ಹರಪನಹಳ್ಳಿ : ತಾಲ್ಲೂಕಿನ ನಾರಾಯಣಪುರ, ಮೆಳ್ಳೆಕಟ್ಟೆ ಕಂದಾಯ ಗ್ರಾಮಗಳಿಗೆ ಸೇರಿದ 108 ಎಕರೆಯಲ್ಲಿ ಬೆಳೆದು ನಿಂತಿದ್ದ ಅರಣ್ಯ ಸಸಿಗಳನ್ನು ಭೂ ಕಳ್ಳರು ಸದ್ದಿಲ್ಲದೇ ಧರೆಗುರುಳಿಸಿದ್ದಾರೆ.
ಅರಣ್ಯ ಸಂಪತ್ತು ಹೆಚ್ಚಿಸಲು ಮೀಸಲಿಡಲು ಉದ್ದೇಶಿಸಿರುವ ನಾರಾಯಣಪುರ ಸರ್ವೆ ನಂಬರ್ 1 ಮತ್ತು ಮೆಳ್ಳೆಕಟ್ಟೆ ಸರ್ವೆ ನಂಬರ್ 1ರ ಪೈಕಿ 108 ಎಕರೆಯಲ್ಲಿ ಬೆಳೆಸಿದ್ದ ಸಾವಿರಾರು ಅರಣ್ಯ ಸಸಿಗಳನ್ನು ಭೂಮಿ ಖದೀಮರು ಯಂತ್ರಗಳನ್ನು ಬಳಸಿ ನಾಶಪಡಿಸಿದ್ದಾರೆ.
2020ರ ಜುಲೈ 30ರಂದು ಇದೇ ಸ್ಥಳದಲ್ಲಿ ಕೆಲ ರೈತರು ಉಳುಮೆಗೆ ಮುಂದಾಗಿದ್ದರಿಂದ ಅರಣ್ಯ ಇಲಾಖೆ, ಕಂದಾಯ ಇಲಾಖೆ ಜಂಟಿಯಾಗಿ ಸರ್ಕಾರದ ಅನುದಾನದಿಂದ ಕುರುಚಲು ಜಾತಿಯ ದೊಡ್ಡ ಸಸಿಗಳನ್ನು ಪೊಲೀಸ್ ಬಂದೋಬಸ್ತ್‌ನಲ್ಲಿ ನಾಟಿ ಮಾಡಿದ್ದರು. ಪೊಲೀಸ್ ಕಾವಲಿನಲ್ಲಿ ಅರಣ್ಯ ಸಿಬ್ಬಂದಿ 6 ತಿಂಗಳು ಪಾಲನೆ ಪೋಷಣೆ ಮಾಡಿದ್ದರು. ಸೋಂಪಾಗಿ ಬೆಳೆದು ನಿಂತಿದ್ದ ಗಿಡಗಳನ್ನು 2024ರ ಜೂನ್ ತಿಂಗಳಲ್ಲಿ ಕೆಲವರು ಅಕ್ರಮವಾಗಿ ಪ್ರವೇಶಿಸಿ ಕಡಿಯಲು ಆರಂಭಿಸಿದ್ದರು.
ಇದನ್ನು ಗಂಭೀರವಾಗಿ ಪರಿಗಣಿಸಿದ ಅರಣ್ಯ, ಕಂದಾಯ ಇಲಾಖೆ ಅಧಿಕಾರಿಗಳ ತಂಡ ಜಂಟಿಯಾಗಿ ಪುನಃ ಪೊಲೀಸ್ ಬಂದೋಬಸ್ತ್ ಪಡೆದು 1,500 ಸಸಿಗಳನ್ನು ನೆಟ್ಟಿತು. ಅವುಗಳನ್ನು ಪೋಷಿಸುತ್ತಿರುವಾಗ ರಾತ್ರೊರಾತ್ರಿ ಅಕ್ರಮವಾಗಿ ನುಗ್ಗಿರುವ ಖದೀಮರು ಸದ್ದಿಲ್ಲದೇ ಸಾವಿರಾರು ಗಿಡಗಳ ನಾಶಪಡಿಸಿದ್ದಾರೆ.
ಮೆಳ್ಳೆಕಟ್ಟೆ, ನಾರಾಯಣಪುರ ಪ್ರದೇಶದಲ್ಲಿ ಅತಿಕ್ರಮಣ ಮಾಡಿದ ಆಪಾದನೆ ಮೇಲೆ ಯಲ್ಲಾಪುರ ಕೊರಚರಹಟ್ಟಿಯ 43 ಮಂದಿ, ಉದ್ಗಟ್ಟಿ ದೊಡ್ಡತಾಂಡ (ಬಾಪೂಜಿನಗರ) 21 ಜನ ಒಟ್ಟು ಸಂಶಯಾಸ್ಪದ 64 ಜನರಿಗೆ ಕಂದಾಯ ಇಲಾಖೆ ನೋಟಿಸ್ ಜಾರಿಗೊಳಿಸಿ, 30 ದಿನದೊಳಗೆ ಸಮಜಾಯಿಷಿ ನೀಡಲು ಜುಲೈ ತಿಂಗಳಲ್ಲಿ ಸೂಚಿಸಿತ್ತು. ಆದರೆ ಇತ್ತ ಅತಿಕ್ರಮಣಕಾರರು ರಾತ್ರೋರಾತ್ರಿ ಟ್ರಾಕ್ಟರ್, ಜೆಸಿಬಿ ಯಂತ್ರಗಳಿಂದ ಬೆಳೆದು ನಿಂತಿದ್ದ ಅರಣ್ಯ ನಾಶಪಡಿಸಿ ಭೂ ಕಬಳಿಕೆ ಸಂದೇಶ ರವಾನಿಸಿರುವುದು ಅಧಿಕಾರಿಗಳಿಗೆ ತಲೆನೋವಾಗಿದೆ.
ಗಿಡಗಳನ್ನು ನಾಶಪಡಿಸಿದವರ ಪತ್ತೆ ಹಚ್ಚಿ ಕರ್ನಾಟಕ ಭೂ ಕಂದಾಯ ಅಧಿನಿಯಮ 1964ರ ಕಲಂ 192ಎ ಅನ್ವಯ ಕಾನೂನು ಕ್ರಮ ಜರುಗಿಸಲಾಗುವುದುಬಿ.ವಿ.ಗಿರೀಶ್ ಬಾಬು ತಹಶೀಲ್ದಾರ್ ಹರಪನಹಳ್ಳಿ
ಕಾವಲಿಗೆ ಸಿಬ್ಬಂದಿ ಹಿಂದೇಟು ‘ಒತ್ತುವರಿದಾರರು ಮಚ್ಚು ಕೊಡಲಿ ಕಲ್ಲಿನಂತ ಆಯುಧ ಹಿಡಿದು ರಾತ್ರೊರಾತ್ರಿ ಗುಂಪು ಗುಂಪಾಗಿ ನುಗ್ಗುತ್ತಾರೆ. ಈ ಭಾಗದಲ್ಲಿ ವನ್ಯಜೀವಿಗಳ ಓಡಾಟ ಹೆಚ್ಚಿದೆ. ಒಟ್ಟು 108 ಎಕರೆಯಿರುವ ಈ ಪ್ರದೇಶದಲ್ಲಿ ರಾತ್ರಿ ಪಾಳಿ ಮಾಡಲು ಅರಣ್ಯ ಕಾವಲು ಸಿಬ್ಬಂದಿ ಕಂದಾಯ ಇಲಾಖೆಯ ಗ್ರಾಮ ಸಹಾಯಕರು ಹಿಂದೇಟು ಹಾಕುತ್ತಿರುವುದಾಗಿ ಕಂದಾಯ ಮತ್ತು ಅರಣ್ಯ ಇಲಾಖೆ ಸಲ್ಲಿಸಿರುವ ಜಂಟಿ ವರದಿಯಲ್ಲಿ ಉಲ್ಲೇಖಿಸಲಾಗಿದೆ’ ಎಂದು ತಹಶೀಲ್ದಾರ್ ಗಿರೀಶ್ ಬಾಬು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.