ADVERTISEMENT

ಮಲೆನಾಡಿನಲ್ಲಿ ಭಾರಿ ಮಳೆ: ತುಂಗಭದ್ರಾ ಜಲಾಶಯಕ್ಕೆ 1.06 ಲಕ್ಷ ಕ್ಯುಸೆಕ್ ಒಳಹರಿವು

​ಪ್ರಜಾವಾಣಿ ವಾರ್ತೆ
Published 19 ಜುಲೈ 2024, 5:12 IST
Last Updated 19 ಜುಲೈ 2024, 5:12 IST
<div class="paragraphs"><p>ತುಂಗಭದ್ರಾ ಜಲಾಶಯ</p></div>

ತುಂಗಭದ್ರಾ ಜಲಾಶಯ

   

ಹೊಸಪೇಟೆ  (ವಿಜಯನಗರ): ಮಲೆನಾಡು ಭಾಗದಲ್ಲಿ ಉತ್ತಮವಾಗಿ ಮಳೆ ಸುರಿಯುತ್ತಿರುವುದರಿಂದ ತುಂಗಭದ್ರಾ ಜಲಾಶಯದ ಒಳಹರಿವಿನ ಪ್ರಮಾಣ ಸತತ ಎರಡನೇ ದಿನವಾದ ಶುಕ್ರವಾರವೂ ಲಕ್ಷ ಮೀರಿದೆ ಹಾಗೂ ಜಲಾಶಯ ಸದ್ಯ ಅರ್ಧದಷ್ಟು ತುಂಬಿಹೋಗಿದೆ.

ಶುಕ್ರವಾರ ಒಳಹರಿವಿನ ಪ್ರಮಾಣ 1.06 ಲಕ್ಷ ಕ್ಯುಸೆಕ್‌ನಷ್ಟಿದೆ. ಗುರುವಾರ ಸಂಜೆ ಇದರ ಪ್ರಮಾಣ 1.12 ಲಕ್ಷ ಕ್ಯುಸೆಕ್‌ನಷ್ಟಿತ್ತು. ಗರಿಷ್ಠ 105.78 ಟಿಎಂಸಿ ಅಡಿ ನೀರು ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ ಸದ್ಯ 55.97 ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ. ಗುರುವಾರ 46.80 ಟಿಎಂಸಿ ಅಡಿಯಷ್ಟಿದ್ದ ಪ್ರಮಾಣ, ಸಂಜೆಯ ವೇಳೆಗೆ 50.02 ಟಿಎಂಸಿ ಅಡಿಗೆ ಹೆಚ್ಚಳವಾಗಿತ್ತು. ಒಟ್ಟಾರೆ ಒಂದು ದಿನದಲ್ಲಿ ಜಲಾಶಯದಲ್ಲಿ 9 ಟಿಎಂಸಿ ಅಡಿಯಷ್ಟು ನೀರು ಸಂಗ್ರಹವಾದಂತಾಗಿದೆ.

ADVERTISEMENT

ತುಂಗಭದ್ರಾ ಆಣೆಕಟ್ಟೆಯ ಗರಿಷ್ಠ ಎತ್ತರ 1,633 ಅಡಿ. ಸದ್ಯ ನೀರಿನ ಮಟ್ಟ 1,618.03 ಅಡಿಗೆ ತಲುಪಿದೆ. ಆಣೆಕಟ್ಟೆ ಭರ್ತಿಗೆ ಇನ್ನು 15 ಅಡಿಯಷ್ಟೇ ಬಾಕಿ ಇದೆ.

ವಿಶೇಷವೆಂದರೆ ವಿಜಯನಗರ ಜಿಲ್ಲೆಯಲ್ಲಿ ತುಂತುರು ಮಳೆಯಷ್ಟೇ ಆಗುತ್ತಿದ್ದು, ಇನ್ನೂ ಮುಂಗಾರು ಮಳೆಯ ನಿಜ ಸ್ವರೂಪ ಆರಂಭವಾಗಿಲ್ಲ. ಆದರೆ ಮಲೆನಾಡು ಭಾಗದಲ್ಲಿ ಸುರಿಯುತ್ತಿರುವ  ಮಳೆಯಿಂದಾಗಿ ಜಲಾಶಯ ಈಗಾಗಲೇ ಅರ್ಧ ತುಂಬಿದಂತಾಗಿದೆ.

ಕಳೆದ ವರ್ಷ ಇದೇ ಅವಧಿಯಲ್ಲಿ ಜಲಾಶಯದಲ್ಲಿ 11.74 ಟಿಎಂಸಿ ಅಡಿ ನೀರಷ್ಟೇ ಇತ್ತು.

ಕಾಲುವೆಗಳಿಗೆ ನೀರು: ಈ ಮಧ್ಯೆ, ಭಾರಿ ಪ್ರಮಾಣದಲ್ಲಿ ನೀರು ಹರಿದು ಬರುತ್ತಿರುವ ಕಾರಣ ನೀರಾವರಿ ಸಲಹಾ ಸಮಿತಿ (ಐಸಿಸಿ) ಸಭೆ ನಡೆಯುವುದಕ್ಕೆ ಮೊದಲಾಗಿಯೇ ಜಲಾಶಯದ ಎಡದಂಡೆ (4,100 ಕ್ಯುಸೆಕ್‌) ಹಾಗೂ ಬಲದಂಡೆಯ ಕೆಳಹಂತದ ಕಾಲುವೆಗೆ (ಎಲ್‌ಎಲ್‌ಸಿ) ನೀರು ಹರಿಸುವ ಕಾರ್ಯ ಶುಕ್ರವಾರದಿಂದ ಆರಂಭವಾಗಿದೆ. ಬಲದಂಡೆ ಮೇಲ್ಬಟ್ಟದ ಕಾಲುವೆಗೆ (ಎಚ್‌ಎಲ್‌ಸಿ) ಇದೇ 22ರಿಂದ ನೀರು ಹರಿಸಲಾಗುತ್ತದೆ ಎಂದು ಕರ್ನಾಟಕ ನೀರಾವರಿ ನಿಗಮದ ತುಂಗಭದ್ರಾ ಯೋಜನಾ ವೃತ್ತದ ಅಧೀಕ್ಷಕ ಎಂಜಿನಿಯರ್ ಎಲ್‌.ಬಸವರಾಜ್‌ ತಿಳಿಸಿದ್ದಾರೆ.

ಆಂಧ್ರ ಸರ್ಕಾರದ ಕೋರಿಕೆಯಂತೆ ಎಲ್‌ಎಲ್‌ಸಿ ಕಾಲುವೆಯಲ್ಲಿ ಎರಡು ದಿನಗಳ ಹಿಂದೆ ಆಂಧ್ರ ಪಾಲಿನ 300 ಕ್ಯುಸೆಕ್‌ ನೀರನ್ನು ಹರಿಸಲಾಗಿತ್ತು. ಇದೀಗ ಆ ನೀರಿನ ಜತೆಗೆ ಕರ್ನಾಟಕ ಪಾಲಿನ 650 ಕ್ಯುಸೆಕ್‌ ನೀರು ಸಹ ಶುಕ್ರವಾರದಿಂದ ಸೇರಿಕೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.