ADVERTISEMENT

ವಿಜಯನಗರ: ‘ಹುಡಾ’ ಅಧ್ಯಕ್ಷರಾಗಿ ಮೊಹಮ್ಮದ್ ಇಮಾಮ್ ನಿಯಾಜಿ ಅಧಿಕಾರ ಸ್ವೀಕಾರ

​ಪ್ರಜಾವಾಣಿ ವಾರ್ತೆ
Published 14 ಜೂನ್ 2024, 13:09 IST
Last Updated 14 ಜೂನ್ 2024, 13:09 IST
   

ಹೊಸಪೇಟೆ (ವಿಜಯನಗರ): ಹೊಸಪೇಟೆ ನಗರಾಭಿವೃದ್ಧಿ ಪ್ರಾಧಿಕಾರದ (ಹುಡಾ) ಅಧ್ಯಕ್ಷರನ್ನಾಗಿ ಎಚ್‌.ಎನ್‌.ಎಫ್‌.ಮೊಹಮ್ಮದ್ ಇಮಾಮ್‌ ನಿಯಾಜಿ ಅವರನ್ನು ನಿಯೋಜಿಸಿ ಸರ್ಕಾರ ಶುಕ್ರವಾರ ಆದೇಶ ಹೊರಡಿಸಿದ್ದು, ನಿಯಾಜಿ ಅವರು ತಕ್ಷಣದಿಂದಲೇ ಅಧಿಕಾರ ವಹಿಸಿಕೊಂಡಿದ್ದಾರೆ.

ವಿಜಯನಗರ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿಯ ಅಧ್ಯಕ್ಷರೂ ಆಗಿರುವ ನಿಯಾಜಿ ಅವರು ಆಯುಕ್ತ ಈರಣ್ಣ ಬಿರಾದಾರ ಅವರಿಂದ ಅಧಿಕಾರ ವಹಿಸಿಕೊಂಡರು.

ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ನೂತನ ಅಧ್ಯಕ್ಷರು, ಹೊಸದಾಗಿ ರಚನೆಗೊಂಡಿರುವ ವಿಜಯನಗರ ಜಿಲ್ಲೆಯಲ್ಲಿ ಅಭಿವೃದ್ಧಿ ತುರ್ತಾಗಿ ಆಗಬೇಕಿದೆ, ಹೀಗಾಗಿ ಜಿಲ್ಲಾ ಉಸ್ತುವಾರಿ ಸಚಿವರು, ಸ್ಥಳೀಯ ಶಾಸಕರು, ಅಧಿಕಾರಿಗಳೊಂದಿಗೆ ಚರ್ಚಿಸಿ, ಜನತೆಗೆ ಅನುಕೂಲ ಆಗುವ ರೀತಿಯಲ್ಲಿ ಕೆಲಸ ನಿರ್ವಹಿಸಲಾಗುವುದು ಎಂದರು.

ADVERTISEMENT

ಕೆಲವು ಲೇಔಟ್‌ಗಳಿಗೆ ಫಾರಂ ನಂಬರ್‌ 3 ಕೊಡುವ ವಿಚಾರದಲ್ಲಿ ಸಮಸ್ಯೆ ಇರುವ ಬಗ್ಗೆ ಕೇಳಿದಾಗ, ಇದರ ಕುರಿತಂತೆ ಅಧಿಕಾರಿಗಳೊಂದಿಗೆ ಚರ್ಚಿಸಿ, ಜನರಿಗೆ ಅನುಕೂಲವಾಗುವ ಕೆಲಸ ಮಾಡಲಾಗುವುದು ಎಂದರು.

ಮೂರು ತಿಂಗಳ ಹಿಂದೆ ಬೇಸರ: ನಿಯಾಜಿ ಅವರನ್ನು ಮಾರ್ಚ್‌ 15ರಂದು ‘ಹುಡಾ’ ಅಧ್ಯಕ್ಷರನ್ನಾಗಿ ನಿಯೋಜಿಸಲಾಗಿತ್ತು. ಆದರೆ ಸ್ಥಳೀಯ ಶಾಸಕ ಎಚ್.ಆರ್‌.ಗವಿಯಪ್ಪ ಅವರ ತೀವ್ರ ವಿರೋಧದ ಹಿನ್ನೆಲೆಯಲ್ಲಿ ಆದೇಶವನ್ನು ಕೆಲವೇ ಗಂಟೆಗಳಲ್ಲಿ ಹಿಂದೆಗೆದುಕೊಳ್ಳಲಾಗಿತ್ತು. ಸರ್ಕಾರದ ಈ ಕ್ರಮದಿಂದ ಈ ಭಾಗದ ಮುಸ್ಲಿಂ ಸಮುದಾಯದವರು ಬೇಸರಗೊಂಡಿದ್ದರು. ಲೋಕಸಭಾ ಚುನಾವಣೆಯ ಮೇಲೂ ಇದು ಪರಿಣಾಮ ಬೀರಬಹುದು ಎಂದು ಎಚ್ಚರಿಸಿದ್ದರು. ಆದರೆ ಅದರ ಬಳಿಕ ಸಮಾಧಾನಪಡಿಸುವ ಕೆಲಸ ಮುಖ್ಯಮಂತ್ರಿ ಹಂತದಲ್ಲೇ ನಡೆದಿತ್ತು ಹಾಗೂ ಚುನಾವಣಾ ಪ್ರಕ್ರಿಯೆ ಕೊನೆಗೊಂಡ ಬಳಿಕ ನಿಯಾಜಿ ಅವರನ್ನೇ ಮತ್ತೆ ನೇಮಕ ಮಾಡುವ ಭರವಸೆ ನೀಡಲಾಗಿತ್ತು. ಅದರಂತೆ ಇದೀಗ ನಿಯಾಜಿ ಅವರ ನೇಮಕ ಆದೇಶ ಹೊರಡಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.