ಹೊಸಪೇಟೆ (ವಿಜಯನಗರ): ಜಿಲ್ಲೆಯಲ್ಲಿ ಮಳೆ ಸ್ವಲ್ಪ ಬಿಡುವು ಕೊಟ್ಟಿದ್ದರೂ ಕೆಲವು ದಿನಗಳಿಂದ ಸುರಿದ ಮಳೆಯಿಂದ ಹಗರಿಬೊಮ್ಮನಹಳ್ಳಿ ತಾಲ್ಲೂಕಿನಲ್ಲಿ 150 ಎಕರೆಗೂ ಹೆಚ್ಚು ಪ್ರದೇಶದಲ್ಲಿ ಬೆಳೆದಿದ್ದ ಹಾಗೂ ಕಟಾವಿಗೆ ಬಂದಿದ್ದ ಈರುಳ್ಳಿ ಕೊಳೆತಿದೆ. ಇದರಿಂದ ರೈತರಿಗೆ ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದೆ.
ಹೊಸಪೇಟೆ ತಾಲ್ಲೂಕಿನಲ್ಲಿ ಕಟಾವಿನ ಹಂತಕ್ಕೆ ಬಂದಿದ್ದ ನೂರಾರು ಎಕರೆ ಭತ್ತ ಕೂಡ ನೆಲಕಚ್ಚಿದೆ. ಹರಪನಹಳ್ಳಿ ತಾಲ್ಲೂಕಿನಲ್ಲಿ ಐದು ಮನೆಗಳಿಗೆ ಭಾಗಶಃ ಹಾನಿಯಾಗಿದೆ. ಕಾನಹೊಸಹಳ್ಳಿ ಸಮೀಪದ ಹುಲಿಕೆರೆಯ ಕೆರೆ ಐದು ದಶಕಗಳ ನಂತರ ಶುಕ್ರವಾರ ರಾತ್ರಿ ಕೋಡಿ ಬಿದ್ದಿದೆ.
ತುಂಗಭದ್ರಾ ಜಲಾಶಯದ ಒಳಹರಿವಿನ ಪ್ರಮಾಣ 73,241 ಕ್ಯುಸೆಕ್ ಇದ್ದು, ಅಣೆಕಟ್ಟೆಯಿಂದ 63 ಸಾವಿರ ಕ್ಯುಸೆಕ್ ನೀರನ್ನು ನದಿಗೆ ಬಿಡಲಾಗುತ್ತಿದೆ. ಹೀಗಾಗಿ ಹಂಪಿಯ ಪುರಂದರ ಮಂಟಪ ಬಹುತೇಕ ಮುಳುಗಿದ ಸ್ಥಿತಿಯಲ್ಲೇ ಇದೆ.
ಆಲಮಟ್ಟಿ (ವಿಜಯಪುರ ಜಿಲ್ಲೆ) ವರದಿ: ಕರ್ನಾಟಕದ ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿ ಮೂರು–ನಾಲ್ಕು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಆಲಮಟ್ಟಿ ಜಲಾಶಯದ ಒಳಹರಿವು ಶನಿವಾರ 62,581 ಕ್ಯುಸೆಕ್‌ಗೆ ಹೆಚ್ಚಳವಾಗಿದೆ.
ಆಗಸ್ಟ್‌ನಲ್ಲಿ ಆಲಮಟ್ಟಿ ಜಲಾಶಯ ತನ್ನ ಗರಿಷ್ಠ ಸಂಗ್ರಹ ಸಾಮರ್ಥ್ಯ 519.60 ಮೀಟರ್ ಎತ್ತರ ತಲುಪಿತ್ತು. ಅಂದಿನಿಂದ ನಿತ್ಯ 10 ರಿಂದ 20 ಸಾವಿರ ಕ್ಯುಸೆಕ್ ನೀರು ಜಲಾಶಯಕ್ಕೆ ಹರಿದು ಬರುತ್ತಲೇ ಇದೆ. ಇದೇ ನೀರನ್ನು ಕೃಷ್ಣಾ ಅಚ್ಚುಕಟ್ಟು ಪ್ರದೇಶದ ಎಲ್ಲಾ ಕಾಲುವೆಗಳಿಗೆ ಮುಂಗಾರು ಹಂಗಾಮಿಗೆ ನಿತ್ಯ ಹರಿಸಲಾಗುತ್ತಿದೆ. ಶುಕ್ರವಾರದಿಂದ ಜಲಾಶಯಕ್ಕೆ ಒಳಹರಿವು ಮತ್ತಷ್ಟು ಹೆಚ್ಚಾಗಿದೆ.
ಕೋಡಿ ಬಿದ್ದ ದ್ವಾರಸಮುದ್ರ ಕೆರೆ (ಹಳೇಬೀಡು ವರದಿ): ಶುಕ್ರವಾರ ಸುರಿದ ರಭಸದ ಮಳೆಯಿಂದ ಇಲ್ಲಿನ ದ್ವಾರಸಮುದ್ರ ಕೆರೆ ಕೋಡಿ ಬಿದ್ದು, ರಸ್ತೆ ಹಾಗೂ ಗದ್ದೆಗಳಿಗೆ ನೀರು ನುಗ್ಗಿದೆ.
ಹಾಲಿನ ಡೇರಿ ಸಮೀಪದ ಗದ್ದೆ ಬಯಲಿನಲ್ಲಿ ಬಂದೋಬಸ್ತ್ ಹಾಗೂ ವಿಸ್ತಾರವಾದ ನಾಲೆಗಳಿಲ್ಲದೆ ನೀರು ಹರಿಯುತ್ತಿದ್ದು, ಹಳೇಬೀಡು ಹಾಗೂ ಮಲ್ಲಾಪುರ ಗ್ರಾಮಸ್ಥರ ಜಮೀನುಗಳಲ್ಲಿ ನೀರು ತುಂಬಿದೆ. ಜಮೀನುಗಳ ರಸ್ತೆಯಲ್ಲೂ ನೀರು ಹರಿಯುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.