ADVERTISEMENT

ಹೂವಿನಹಡಗಲಿ | ನಕಲಿ ಸಹಿ ಮಾಡಿ ಬ್ಯಾಂಕ್‌ನಿಂದ ಹಣ ದುರ್ಬಳಕೆ

ನಂದಿಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಹಣ ದುರ್ಬಳಕೆಯ ಮತ್ತೊಂದು ಪ್ರಕರಣ ಬೆಳಕಿಗೆ–ಪ್ರಕರಣ ದಾಖಲು

​ಪ್ರಜಾವಾಣಿ ವಾರ್ತೆ
Published 7 ಜುಲೈ 2024, 16:20 IST
Last Updated 7 ಜುಲೈ 2024, 16:20 IST

ಹೂವಿನಹಡಗಲಿ: ತಾಲ್ಲೂಕಿನ ನಂದಿಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮತ್ತು ಅಭಿವೃದ್ಧಿ ಅಧಿಕಾರಿಯ ಫೋರ್ಜರಿ ಸಹಿಯ ಚೆಕ್ ನೀಡಿ, ಬ್ಯಾಂಕ್‌ನಲ್ಲಿ ₹1.99 ಲಕ್ಷ ಡ್ರಾ ಮಾಡಿಕೊಂಡಿರುವ ಮತ್ತೊಂದು ಹಣ ದುರ್ಬಳಕೆ ಪ್ರಕರಣ ನಡೆಡಿದೆ.

ಕರ್ನಾಟಕ ಗ್ರಾಮೀಣ ಬ್ಯಾಂಕ್ ಸೋಗಿ ಶಾಖೆಯಲ್ಲಿರುವ ನಂದಿಹಳ್ಳಿ ಗ್ರಾಮ ಪಂಚಾಯಿತಿ 14 ಮತ್ತು 15ನೇ ಹಣಕಾಸು ಯೋಜನೆಯ ಖಾತೆಯಿಂದ ಏಪ್ರಿಲ್‌ 3ರಂದು ₹1.99 ಲಕ್ಷ ಹಣವನ್ನು ಕರ್ನಾಟಕ ಗ್ರಾಮೀಣ ಬ್ಯಾಂಕ್ ಧರ್ಮಸಾಗರ ಶಾಖೆಯ ಕೆ. ಶಂಕ್ರಪ್ಪ ಎಂಬುವವರ ಖಾತೆಗೆ ಜಮೆ ಮಾಡಿ ಹಣ ತೆಗೆಯಲಾಗಿದೆ.

ಹಣಕಾಸು ವಹಿವಾಟು ಪರಿಶೀಲನೆ ವೇಳೆ, ಪಂಚಾಯಿತಿ ಅಧ್ಯಕ್ಷೆ ಶೈನಾಜ್ ಬೀ, ಪಿಡಿಒ ಎಂ. ಪ್ರಕಾಶ್ ಅವರ ಫೋರ್ಜರಿ ಸಹಿ ಮಾಡಿ ಹಣ ಲಪಟಾಯಿಸಿರುವುದು ಗೊತ್ತಾಗಿದೆ.

ADVERTISEMENT

ಪಿಡಿಒ ಎಂ. ಪ್ರಕಾಶ್ ಅವರು ಜೂನ್‌ 24ರಂದು ಪಟ್ಟಣ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಿಸಿ, ನಕಲಿ ಸಹಿ ಮಾಡಿ ಹಣ ದುರ್ಬಳಕೆ ಮಾಡಿಕೊಂಡವರ ವಿರುದ್ಧ ಕ್ರಮ ಜರುಗಿಸುವಂತೆ ಮನವಿ ಮಾಡಿದ್ದಾರೆ.

ಕಳೆದ ವರ್ಷ ಗ್ರಾಮ ವಿಕಾಸ ಯೋಜನೆ ಮತ್ತು 15ನೇ ಹಣಕಾಸು ಯೋಜನೆಯ ₹25 ಲಕ್ಷ ಹಣವನ್ನು ಇದೇ ರೀತಿ ನಕಲಿ ಸಹಿ ಮಾಡಿ ಪಂಚಾಯಿತಿ ಹಣ ದೋಚಲಾಗಿತ್ತು. ಈ ಕುರಿತಾಗಿಯೂ ಹಿಂದೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದಶಕದಿಂದ ನಂದಿಹಳ್ಳಿ ಗ್ರಾಮ ಪಂಚಾಯಿತಿಗೆ ಹಣ ದುರ್ಬಳಕೆ, ಅವ್ಯವಹಾರಗಳ ಕಳಂಕ ಮೆತ್ತಿಕೊಂಡಿದೆ. ಮೃತರ ಹೆಸರಲ್ಲಿ ಖೊಟ್ಟಿ ದಾಖಲೆ ಸೃಷ್ಟಿಸಿ ನರೇಗಾ ಯೋಜನೆ ಹಣ ದುರ್ಬಳಕೆ ಮಾಡಿಕೊಂಡಿದ್ದ ಈ ಗ್ರಾ.ಪಂನ ಹಿಂದಿನ ಆಡಳಿತ ಮಂಡಳಿಯ ಏಳು ಸದಸ್ಯರು ಸದಸ್ಯತ್ವ ರದ್ದತಿ ಶಿಕ್ಷೆಗೆ ಗುರಿಯಾಗಿದ್ದರು. ಪಂಚಾಯಿತಿಗೆ ಸಂಬಂಧಿಸಿದ ಕೆಲವು ಪ್ರಕರಣಗಳು ಹೈಕೋರ್ಟ್‌ನಲ್ಲಿ ವಿಚಾರಣೆ ಹಂತದಲ್ಲಿರುವಾಗಲೇ ಈಗ ಮತ್ತೊಂದು ಹಣ ದುರ್ಬಳಕೆ ಪ್ರಕರಣದ ಕುರಿತಂತೆ ದೂರು ಸಲ್ಲಿಕೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.