ಹೊಸಪೇಟೆ (ವಿಜಯನಗರ): ಹೊಸಪೇಟೆ ನಗರ ಮತ್ತು ತಾಲ್ಲೂಕಿನ ವಿವಿಧ ಭಾಗಗಳಲ್ಲಿ ಬುಧವಾರ ರಾತ್ರಿ ಭಾರಿ ಗಾಳಿ ಸಹಿತ ಲಘುವಾಗಿ ಮಳೆ ಸುರಿದಿದ್ದು, ಹಂಪಿ ಸಮೀಪದ ಬುಕ್ಕಸಾಗರದಲ್ಲಿ ಬಾಳೆ ತೋಟಗಳಿಗೆ ಹಾನಿ ಉಂಟಾಗಿದೆ.
ರಾತ್ರಿ 11 ಗಂಟೆ ಸುಮಾರಿಗೆ ಗುಡುಗು, ಮಿಂಚು ಸಹಿತ ಸಾಧಾರಣ ಮಳೆ ಸುರಿಯಿತು. ಗಾಳಿಯ ವೇಗ ಜಾಸ್ತಿಯಾಗಿತ್ತು. ಹೀಗಾಗಿ ಹಲವೆಡೆ ಬಾಳೆ ಗಿಡಗಳು ನೆಲಸಮವಾಗುವಂತಾಯಿತು.
ಬುಕ್ಕಸಾಗರದ ಹನುಮಂತಪ್ಪ ಎಂಬ ಕೃಷಿಕರು ಒಂದೂವರೆ ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಏಲಕ್ಕಿ ಬಾಳೆ ತೋಟ ಗಾಳಿಯಿಂದ ನಾಶವಾಗಿದೆ.
'ಬೆಳೆ ಕೈಗೆ ಬರುವ ಹಂತದಲ್ಲಿ ಈ ಹಾನಿ ಸಂಭವಿಸಿದೆ. ಸರ್ಕಾರ ನಮಗೆ ಪರಿಹಾರ ನೀಡಬೇಕು. ಮೂರು ವರ್ಷದ ಹಿಂದೆ ಇದೇ ರೀತಿ ಗಾಳಿ, ಮಳೆಗೆ ಬಾಳೆ ತೋಟ ನಾಶವಾಗಿದ್ದಾಗ ಸರ್ಕಾರದಿಂದ ಯಾವ ನೆರವೂ ಸಿಕ್ಕಿರಲಿಲ್ಲ. ಮತ್ತೆ ಅದೇ ರೀತಿಯ ಅನ್ಯಾಯ ಆಗಬಾರದು' ಎಂದು ಹನುಮಂತಪ್ಪ ಅವರು 'ಪ್ರಜಾವಾಣಿ' ಬಳಿ ಅಳಲು ತೋಡಿಕೊಂಡರು.
ಬುಕ್ಕಸಾಗರ ಗ್ರಾಮದಲ್ಲಿ ಜೆ.ಎನ್.ಕಾಳಿದಾಸ ಅವರ ಎರಡು ಎಕರೆಯಲ್ಲಿ ಬೆಳೆದಿದ್ದ ಬಾಳೆ ಗಿಡಗಳೂ ನಾಶವಾಗಿವೆ. ಗಾಳಿಯಿಂದ ಇತರ ಮರಗಳ ಟೊಂಗೆಗಳೂ ಮುರಿದು ಬಿದ್ದಿವೆ.
'ರಾತ್ರಿ ಹೊತ್ತಿನಲ್ಲಿ ಬೀಸಿದ ಗಾಳಿ ಮತ್ತು ಮಳೆಗೆ ರೈತರು ಬೆಳೆದಿದ್ದ ಬೆಳೆ ಕೈಗೆ ಬರದಂತಾಗಿದೆ. ರೈತರ ಪರಿಸ್ಥಿತಿ ಗಾಯದ ಮೇಲೆ ಬರೆ ಎಳೆದಂತಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರ ಬೆಳೆಗಳಿಗೆ ಬೆಂಬಲ ಬೆಲೆ ನೀಡಬೇಕು, ರಾಷ್ಟ್ರೀಕೃತ ಬ್ಯಾಂಕ್‌ಗಳು ಮತ್ತು ಸಹಕಾರಿ ಬ್ಯಾಂಕ್‌ಗಳಲ್ಲಿ ಪಡೆದ ಸಾಲ ಮನ್ನಾ ಮಾಡಬೇಕು' ಎಂದು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ತಾಲ್ಲೂಕು ಘಟಕದ ಅಧ್ಯಕ್ಷ ಎಲ್.ಎಸ್.ರುದ್ರಪ್ಪ ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.