ಹೊಸಪೇಟೆ (ವಿಜಯನಗರ): ವೀರಗಲ್ಲುಗಳ ಕುರಿತಂತೆ ವಿಶೇಷ ಅಧ್ಯಯನ ನಡೆಸಿದ ಹಿರಿಯ ಸಂಶೋಧಕ ಪ್ರೊ. ಆರ್. ಶೇಷಶಾಸ್ತ್ರಿ ಅವರ ಸರ್ವಾಧ್ಯಕ್ಷತೆಯಲ್ಲಿ ನ. 9ರಿಂದ 11ರವರೆಗೆ ಕರ್ನಾಟಕ ಇತಿಹಾಸ ಅಕಾಡೆಮಿಯ 38ನೇ ವಾರ್ಷಿಕ ರಾಷ್ಟ್ರೀಯ ಸಮ್ಮೇಳನ ಹಂಪಿ ವಿಶ್ವವಿದ್ಯಾಲಯದ ಮಂಟಪ ಸಭಾಂಗಣದಲ್ಲಿ ನಡೆಯಲಿದೆ.
‘ಪ್ರೊ.ಎಂ.ಎಂ.ಕಲಬುರ್ಗಿ ಅವರು ಕುಲಪತಿಯಾಗಿದ್ದ ಅವಧಿಯಲ್ಲಿ 2000–01ರಲ್ಲಿ ಮೊದಲ ಬಾರಿಗೆ ಈ ಸಮ್ಮೇಳನ ಇಲ್ಲಿ ನಡೆದಿತ್ತು. ಇದೀಗ 2ನೇ ಬಾರಿಗೆ ಈ ಸಮ್ಮೇಳನದ ಆತಿಥ್ಯ ವಹಿಸುವ ಅವಕಾಶ ವಿಶ್ವವಿದ್ಯಾಲಯಕ್ಕೆ ಲಭಿಸಿದೆ’ ಎಂದು ಕುಲಪತಿ ಪ್ರೊ.ಡಿ.ವಿ.ಪರಮಶಿವಮೂರ್ತಿ ಗುರುವಾರ ವಿವಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
‘400 ಮಂದಿ ಪಾಲ್ಗೊಳ್ಳುವ ನಿರೀಕ್ಷೆ ಇದ್ದು, 26 ಗೋಷ್ಠಿಗಳು ನಡೆಯಲಿವೆ. 140ಕ್ಕಿಂತ ಅಧಿಕ ಪ್ರಬಂಧಗಳನ್ನು ಮಂಡಿಸಲಾಗುತ್ತದೆ. ಇತಿಹಾಸದ ಬಗ್ಗೆ ಕುತೂಹಲ ಇರುವ ಜನಸಾಮಾನ್ಯರು ಸಹ ಪ್ರಬಂಧ ಮಂಡಿಸುವುದು ಇಲ್ಲಿಯ ವಿಶೇಷ’ ಎಂದು ಹೇಳಿದರು.
‘ಶಾಸಕ ಎಚ್. ಆರ್.ಗವಿಯಪ್ಪ ಅವರು ಇಡೀ ನಿಯೋಗದ ಊಟದ ವ್ಯವಸ್ಥೆ ನೋಡಿಕೊಳ್ಳಲು ಒಪ್ಪಿದ್ದಾರೆ. ಕೊಟ್ಟೂರು ಶ್ರೀಗಳು ₹25 ಸಾವಿರ ಅನುದಾನ ನೀಡಿದ್ದಾರೆ. ಉಳಿದಂತೆ ಹಲವರು ಧನಸಹಾಯ ಮಾಡಿದ್ದಾರೆ’ ಎಂದರು.
ಅಕಾಡೆಮಿಯ ಅಧ್ಯಕ್ಷ ದೇವರಕೊಂಡಾರೆಡ್ಡಿ ಮಾತನಾಡಿ, ‘ವಿಶ್ವವಿದ್ಯಾಲಯದಲ್ಲಿ ಊಟ, ವಸತಿ, ಸಭಾಂಗಣ ಸಿಗುವ ಕಾರಣ ಇಂತಹ ಸಮ್ಮೇಳನ ಮಾಡುವುದು ಸಾಧ್ಯವಾಗುತ್ತದೆ. ಸತತ 38 ವರ್ಷಗಳಿಂದ ಪ್ರತಿ ವರ್ಷ ಈ ಸಮ್ಮೇಳನ ನಡೆಸಿಕೊಂಡು ಬರಲಾಗಿದೆ’ ಎಂದರು.
ಅಕಾಡೆಮಿಯ ಉಪಾಧ್ಯಕ್ಷ ಪ್ರೊ.ಲಕ್ಷ್ಮಣ್ ತೆಲಗಾವಿ, ಕುಲಸಚಿವ ಪ್ರೊ.ವಿಜಯ್ ಪೂಣಚ್ಚ ತಂಬಂಡ, ಅಧ್ಯಯನಾಂಗದ ನಿರ್ದೇಶಕ ಪ್ರೊ.ಅಮರೇಶ್ ಯತಗಲ್, ಪ್ರಾಧ್ಯಾಪಕ ಪ್ರೊ.ಎಸ್.ವೈ.ಸೋಮಶೇಖರ್ ಇತರರು ಇದ್ದರು.
ನೌಕರರ ಸೇವೆ ಮುಂದುವರಿಕೆ
‘ಸರ್ಕಾರ ಮುಂದಿನ ದಿನಗಳಲ್ಲಿ ಅನುದಾನ ನೀಡಬಹುದು ಎಂಬ ನಿರೀಕ್ಷೆಯೊಂದಿಗೆ 47 ಮಂದಿ ಗುತ್ತಿಗೆ ನೌಕರರ ಸೇವೆ ಮುಂದುವರಿಸಲಾಗಿದೆ. ಸಿಂಡಿಕೇಟ್‌ಗೆ ಈಗಾಗಲೇ ಈ ವಿಷಯವನ್ನು ಗಮನಕ್ಕೆ ತರಲಾಗಿದೆ. ಬೋಧಕೇತರ ಸಿಬ್ಬಂದಿ ಮುಂಬಡ್ತಿಗಾಗಿ ನ.12ರಿಂದ ಪ್ರತಿಭಟನೆ ನಡೆಸುವ ನಿರ್ಧಾರವನ್ನು ಕೈಬಿಡಬೇಕು. ಮುಂಬಡ್ತಿ ನೀಡುವುದು ಆಗಲೇಬೇಕಾದ ಕೆಲಸವಾಗಿದ್ದು ಶೀಘ್ರ ನಡೆಯುವ ನಿರೀಕ್ಷೆ ಇದೆ’ ಎಂದು ಕುಲಪತಿ ಪರಮಶಿವಮೂರ್ತಿ ಹೇಳಿದರು.
‘ವಿಶ್ವವಿದ್ಯಾಲಯಕ್ಕೆ ಈ ವರ್ಷ ₹1.98 ಕೋಟಿ ಅನುದಾನವಷ್ಟೇ ಸಿಗಲಿದೆ. ಇದನ್ನು ₹4 ಕೋಟಿಯಿಂದ ₹5 ಕೋಟಿಗೆ ಹೆಚ್ಚಿಸಿದರೆ ಮಾತ್ರ ತಕ್ಕಮಟ್ಟಿಗೆ ವ್ಯವಸ್ಥಿತವಾಗಿ ವಿಶ್ವವಿದ್ಯಾಲಯ ನಿರ್ವಹಣೆ ಸಾಧ್ಯವಾಗಬಹುದು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.