿಗೆ ಸಂಚರಿಸಲು ಅವಕಾಶ ಮಾಡಿಕೊಟ್ಟಿತು. ಪಾಸ್ ಇಲ್ಲದೆ ಯಾರು ಎಲ್ಲಿ ಬೇಕಾದರೂ ಕುಳಿತುಕೊಳ್ಳಬಹುದು ಎಂದು ಪ್ರಕಟಣೆ ಹೊರಡಿಸಿತ್ತು. ಈ ವಿಷಯ ತಿಳಿದು ವಿವಿಧ ಕಡೆಗಳಿಂದ ಜನ ಬಂದರು. ಶನಿವಾರ ಕೂಡ ಇದ್ದದ್ದರಿಂದ ಹೆಚ್ಚಿನವರು ಮಧ್ಯಾಹ್ನದವರೆಗೆ ಕೆಲಸ ಮುಗಿಸಿಕೊಂಡು ಸಂಜೆ ಹಂಪಿ ಕಡೆ ಮುಖ ಮಾಡಿದರು.
ಬೆಳಿಗ್ಗೆಯಿಂದ ಸಂಜೆಯ ವರೆಗೆ ಬಿರು ಬಿಸಿಲು ಇದ್ದದ್ದರಿಂದ ಹೆಚ್ಚಾಗಿ ಜನ ಕಂಡು ಬರಲಿಲ್ಲ. ಸೂರ್ಯಾಸ್ತದ ನಂತರ ಎಲ್ಲ ವೇದಿಕೆಗಳಲ್ಲಿ ನಿಧಾನವಾಗಿ ಜನ ಬರಲು ಆರಂಭಿಸಿದರು. ರಾತ್ರಿಯಾಗುತ್ತಿದ್ದಂತೆ ಹೆಚ್ಚಾಗುತ್ತಲೇ ಹೋಯಿತು. ಎಲ್ಲಾ ವೇದಿಕೆಗಳೆದುರು ಜನ ಸೇರುತ್ತಿರುವುದನ್ನು ನೋಡಿ ಅಧಿಕಾರಿಗಳು ಕೊಂಚ ನೆಮ್ಮದಿಯ ನಿಟ್ಟುಸಿರು ಬಿಟ್ಟರು.
ಓದಿ...
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.