ADVERTISEMENT

ವಿಜಯನಗರ | ಜ. 27 – 29ರ ವರೆಗೆ ಹಂಪಿ ಉತ್ಸವ: 2 ವರ್ಷಗಳ ಬಳಿಕ ಸಾಂಸ್ಕೃತಿಕ ಹಬ್ಬ

ಅದ್ದೂರಿ ಉತ್ಸವ ಆಚರಣೆಯ ಸಿದ್ಧತೆಗೆ ಸಚಿವೆ ಶಶಿಕಲಾ ಜೊಲ್ಲೆ ಸೂಚನೆ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2022, 12:54 IST
Last Updated 5 ಡಿಸೆಂಬರ್ 2022, 12:54 IST
ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಸಚಿವೆ ಜೊಲ್ಲೆ
ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಸಚಿವೆ ಜೊಲ್ಲೆ   

ಹೊಸಪೇಟೆ (ವಿಜಯನಗರ): ‘2022ರ ಜನವರಿ 27ರಿಂದ 29ರ ವರೆಗೆ ‘ಹಂಪಿ ಉತ್ಸವ’ ಆಚರಿಸಲು ತಾತ್ಕಾಲಿಕವಾಗಿ ದಿನಾಂಕ ನಿಗದಿಪಡಿಸಲಾಗಿದ್ದು, ಅದ್ದೂರಿ ಉತ್ಸವ ಆಚರಣೆಗೆ ಸಕಲ ಸಿದ್ಧತೆ ಮಾಡಿಕೊಳ್ಳಬೇಕು’ ಎಂದು ಜಿಲ್ಲಾ ಉಸ್ತುವಾರಿಯೂ ಆದ ಮುಜರಾಯಿ ಖಾತೆ ಸಚಿವೆ ಶಶಿಕಲಾ ಅಣ್ಣಾಸಾಹೇಬ್‌ ಜೊಲ್ಲೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಉತ್ಸವ ಸಂಬಂಧ ಸೋಮವಾರ ಇಲ್ಲಿ ಜನಪ್ರತಿನಿಧಿಗಳು, ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಜ. 7, 8ರಂದು ಉತ್ಸವ ಆಚರಿಸಲು ನಿರ್ಧರಿಸಲಾಗಿತ್ತು. ಆದರೆ, ಅದೇ ಸಂದರ್ಭದಲ್ಲಿ ಹಾವೇರಿಯಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ. ಹಾಗಾಗಿ ಜನವರಿ ಅಂತ್ಯದಲ್ಲಿ ಹಂಪಿ ಉತ್ಸವ ನಡೆಸಲು ತಾತ್ಕಾಲಿಕ ದಿನಾಂಕ ನಿಗದಿಪಡಿಸಲಾಗಿದೆ. ಮುಖ್ಯಮಂತ್ರಿಯವರ ಜೊತೆ ಚರ್ಚಿಸಿದ ನಂತರ ಅಂತಿಮ ದಿನಾಂಕ ನಿಗದಿಪಡಿಸಲಾಗುವುದು ಎಂದು ಹೇಳಿದರು.

ಕೋವಿಡ್‌ನಿಂದ ಈ ಹಿಂದಿನ ಎರಡು ವರ್ಷ ಉತ್ಸವ ಸಂಘಟಿಸಲು ಆಗಿರಲಿಲ್ಲ. ಈ ಬಾರಿ ಎಲ್ಲ ಉತ್ಸವಗಳಿಗಿಂತಲೂ ಅದ್ದೂರಿಯಾಗಿ ಹಂಪಿ ಉತ್ಸವ ಆಚರಿಸಲಾಗುವುದು. ವಿಜಯನಗರ ಸಾಮ್ರಾಜ್ಯದ ಗತವೈಭವ ಬಿಂಬಿಸುವ ಕಾರ್ಯಕ್ರಮಗಳನ್ನು ಮೂರು ದಿನ ಆಯೋಜಿಸಲಾಗುವುದು. ಅದಕ್ಕೆ ಬೇಕಿರುವ ಅಗತ್ಯ ಸಿದ್ಧತೆಗಳನ್ನು ಈಗಿನಿಂದಲೇ ಮಾಡಿಕೊಳ್ಳಬೇಕೆಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ADVERTISEMENT

ಉತ್ಸವಕ್ಕೆ ₹6 ಕೋಟಿ

2021-22ನೇ ಸಾಲಿನ ಹಂಪಿ ಉತ್ಸವ ಆಚರಣೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ₹4.10 ಕೋಟಿ ಅನುದಾನ ಬಿಡುಗಡೆಗೊಳಿಸಲಾಗಿತ್ತು. ಇನ್ನೂ ಹೆಚ್ಚಿನ ಅನುದಾನದ ಅಗತ್ಯವಿದೆ. ಒಟ್ಟು ₹6 ಕೋಟಿ ಅನುದಾನ ಬಿಡುಗಡೆಗೊಳಿಸುವಂತೆ ಪ್ರವಾಸೋದ್ಯಮ ಇಲಾಖೆಗೆ ಪತ್ರ ಬರೆಯಲಾಗಿದೆ. ಖಾಸಗಿ ಕಂಪನಿಗಳ ಸಿಎಸ್‌ಆರ್‌ ನಿಧಿಯನ್ನು ನೀಡುವಂತೆ ಕೋರಲಾಗುವುದು ಎಂದರು.

ಎರಡು ಮುಖ್ಯ ವೇದಿಕೆ

ಈ ಬಾರಿ ಎರಡು ಭವ್ಯ ಮುಖ್ಯ ವೇದಿಕೆಗಳನ್ನು ನಿರ್ಮಿಸಲು ಯೋಜಿಸಲಾಗಿದೆ. ಕಲಾವಿದರ ಲಭ್ಯತೆ ಹಾಗೂ ಕಾರ್ಯಕ್ರಮಗಳನ್ನು ನೋಡಿಕೊಂಡು ಇನ್ನೂ 2 ಉಪ ವೇದಿಕೆಗಳನ್ನು ಮಾಡುವುದರ ಬಗ್ಗೆ ತೀರ್ಮಾನಕ್ಕೆ ಬರಲಾಗುವುದು ಎಂದು ತಿಳಿಸಿದರು.

ಜಿಲ್ಲಾಧಿಕಾರಿ ವೆಂಕಟೇಶ್‌ ಟಿ., ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಶ್ರೀಹರಿಬಾಬು, ಸಂಸದ ವೈ. ದೇವೇಂದ್ರಪ್ಪ, ನಗರಸಭೆ ಅಧ್ಯಕ್ಷೆ ಸುಂಕಮ್ಮ ಸೇರಿದಂತೆ ಇತರರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.