ADVERTISEMENT

ಹೊಸಪೇಟೆ: ಧರಣಿ ಸ್ಥಳಕ್ಕೆ ಬಂದ ಜಿಲ್ಲಾಧಿಕಾರಿ; ಸಿಕ್ಕಿದ್ದು ತನಿಖೆಯ ಭರವಸೆ

​ಪ್ರಜಾವಾಣಿ ವಾರ್ತೆ
Published 26 ಆಗಸ್ಟ್ 2024, 16:18 IST
Last Updated 26 ಆಗಸ್ಟ್ 2024, 16:18 IST
   

ಹೊಸಪೇಟೆ: ನಗರದ ಅನಂತಶಯನಗುಡಿ ವಾರ್ಡ್‌ 7ರಲ್ಲಿ ಎರಡು ದಿನದ ಹಿಂದೆ ಬಾಲಕನ ಸಾವಿನ ಹಿನ್ನೆಲೆಯಲ್ಲಿ ಪೌರಾಯುಕ್ತರನ್ನು ತಕ್ಷಣ ಅಮಾನತು ಮಾಡಬೇಕೆಂಬ ನಗರಸಭೆ ಸದಸ್ಯರ ಒತ್ತಾಯಕ್ಕೆ ಮಣಿಯದ ಅಡಳಿತಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್, ಯಾರಿಂದ ತಪ್ಪಾಗಿದೆ ಎಂಬುದನ್ನು ತನಿಖೆಯಿಂದ ಕಂಡುಕೊಂಡು ಬಳಿಕ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ.

ದಿನವಿಡೀ ಧರಣಿ ನಡೆದರೂ ‘ಹಲವು ಸಭೆಗಳಲ್ಲಿ ಬ್ಯುಸಿ’ ಆಗಿದ್ದ ಡಿ.ಸಿ ಅವರು ರಾತ್ರಿ 8.30ರ ಸುಮಾರಿಗೆ ನಗರಸಭೆ ಆವರಣದೊಳಗೆ ಬಂದರು. ಪಕ್ಷಾತೀತವಾಗಿ ಧರಣಿ ನಡೆಸಿದ್ದ ಸದಸ್ಯರ ಅಹವಾಲು ಆಲಿಸಿದ ಅವರು, ಈಗಲೇ ಆಯುಕ್ತರನ್ನು ಅಮಾನತು ಮಾಡಲಾಗದು. ಜಿಲ್ಲಾ ಯೋಜನಾ ಕೋಶದ ಯೋಜನಾ ನಿರ್ದೇಶಕ ಮನೋಹರ್‌ ಅವರಿಂದ ತನಿಖೆಗೆ ಆದೇಶ ನಿಡಲಾಗಿದೆ. ವರದಿ ಬಂದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು.

ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ, ‘ಅಧಿಕಾರಿಗಳು ಜನರ ಅಹವಾಲುಗಳಿಗೆ ಸ್ಪಂದಿಸಲೇಬೇಕು. ಆಯುಕ್ತರು ತಮ್ಮ ಅಹವಾಲು ಕೇಳುತ್ತಿಲ್ಲ ಎಂದು ಹಲವು ಮಹಿಳಾ ಸದಸ್ಯರು ಆರೋಪಿಸಿದ್ದಾರೆ. ಇದು ಗಂಭೀರ ವಿಚಾರ. ತಮ್ಮ ವರ್ತನೆ ಬದಲಿಸಲೇಬೇಕು ಎಂದು ತಾಕೀತು ಮಾಡುತ್ತೇನೆ, ಉಳಿದಂತೆ ಬಾಲಕನ ಸಾವಿಗೆ ಕಾರಣ ಏನು ಎಂಬುದನ್ನು ತನಿಖೆಯ ವರದಿ ಬಂದ ಬಳಿಕ ಕ್ರಮ ಕೈಗೊಳ್ಳಲಾಗುವುದು’ ಎಂದರು.

ADVERTISEMENT

ಮೃತ ಬಾಲಕನ ಕುಟುಂಬದವರಿಗೆ ಪರಿಹಾರ ನೀಡಲು ಸದ್ಯ ಅವಕಾಶ ಇಲ್ಲ, ಆದರೆ ಆ ನಿಟ್ಟಿನಲ್ಲಿ ಪ್ರಯತ್ನಿಸಿ ಶಿಫಾರಸು ಮಾಡಲಾಗುವುದು ಎಂದರು.

ಪ್ರತಿಭಟನೆಯ ಕಾವು: ದಿನವಿಡೀ ಧರಣಿ ನಡೆದರೂ ಸ್ಥಳಕ್ಕೆ ಡಿ.ಸಿ, ಶಾಸಕರು ಬಾರದ ಕಾರಣ ನಗರಸಭೆ ಸದಸ್ಯರು ತೀವ್ರ ಆಕ್ರೋಶಗೊಂಡಿದ್ದರು. ಬಿಜೆಪಿ ಯುವ ಮುಖಂಡ ಸಿದ್ಧಾರ್ಥ ಸಿಂಗ್ ಅವರು ಸಂಜೆ ಸ್ಥಳಕ್ಕೆ ಬಂದು ಸುರಿಯುತ್ತಿದ್ದ ಮಳೆಯಲ್ಲೇ ಧರಣಿ ನಿರತರಿಗೆ ಬೆಂಬಲ ಸೂಚಿಸಿದರು ಹಾಗೂ ಹೋರಾಟ ತೀವ್ರಗೊಳಿಸುವ ಎಚ್ಚರಿಕೆ ನೀಡಿದ್ದರು. ಮತ್ತೆ ರಾತ್ರಿಯೂ ಬಂದು ಜಿಲ್ಲಾಧಿಕಾರಿ ಸ್ಥಳಕ್ಕೆ ಬಾರದೆ ಇದ್ದರೆ ರಾತ್ರಿ ಅಲ್ಲೇ ಮಲಗುವ ಯೋಜನೆಯನ್ನೂ ರೂಪಿಸಿದ್ದರು. ಸದಸ್ಯರೆಲ್ಲರೂ ಅದಕ್ಕೆ ಸಜ್ಜಾಗಿದ್ದರು.

ಮೃತ ಬಾಲಕನ ಪೋಷಕರು, ಸ್ಥಳೀಯ ನಿವಾಸಿಗಳು ಸಹ ಬೆಳಿಗ್ಗೆ 10 ಗಂಟೆಯಿಂದಲೇ ಧರಣಿಯಲ್ಲಿ ಪಾಲ್ಗೊಂಡಿದ್ದರು. ನಗರದಲ್ಲೇ ಇದ್ದ ಜಿಲ್ಲಾಧಿಕಾರಿ ಎಂ.ಎಸ್‌.ದಿವಾಕರ್ ಅವರು ಸ್ಥಳಕ್ಕೆ ಬಾರದೆ ಇರುವುದಕ್ಕೆ ಹಲವು ನದಸ್ಯರು ಆಕ್ಷೇಪ ವ್ಯಕ್ತಪಡಿಸಿದರು.

‘ನಗರಸಭೆಯ ಆಡಳಿತಾಧಿಕಾರಿ ಸದ್ಯ ಜಿಲ್ಲಾಧಿಕಾರಿ ಅವರೇ ಇದ್ದಾರೆ. ನಮಗೆ ನ್ಯಾಯ ಕೊಡಿಸಬೇಕು, ಪರಿಹಾರ ಕೊಡಿಸಬೇಕು. ಅಯುಕ್ತರನ್ನು ಅಮಾನತುಗೊಳಿಸಬೇಕು, ಅಲ್ಲಿಯವರೆಗೆ ಸ್ಥಳದಿಂದ ಕದಲುವುದಿಲ್ಲ’ ಎಂದು ನಗರಸಭೆ ಸದಸ್ಯರು ಮತ್ತು ಬಾಲಕನ ಪೋಷಕರು ಪಟ್ಟು ಹಿಡಿದಿದ್ದರು.

‘ಜಿಲ್ಲಾಧಿಕಾರಿ ಅವರು ಕೆಲವು ಮಹತ್ವದ ಸಭೆಗಳಲ್ಲಿ ಬ್ಯುಸಿ ಆಗಿದ್ದಾರೆ. ಬರುವುದಕ್ಕೆ ವಿಳಂಬವಾಗುತ್ತದೆ’ ಎಂಬ ಸಂದೇಶವನ್ನು ಪೊಲೀಸರು ಧರಣಿ ನಿರತರಿಗೆ ತಿಳಿಸಿದ್ದರು. ಆದರೆ ಡಿ.ಸಿ ಬರುವ ತನಕ ಧರಣಿ ಕೊನೆಗೊಳಿಸುವುದಿಲ್ಲ ಎಂದು ಧರಣಿ ನಿರತರು ಹೇಳಿದ್ದರು. ಸಂಜೆ ಸುರಿದ ಮಳೆಯನ್ನೂ ಲೆಕ್ಕಿಸದೆ ಸ್ಥಳದಲ್ಲೇ ತಳವೂರಿದ್ದರು.

ಕಣ್ಣೀರಲ್ಲೇ ಕೈತೊಳೆದ ಕುಟುಂಬ: ಮೃತ ಬಾಲಕನ ವಿಚಾರವನ್ನು ಆಗಾಗ ಭಾಷಣಕಾರರು ಆಡುತ್ತಿದ್ದರು. ಆಗ ಬಾಲಕನ ತಾಯಿ, ತಂದೆ, ಅಜ್ಜಿ ಮತ್ತು ಕುಟುಂಬದ ಇತರ ಸದಸ್ಯರು ಕಣ್ಣೀರು ಹಾಕುತ್ತಿದ್ದರು. ಮೃತಪಟ್ಟ ವಿರಾಟನ ಭಾವಚಿತ್ರದ ಜತೆಗೆ ಈಚೆಗೆ ನಾಯಿ ಕಚ್ಚಿ ಗಾಯಗೊಂಡ ಬಾಲಕನ ಭಾವಚಿತ್ರವನ್ನೂ ಪ್ರತಿಭಟನಕಾರರು ಹಿಡಿದಿದ್ದರು. ಆಯುಕ್ತರಿಗೆ ಧಿಕ್ಕಾರ ಕೂಗಿದ್ದಲ್ಲದೆ, ಶಾಸಕರನ್ನೂ ತರಾಟೆಗೆ ತೆಗೆದುಕೊಳ್ಳಲಾಯಿತು.

‘ಮಾದಿಗ ಅಧಿಕಾರಿ ವಿರುದ್ಧ ಕ್ರಮ ಸಲ್ಲ’

ಬಾಲಕನ ಸಾವಿಗೆ ಯಾರು ಕಾರಣ ಎಂಬುದನ್ನು ತನಿಖೆಗೆ ಒಳಪಡಿಸಬೇಕು. ತನಿಖೆಯ ವೇಳೆ ಆಯುಕ್ತರದೇ ತಪ್ಪು ಎಂದಾದರೆ ಕ್ರಮ ಕೈಗೊಳ್ಳಿ, ಇಲ್ಲವಾದರೆ ಯಾರು ಕಾರಣರೋ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೇ ಹೊರತು ಆಯುಕ್ತರನ್ನು ಅಮಾನತುಗೊಳಿಸುವ ದಾರಿ ಹಿಡಿಯಬಾರದು ಎಂದು ಒತ್ತಾಯಿಸಿ ವಿಜಯನಗರ ಜಿಲ್ಲಾ ಡಾ.ಬಿ.ಆರ್.ಅಂಬೇಡ್ಕರ್‌ ಸಂಘದ ವತಿಯಿಂದ ಸೋಮವಾರ ಸಂಜೆ ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್ ಅವರಿಗೆ ಮನವಿ ಸಲ್ಲಿಸಲಾಯಿತು.

ಮಾದಿಗ ಸಮುದಾಯದ ಮುಖಂಡರಾದ ಸ್ಲಂ ರಾಮಚಂದ್ರ, ಸಿ.ಆರ್. ಭರತ್ ಕುಮಾರ್, ವೀರಸ್ವಾಮಿ,ವಿಜಯಕುಮಾರ್‌, ರಾಮಾಂಜನಿ, ಈರಣ್ಣ ಇತರರು ಈ ಮನವಿ ಸಲ್ಲಿಸಿ, ಪೌರಾಯುಕ್ತ ಚಂದ್ರಪ್ಪ ಅವರು ಮಾದಿಗ ಸಮುದಾಯಕ್ಕೆ ಸೇರಿದವರು ಎಂಬ ಕಾರಣಕ್ಕೆ ಅವರ ವಿರುದ್ಧ ಸಲ್ಲದ ಆರೋಪ ಮಾಡಲಾಗಿದೆ. ಈ ಹಿಂದೆ ಇಂತಹದೇ ಘಟನೆಗಳು ನಡೆದಾಗ ಆಯುಕ್ತರನ್ನು ಹೊಣೆಗಾರನ್ನಾಗಿ ಮಾಡಿರಲಿಲ್ಲ. ಈಗ ತನಿಖೆ ನಡೆಸಿ ಯಾರು ತಪ್ಪು ಎಸಗಿದ್ದಾರೆ ಎಂಬುದನ್ನು ಖಚಿತಪಡಿಸಿಕೊಂಡು ಕ್ರಮ ಕೈಗೊಳ್ಳಬೇಕೇ ಹೊರತು ನೇರವಾಗಿ ಆಯುಕ್ತರನ್ನು ಹೊಣೆಗಾರರನ್ನಾಗಿ ಮಾಡುವುದು ಸರಿಯಲ್ಲ ಎಂದು ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.