ADVERTISEMENT

ಹೊಸಪೇಟೆ ಬಂದ್‌ಗೆ ಸಿಗದ ಬೆಂಬಲ; ಧರಣಿ ನಡೆಸಿದ ಶ್ರೀರಾಮ ಸೇನೆ ಕಾರ್ಯಕರ್ತರ ಬಂಧನ

​ಪ್ರಜಾವಾಣಿ ವಾರ್ತೆ
Published 2 ಜುಲೈ 2022, 9:22 IST
Last Updated 2 ಜುಲೈ 2022, 9:22 IST
   

ಹೊಸಪೇಟೆ (ವಿಜಯನಗರ): ರಾಜಸ್ತಾನದ ಉದಯಪುರದಲ್ಲಿ ಇತ್ತೀಚೆಗೆ ನಡೆದ ಕನ್ಹಯ್ಯಲಾಲ್ ಹತ್ಯೆ ಘಟನೆ ಖಂಡಿಸಿ ನಗರದ ಪಾದಗಟ್ಟೆ ಆಂಜನೇಯ ದೇವಸ್ಥಾನದ ಎದುರು ಶನಿವಾರಪ್ರತಿಭಟನೆ ನಡೆಸುತ್ತಿದ್ದ ಶ್ರೀರಾಮ ಸೇನೆಯ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದರು.

ಕಾರ್ಯಕರ್ತರು ರಸ್ತೆಯ ಮೇಲೆ ಕುಳಿತು ಪ್ರತಿಭಟನೆ ನಡೆಸುತ್ತಿದ್ದರು. ಹತ್ಯೆ ಘಟನೆ ಖಂಡಿಸಿ ಘೋಷಣೆ ಕೂಗುತ್ತಿದ್ದರು. ಈ ವೇಳೆ ಸ್ಥಳಕ್ಕಾಗಮಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್. ಕೆ ಅವರು,'ರಸ್ತೆ ಮೇಲೆ ವೇದಿಕೆ ನಿರ್ಮಿಸಿ ಪ್ರತಿಭಟನೆ ನಡೆಸಲು ನಿಮಗೆ ಅನುಮತಿ ಕೊಟ್ಟಿರಲಿಲ್ಲ. ಆದರೂ, ಪ್ರತಿಭಟನೆ ನಡೆಸುತ್ತಿರುವುದೇಕೇ? ಎಲ್ಲರನ್ನೂ ಬಂಧಿಸಿ ಠಾಣೆಗೆ ಕರೆದೊಯಿರಿ' ಎಂದು ಸಿಬ್ಬಂದಿಗೆ ಸೂಚಿಸಿದರು.

ಈ ವೇಳೆ ಕೆಲವರು, ಜೈ ಶ್ರೀರಾಮ ಎಂದು ಘೋಷಣೆ ಕೂಗುತ್ತ ಸಿಟ್ಟು ಹೊರಹಾಕಿದರು. ಇದರಿಂದ ಸಿಟ್ಟಾದ ಎಸ್ಪಿ, ಕೈಗೆ ಲಾಠಿ ತೆಗೆದುಕೊಂಡು ಸುಮ್ಮನೆ ಇಲ್ಲಿಂದ ನಿರ್ಗಮಿಸಬೇಕು ಎಂದು ಹೇಳಿದರು. ಸ್ಥಳದಲ್ಲಿ ಸೇರಿದ್ದ ಜನರನ್ನು ಚದುರಿಸಿದರು. ಬಳಿಕ ರಸ್ತೆ ಮಧ್ಯದಲ್ಲಿ ನಿರ್ಮಿಸಿದ್ದ ವೇದಿಕೆಯನ್ನು ಸಿಬ್ಬಂದಿಯಿಂದ ತೆರವುಗೊಳಿಸಿದರು.

ADVERTISEMENT

'ಪ್ರತಿಭಟನೆ ನಡೆಸಲು ಅನುಮತಿ ಪಡೆದಿರಲಿಲ್ಲ. ಅನುಮತಿ ಪಡೆದಿದ್ದರೆ ಮೈದಾನದಲ್ಲಿ ಅವಕಾಶ ಕಲ್ಪಿಸಲಾಗುತ್ತಿತ್ತು. ಆದರೆ, ರಸ್ತೆ ಮಧ್ಯೆ ಪ್ರತಿಭಟನೆ ನಡೆಸಿದರೆ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ. ಹೀಗಾಗಿಯೇ ಎಲ್ಲರನ್ನೂ ಇಲ್ಲಿಂದ ತೆರವು ಮಾಡಲಾಗಿದೆ ಎಂದು ಎಸ್ಪಿ ಹೇಳಿದರು.

'ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದವರನ್ನು ಬಂಧಿಸಿರುವುದು ಖಂಡನಾರ್ಹ' ಎಂದು ಶ್ರೀರಾಮ ಸೇನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಗಂಗಾಧರ ಕುಲಕರ್ಣಿ ತಿಳಿಸಿದರು. ಸೇನೆಯ ವಿಭಾಗೀಯ ಕಾರ್ಯದರ್ಶಿ ಸಂಜೀವ್ ಮರಡಿ, ಮುಖಂಡರಾದ ಜಗದೀಶ್ ಕಮಾಟಗಿ, ಸೂರಿ ಬಂಗಾರು, ಅನೂಪ್ ಮೊದಲಾದವರು ಇದ್ದರು.

ಸಿಗದ ಬೆಂಬಲ:

ಕನ್ಹಯ್ಯಲಾಲ್ ಹತ್ಯೆ ಖಂಡಿಸಿ ಶ್ರೀರಾಮ ಸೇನೆ ಕರೆಕೊಟ್ಟಿದ್ದ ಹೊಸಪೇಟೆ ಬಂದ್ ಗೆ ಸಾರ್ವಜ‌ನಿಕರಿಂದ ಬೆಂಬಲ ಸಿಗಲಿಲ್ಲ. ನಗರದಲ್ಲಿ ಸಹಜ ವಾತಾವರಣವಿತ್ತು. ಬೆಳಿಗ್ಗೆ ಎಂದಿನಂತೆ ಅಂಗಡಿ, ಹೋಟೆಲ್ ಗಳು ಬಾಗಿಲು ತೆರದಿದ್ದವು. ಶಾಲಾ, ಕಾಲೇಜು, ಬಸ್ ಸಂಚಾರ ಸಹಜವಾಗಿತ್ತು. ಪ್ರತಿಭಟನೆ ನಡೆಸಿದ ಪಾದಗಟ್ಟೆ ಆಂಜನೇಯ ದೇವಸ್ಥಾನ ಬಳಿ ಕೆಲ ಅಂಗಡಿಗಳವರು ಬಂದ್ ಬೆಂಬಲಿಸಿ ಸ್ವಯಂಪ್ರೇರಿತರಾಗಿ ಬಾಗಿಲು ಮುಚ್ಚಿದರು.

ಬೇಡಿಕೆಗಳೇನು?:

ಕನ್ಹಯ್ಯಲಾಲ್ ಕುಟುಂಬಕ್ಕೆ ಸರ್ಕಾರ ₹50 ಲಕ್ಷ ಪರಿಹಾರ ವಿತರಿಸಬೇಕು. ರಾಷ್ಟ್ರೀಯ ತನಿಖಾ ದಳದಿಂದ ತನಿಖೆ ನಡೆಸಬೇಕು. ಹತ್ಯೆ ಮಾಡಿದವರಿಗೆ ಗಲ್ಲು ಶಿಕ್ಷೆ ವಿಧಿಸಬೇಕು. ಇಂತಹ ಘಟನೆಗಳು ಮರುಕಳಿಸದಂತೆ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಶ್ರೀರಾಮ ಸೇನೆ ಮುಖಂಡರಯ ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.