ಹರಪನಹಳ್ಳಿ/ಹೊಸಪೇಟೆ (ವಿಜಯನಗರ ಜಿಲ್ಲೆ): ಟಿಕೆಟ್ ಹಂಚಿಕೆ ವಿಚಾರವಾಗಿ ಹರಪನಹಳ್ಳಿ ಕಾಂಗ್ರೆಸ್‌ನಲ್ಲಿ ಭಿನ್ನಮತ ಭುಗಿಲೆದ್ದಿದ್ದು, ಮಾಜಿ ಉಪಮುಖ್ಯಮಂತ್ರಿ ದಿವಂಗತ ಎಂ.ಪಿ. ಪ್ರಕಾಶ್ ಅವರ ಹಿರಿಯ ಮಗಳು, ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಎಂ.ಪಿ. ಲತಾ ಮಲ್ಲಿಕಾರ್ಜುನ ಅವರು ಪಕ್ಷ ತೆಗೆದುಕೊಂಡಿರುವ ನಿರ್ಧಾರಕ್ಕೆ ವಿರುದ್ಧವಾಗಿ ಹೋಗಲು ನಿರ್ಧರಿಸಿದ್ದಾರೆ.
ಪಟ್ಟಣದಲ್ಲಿ ಭಾನುವಾರ ಕರೆದಿದ್ದ ಸಮಾನ ಮನಸ್ಕ ಸ್ವಾಭಿಮಾನಿ ಕಾರ್ಯಕರ್ತರ ಬಹಿರಂಗ ಸಭೆಯಲ್ಲಿ ಅವರ ಬೆಂಬಲಿಗರು ಪಕ್ಷೇತರರಾಗಿ ಚುನಾವಣೆಗೆ ಸ್ಪರ್ಧಿಸುವಂತೆ ಒತ್ತಡ ಹೇರಿದರು.
'ಮಾಜಿ ಶಾಸಕ ಎಂ.ಪಿ.ರವೀಂದ್ರ ನಿಧನರಾದ ಬಳಿಕ ಕ್ಷೇತ್ರದಲ್ಲಿ ಐದು ವರ್ಷ ಪಕ್ಷ ಸಂಘಟನೆ ಮಾಡಿರುವ ನಿಷ್ಠಾವಂತರಿಗೆ ಟಿಕೆಟ್ ಕೊಡದೆ ಈಚೆಗೆ ಪಕ್ಷ ಸೇರಿದವರಿಗೆ ಮಣೆ ಹಾಕಿದ್ದಾರೆ. ನೀವು ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಬೇಕು. ನಾವು ನಿಮ್ಮೊಂದಿಗಿದ್ದೇವೆ’ ಎಂದು ಕಾರ್ಯಕರ್ತರು ಆಗ್ರಹಿಸಿದರು. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧ ಧಿಕ್ಕಾರ ಕೂಗಿದರು.
ಎಂ.ಪಿ.ಲತಾ ಮಲ್ಲಿಕಾರ್ಜುನ್ ಮಾತನಾಡಿ, ಪಕ್ಷದ ಹೈಕಮಾಂಡ್ ತೆಗೆದುಕೊಂಡಿರುವ ನಿರ್ಧಾರ ಸ್ವೀಕರಿಸೋಣ. ಆದರೆ, ಯಾರಿಗೂ ಧಿಕ್ಕಾರ ಕೂಗುವುದು ಸರಿಯಲ್ಲ. ಯಾರನ್ನಾದರೂ ದೂರಿದರೆ, ಪಕ್ಷಕ್ಕೆ ಮತ್ತು ತಂದೆ ಪ್ರಕಾಶ್ ಅವರಿಗೆ ಅಪಮಾನ ಮಾಡಿದಂತೆ. ಕಾರ್ಯಕರ್ತರ ಅಭಿಪ್ರಾಯವನ್ನು ಗೌರವಿಸಿ, ನಿರ್ಧಾರ ಪ್ರಕಟಿಸುವೆ’ ಎಂದರು ಕಾರ್ಯಕರ್ತರು ಪಕ್ಷೇತರ ಅಭ್ಯರ್ಥಿ ಎಂದು ಘೋಷಿಸುವಂತೆ ಹಕ್ಕೊತ್ತಾಯ ಮಾಡಿದರು.
ಎಂ.ಪಿ.ಲತಾ ಅವರ ಪತಿ ಎಚ್.ಎಂ.ಮಲ್ಲಿಕಾರ್ಜುನ ಮಾತನಾಡಿ, 'ಯಾರ ಮಾತಿಗೂ ಕಿವಿಗೊಡದೆ ಯಾರ ಕುತಂತ್ರಕ್ಕೂ ಬಲಿಯಾಗದೆ ಕಾರ್ಯಕರ್ತರು ಇದೇ ಉತ್ಸಾಹದಿಂದ ನಮ್ಮ ಜೊತೆ ಇರುವುದಾದರೆ ಮಂಗಳವಾರ ಅಥವಾ ಬುಧವಾರ ನಾಮಪತ್ರ ಸಲ್ಲಿಸಲಾಗುವುದು’ ಎಂದು ಹೇಳಿದರು. ಇದಕ್ಕೆ ಅವರ ಬೆಂಬಲಿಗರು ಹರ್ಷೊದ್ಘಾರ ತೆಗೆದರು.
ಕಾಂಗ್ರೆಸ್ ಪಕ್ಷ ಶನಿವಾರ ಪ್ರಕಟಿಸಿದ ಪಟ್ಟಿಯಲ್ಲಿ ಹರಪನಹಳ್ಳಿ ಟಿಕೆಟ್ ಎನ್. ಕೊಟ್ರೇಶ್ ಅವರಿಗೆ ನೀಡಿತು. ಇದು ಲತಾ ಅವರ ಅಸಮಾಧಾನಕ್ಕೆ ಮುಖ್ಯ ಕಾರಣ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.