ADVERTISEMENT

ಹೊಸಪೇಟೆ ನಗರದಲ್ಲಿ ಭರ್ಜರಿಯಾಗಿ ಸುರಿದ ಮಳೆ: ರಾಯ ಕಾಲುವೆಯ ನೀರಿಗೆ ತಡೆ–ಆಕ್ಷೇಪ

​ಪ್ರಜಾವಾಣಿ ವಾರ್ತೆ
Published 12 ಜೂನ್ 2024, 15:29 IST
Last Updated 12 ಜೂನ್ 2024, 15:29 IST
   

ಹೊಸಪೇಟೆ (ವಿಜಯನಗರ): ನಗರದಲ್ಲಿ ಬುಧವಾರ ಸಂಜೆ ಬಿರುಸಿನಿಂದ ಮಳೆ ಸುರಿದಿದ್ದು, ಇಂದಿರಾ ನಗರ ಪ್ರದೇಶದಲ್ಲಿ 20ಕ್ಕೂ ಅಧಿಕ ಮನೆಗಳಿಗೆ ನೀರು ನುಗ್ಗಿತು. ಮತ್ತೊಂದೆಡೆ ರಾಯ ಕಾಲುವೆಯ ಎಸ್ಕೇಪ್‌ ಗೇಟ್‌ ತೆಗೆದು ನೀರು ಸರಾಗವಾಗಿ ಹರಿಯಲು ಅವಕಾಶ ನೀಡುತ್ತಿಲ್ಲ ಎಂದು ಆರೋಪಿಸಿ ಹತ್ತಾರು ಮಂದಿ ಸ್ಥಳದಲ್ಲಿ ಪ್ರತಿಭಟನೆ ನಡೆಸಿದರು.

‘ಮಾಜಿ ಸಚಿವರ ಮನೆಯ ಹಿಂಭಾಗದಲ್ಲಿ ಸರಾಗವಾಗಿ ಹರಿದು ಹೋಗಬೇಕಿದ್ದ ರಾಯ ಕಾಲುವೆಯನ್ನು ತಿರುಗಿಸಿ ಕೊಟ್ಟಿರುವುದರಿಂದಲೇ ಈ ಸಮಸ್ಯೆ ಎದುರಾಗಿದೆ. ಇದರಿಂದ 5 ಮತ್ತು 6ನೇ ವಾರ್ಡ್‌ನಲ್ಲಿ ಮನೆಗಳು, ಜಮೀನುಗಳಿಗೆ ನೀರು ನುಗ್ಗುವಂತಾಗಿದೆ. ಹಂಪಿ ರಸ್ತೆಯ ಸುಣ್ಣದ ಬಟ್ಟಿ ಭಾಗದಲ್ಲಿ, ಜನ ವಸತಿ ಪ್ರದೇಶಕ್ಕೆ ನೀರು ನುಗ್ಗಿದೆ. ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕಾಗಿದೆ’ ಎಂದು ಪಾಲಿಕೆ ಸದಸ್ಯ ಅಬ್ದುಲ್‌ ಖದೀರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ರಾಣಿ ಪೇಟೆ, ಸ್ಟೇಷನ್ ರಸ್ತೆಯ ಚಾಪಲಘಟ್ಟ ಭಾಗದಲ್ಲಿ ಸಹ ಕಾಲುವೆಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಿ ಕೆಲ ಮನೆಗಳಿಗೆ ಮಳೆ ನೀರು ನುಗ್ಗಿ, ಭಾರೀ ಅವಾಂತರ ಸೃಷ್ಟಿಯಾಯಿತು. ಮನೆಗೆ ನೀರು ನುಗ್ಗದ್ದರಿಂದ ಅಗತ್ಯ ವಸ್ತುಗಳನ್ನು ರಕ್ಷಿಸಿಕೊಳ್ಳಲು ಜನರು ಪರದಾಡುವಂತಾಯಿತು.

ADVERTISEMENT

ಇಂದಿರಾ ನಗರ ಪ್ರದೇಶದಲ್ಲಿ 20ಕ್ಕೂ ಅಧಿಕ ಮನೆಗಳಿಗೆ ನೀರು ನುಗ್ಗಿದ್ದರಿಂದ ಜನ ಪರದಾಡುವಂತಾಯಿತು. ಸ್ಥಳಕ್ಕೆ ಪೌರಾಯುಕ್ತ ಚಂದ್ರಪ್ಪ ಭೇಟಿ ನೀಡಿ ನೀರು ಸರಾಗವಾಗಿ ಹರಿದು ಹೋಗುವುದಕ್ಕೆ ತಾತ್ಕಲಿಕ ವ್ಯವಸ್ಥೆ ಮಾಡಿಸಿದರು. ಆದರೆ ರಾತ್ರಿ 8 ಗಂಟೆಯವರೆಗೂ ಹಲವು ಮನೆಗಳ ಒಳಗೆ ನೀರು ಹಾಗೆಯೇ ಇತ್ತು.

ಎತ್ತು, ಕುರಿ ಸಾವು: ನಗರದ ಬಸವೇಶ್ವರ ವೃತ್ತ ಸಮೀಪದ ವಿಜ್ಞಾನ ಕಾಲೇಜು ಎದುರಿಗಿರುವ ವಿದ್ಯುತ್ ಕಂಬದಿಂದ ವಿದ್ಯುತ್ ಸ್ಪರ್ಶಿಸಿ ಕುರಿಯೊಂದು ಸಾವನ್ನಪ್ಪಿದೆ. ಇಲ್ಲಿನ ನಾಗಪ್ಪಕಟ್ಟೆ ಸಮೀಪದ ಕುರಿಗಾಹಿ ಬಸವರಾಜ್ ಎಂಬುವವರಿಗೆ ಸೇರಿದ ಸುಮಾರು 3 ವರ್ಷದ ಕುರಿ ಇದಾಗಿತ್ತು. ತಾಲ್ಲೂಕಿನ ಸೀತಾರಾಮ ತಾಂಡಾದಲ್ಲಿ ಟ್ರಾನ್ಸ್‍ಫರ್ಮರ್‌ನಿಂದ ವಿದ್ಯುತ್ ಸ್ಪರ್ಶಿಸಿ ಒಂದು ಎತ್ತು ಸತ್ತಿದೆ. ಇದು ರೈತ ಭಜನಿ ಹನುಮನಾಯ್ಕ್‌ ಅವರಿಗೆ ಸೇರಿದ್ದಾಗಿದ್ದು, ₹35 ಸಾವಿರ ಮೌಲ್ಯದ್ದಾಗಿತ್ತು.

ವಾಹನ ಸಂಚಾರಕ್ಕೆ ತೊಂದರೆ: ಸಂಜೆ ಸುಮಾರು ಮೂರು ಗಂಟೆ ಕಾಲ ಬಿಟ್ಟು ಬಿಟ್ಟು ಬಿರುಸಿನಿಂದ ಮಳೆ ಸುರಿಯಿತು. ಹೀಗಾಗಿ ಕಾಲೇಜು ರಸ್ತೆ, ನೂರು ಹಾಸಿಗೆ ಆಸ್ಪತ್ರೆ ರಸ್ತೆ ಸಹಿತ ಹಲವೆಡೆ ರಸ್ತೆಯಲ್ಲಿ ಒಂದು ಅಡಿಯಷ್ಟು ನೀರು ನಿಂತಿತ್ತು. ವಾಹನ ಸಂಚಾರಕ್ಕೆ ಅಡಚಣೆ ಉಂಟಾಯಿತು.

ನಗರಸಭೆ ಅಧಿಕಾರಿಗಳು, ಪೌರಕಾರ್ಮಿಕರು ಹಾಗೂ ಸಿಬ್ಬಂದಿ ಜೆಸಿಬಿಗಳೊಂದಿಗೆ ಸ್ಥಳಕ್ಕೆ ದಾವಿಸಿ, ಮಳೆ ನೀರು ಸರಾಗವಾಗಿ ಹರಿಯುವಂತೆ ಚರಂಡಿಗಳನ್ನು ಸ್ವಚ್ಛಗೊಳಿಸುವ ಕಾರ್ಯದಲ್ಲಿ ತೊಡಗಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.