ADVERTISEMENT

ಬಿಡಿಸಿಸಿ ಬ್ಯಾಂಕ್‌ ಅಧ್ಯಕ್ಷರಾಗಿ ಕೆ.ತಿಪ್ಪೇಸ್ವಾಮಿ, ಉಪಾಧ್ಯಕ್ಷರಾಗಿ ದಾರುಕೇಶ್

ಅವಿರೋಧ ಆಯ್ಕೆ: ಮುಕ್ತಿ ಕಂಡ ರಾಜಕೀಯ ಹಗ್ಗ ಜಗ್ಗಾಟ

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2023, 11:37 IST
Last Updated 15 ಡಿಸೆಂಬರ್ 2023, 11:37 IST
<div class="paragraphs"><p>ತಿಪ್ಪೇಸ್ವಾಮಿ(ಎಡ), ದಾರುಕೇಶ್(ಬಲ)</p></div>

ತಿಪ್ಪೇಸ್ವಾಮಿ(ಎಡ), ದಾರುಕೇಶ್(ಬಲ)

   

ಹೊಸಪೇಟೆ (ವಿಜಯನಗರ): ಬಳ್ಳಾರಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ನ (ಬಿಡಿಸಿಸಿ) ನೂತನ ಅಧ್ಯಕ್ಷರಾಗಿ ಕೆ.ತಿಪ್ಪೇಸ್ವಾಮಿ ಮತ್ತು ಉಪಾಧ್ಯಕ್ಷರಾಗಿ ಐ.ದಾರುಕೇಶ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಎರಡು ಬಾರಿ ಮುಂದೂಡಿದ್ದ ‌‌ಚುನಾವಣೆ ಶುಕ್ರವಾರ ಮಧ್ಯಾಹ್ನ ನಿಗದಿಪಡಿಸಿದಂತೆ ಪ್ರಕ್ರಿಯೆ ಆರಂಭಿಸಲಾಗಿ ಚೊಕ್ಕ ಬಸವನಗೌಡ ಅವರು ಅಧ್ಯಕ್ಷ ಸ್ಥಾನದ ತಮ್ಮ ನಾಮಪತ್ರ ವಾಪಸ್‌ ಪಡೆದರು ಹಾಗೂ ಪಿ.ಮೂಕಯ್ಯ ಸ್ವಾಮಿ ಅವರು ಉಪಾಧ್ಯಕ್ಷ ಸ್ಥಾನದ ತಮ್ಮ ನಾಮಪತ್ರ ವಾಪಸ್ ಪಡೆದರು. ಹೀಗಾಗಿ ತಿಪ್ಪೇಸ್ವಾಮಿ ಮತ್ತು ದಾರುಕೇಶ್‌ ಅವರು ಕಣದಲ್ಲಿ ಉಳಿದ ಏಕೈಕ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಆಕಾಂಕ್ಷಿಗಳು ಎಂಬ ನೆಲೆಯಲ್ಲಿ ಸರ್ವಾನುಮತದಿಂದ ಅವಿರೋಧವಾಗಿ ಆಯ್ಕೆಯಾದರು.

ADVERTISEMENT

ಬ್ಯಾಂಕಿನ ಆಡಳಿತ ಮಂಡಳಿಯ 14 ನಿರ್ದೇಶಕರು ಹಾಗೂ ಸರ್ಕಾರದ ಇಬ್ಬರು ನಾಮ ನಿರ್ದೇಶಿತರು ಸೇರಿದಂತೆ ಎಲ್ಲಾ 16 ಮಂದಿ ಪಾಲ್ಗೊಂಡು ಅವಿರೋಧ ಆಯ್ಕೆಯಾಗಲು ಸಹಕರಿಸಿದರು ಎಂದು ಚುನಾವಣಾ ಅಧಿಕಾರಿಯೂ ಆಗಿರುವ ತಹಶೀಲ್ದಾರ್ ವಿಶ್ವಜೀತ್ ಮೆಹ್ತಾ ಚುನಾವಣೆ ಪ್ರಕ್ರಿಯೆ ನಂತರ ಮಾಧ್ಯಮಗಳಿಗೆ ತಿಳಿಸಿದರು.

ಕೆ.ತಿಪ್ಪೇಸ್ವಾಮಿ ಅವರು ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘಗಳ ಮೂಲಕ ಕೂಡ್ಲಿಗಿ ತಾಲೂಕಿನಿಂದ ಆಯ್ಕೆ ಅವಿರೋದ ಆಯ್ಕೆಯಾಗಿದ್ದರು. ಕಳೆದ ಬಾರಿ ಉಪಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. ಬ್ಯಾಂಕಿನ ಮಾಜಿ ಅಧ್ಯಕ್ಷ ಚೊಕ್ಕ ಬಸವನಗೌಡ ಅವರು ಸಹ  ಅಧ್ಯಕ್ಷ ಸ್ಥಾನಕ್ಕೆ ತೀವ್ರ ಪೈಪೋಟಿ ನಡೆಸಿದ್ದರು. ನಾನಾ ತಂತ್ರಗಾರಿಕೆಯ ಫಲವಾಗಿ ಕೋರಂ ಕೊರತೆಯ ಕಾರಣದಿಂದ ಎರಡು ಬಾರಿ ಚುನಾವಣೆ ಮುಂದೂಡಿಕೆಯಾಗಿತ್ತು.

ರಾಜಕೀಯ ಇಲ್ಲ: ‘ಇಬ್ಬರು ನಿರ್ದೇಶಕರ ಆಯ್ಕೆಗೆ ಸಂಬಂಧಿಸಿದ ವ್ಯಾಜ್ಯ ನ್ಯಾಯಾಲಯದಲ್ಲಿ ಇದ್ದ ಕಾರಣ ಮೊದಲ ಬಾರಿ ಕರೆದ ಚುನಾವಣೆ ವೇಳೆ ಒಗ್ಗೂಡಿ ನಿರ್ಧಾರ ಕೈಗೊಳ್ಳಲು ಸಮಯ ಸಿಕ್ಕಿರಲಿಲ್ಲ. ಎರಡನೇ ಬಾರಿಗೆ ಚುನಾವಣೆ ನಿಗದಿಯಾದಾಗ ಮುಖ್ಯಮಂತ್ರಿ ಅವರು ಕರೆದಿದ್ದ ಸಭೆಗೆ ಹೋಗಬೇಕಿದ್ದರಿಂದ ಚುನಾವಣಾ ಪ್ರಕ್ರಿಯೆಯಲ್ಲಿ ಗೈರಾಗಬೇಕಾಯಿತು. ಈ ಬಾರಿ ಸೌಹಾರ್ದಯುತವಾಗಿ ಆಯ್ಕೆ ಪ್ರಕ್ರಿಯೆ ನಡೆದಿದೆ. ರಾಜಕೀಯ ತಂತ್ರಗಾರಿಕೆ ಇಲ್ಲಿ ಏನೂ ಇಲ್ಲ. ನಿರ್ದೇಶಕರೆಲ್ಲರೂ ಸಹಕಾರಿಗಳು. ಬ್ಯಾಂಕ್‌ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದು, ಮುಂದಿನ ದಿನಗಳಲ್ಲೂ ಜನರ ವಿಶ್ವಾಸಕ್ಕೆ ತಕ್ಕಂತೆ ಕೆಲಸ ಮಾಡಲಿದೆ’ ಎಂದು ತಿಪ್ಪೇಸ್ವಾಮಿ ಮಾಧ್ಯಮದವರಿಗೆ ತಿಳಿಸಿದರು.

ಕಾಂಗ್ರೆಸ್‌ನ ಎರಡು ಬಣ: 14 ಚುನಾಯಿತ ನಿರ್ದೇಶಕರ ಪೈಕಿ ಕಾಂಗ್ರೆಸ್‌ ಬೆಂಬಲಿತ 10 ಮಂದಿ ಆಯ್ಕೆಯಾಗಿದ್ದರು. ಮೂವರು ಬಿಜೆಪಿ ಬೆಂಬಲಿತರು ಹಾಗೂ ಒಬ್ಬರು ಕಾಂಗ್ರೆಸ್ ಬೆಂಬಲಿತ ಪಕ್ಷೇತರರರು ಆಯ್ಕೆಯಾಗಿದ್ದರು. ಕಾಂಗ್ರೆಸ್ ಪಕ್ಷಕ್ಕೇ ಬಹುಮತ ಇತ್ತಾದರೂ ಆ ಪಕ್ಷದಲ್ಲೇ ಎರಡು ಗುಂಪುಗಳು ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದವು. ಕೆಎಂಎಫ್‌ ಅಧ್ಯಕ್ಷ ಭೀಮ ನಾಯ್ಕ್‌, ಶಾಸಕ ಕಂಪ್ಲಿ ಗಣೇಶ್ ಅವರು ಚೊಕ್ಕಬಸವನಗೌಡರ ಪರವಾಗಿ ಹಾಗೂ ಸಚಿವ ಬಿ.ನಾಗೇಂದ್ರ ಸಹಿತ ಕೆಲವು ಶಾಸಕರು ತಿಪ್ಪೇಸ್ವಾಮಿ ಪರವಾಗಿ ಪರೋಕ್ಷ ಬೆಂಬಲಕ್ಕೆ ನಿಂತಿದ್ದರು. ತಿಪ್ಪೇಸ್ವಾಮಿ ಅವರಿಗೆ ಮೂವರು ಬಿಜೆಪಿ ಸದಸ್ಯರ ಬೆಂಬಲವೂ ಇತ್ತು. ಆದರೂ ಕೋರಂ ಕೊರತೆಯಾಗುವಂತೆ ನೋಡಿಕೊಳ್ಳುವ ಮೂಲಕ ಚೊಕ್ಕಬಸವನಗೌಡ ಬಣ ಮೊದಲ ಸಲ ಕರೆದಿದ್ದ ಚುನಾವಣೆಯನ್ನು ಮುಂದೂಡುವಂತೆ ಮಾಡುವಲ್ಲಿ ಯಶಸ್ವಿಯಾಗಿತ್ತು. ಅಂದು ಎಂಟು ಮಂದಿ ಸದಸ್ಯರು ಮಾತ್ರ ಇದ್ದರು. ಒಬ್ಬ ಸದಸ್ಯು ಹೆಚ್ಚಿಗೆ ಇದ್ದಿದ್ದರೆ ಅಂದೇ ಚುನಾವಣೆ ನಡೆದು ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ನಡೆಯುತ್ತಿತ್ತು. ಎರಡನೇ ಬಾರಿ ಚುನಾವಣಾ ಪ್ರಕ್ರಿಯೆ ನಡೆದಾಗ ಯಾವೊಬ್ಬ ನಿರ್ದೇಶಕರೂ ಹಾಜರಾಗಿರಲಿಲ್ಲ. ಮೂರನೇ ಬಾರಿಗೆ ಶುಕ್ರವಾರ ಚುನಾವಣೆ ನಿಗದಿಯಾದ ಹಿನ್ನೆಲೆಯಲ್ಲಿ ಕಳೆದ ಮೂರು ದಿನಗಳಲ್ಲಿ ಬೆಳಗಾವಿ ಅಧಿವೇಶನದ ನಡುವೆಯೇ  ಬಿರುಸಿನ ಸಭೆ,  ಚರ್ಚೆ ನಡೆದಿತ್ತು. ಕೊನೆಗೆ ಮುಖ್ಯಮಂತ್ರಿ, ಡಿಸಿಎಂ ಹಾಗೂ ಇತರ ಕೆಲವು ಸಚಿವರ ಸಲಹೆಯಂತೆ ಇದೀಗ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಅವಿರೋಧ ಆಯ್ಕೆ ನಡೆದಿದೆ.

ಚುನಾವಣೆ ಪ್ರಕ್ರಿಯೆ ನಂತರ ನಡೆದ ಮಾಧ್ಯಮಗೋಷ್ಠಿಯಲ್ಲಿ ಭೀಮ ನಾಯ್ಕ್ ಸಹ ಹಾಜರಿದ್ದರು. ಬಣ ರಾಜಕೀಯ ಇಲ್ಲ ಎಂದಷ್ಟೇ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.