ADVERTISEMENT

ಹೊಸಪೇಟೆ: ಉತ್ಸವ್ ದಿ ಹಂಪಿ ರಾಷ್ಟ್ರೀಯ ಆಫ್‌ರೋಡ್‌ ಮೋಟಾರ್ ಸ್ಫೋರ್ಟ್ಸ್‌ಗೆ ತೆರೆ

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2024, 5:48 IST
Last Updated 30 ಸೆಪ್ಟೆಂಬರ್ 2024, 5:48 IST
ಹೊಸಪೇಟೆ ಸಮೀಪದ ರಾಜಾಪುರ ಬೆಟ್ಟದಲ್ಲಿ ಭಾನುವಾರ ಕಡಿದಾದ ಇಳಿಜಾರನ್ನು ತೆವಳುತ್ತ ಇಳಿದ ವಾಹನ –ಪ್ರಜಾವಾಣಿ ಚಿತ್ರ
ಹೊಸಪೇಟೆ ಸಮೀಪದ ರಾಜಾಪುರ ಬೆಟ್ಟದಲ್ಲಿ ಭಾನುವಾರ ಕಡಿದಾದ ಇಳಿಜಾರನ್ನು ತೆವಳುತ್ತ ಇಳಿದ ವಾಹನ –ಪ್ರಜಾವಾಣಿ ಚಿತ್ರ   

ಹೊಸಪೇಟೆ (ವಿಜಯನಗರ): ಪ್ರಪಾತಕ್ಕೆ ಇಳಿದ ನಾಲ್ಕು ಚಕ್ರದ ವಾಹನ ಸ್ಪೈಡರ್‌ ಮ್ಯಾನ್‌ನಂತೆ ಕಡಿದಾದ ಬೆಟ್ಟವನ್ನು ಹಗ್ಗದ (ವಿಂಚಿಂಗ್‌) ಸಹಾಯವೂ ಇಲ್ಲದೆ ಏರಿದಾಗ ಎದೆಬಡಿತ ಸ್ತಬ್ಧ, ಕ್ಷಣಮಾತ್ರದಲ್ಲಿ ಮೇಲ್ಗಡೆ ತಲುಪಿದಾಗ ಚಪ್ಪಾಳೆ, ಶಿಳ್ಳೆಯ ಸುರಿಮಳೆ. ಒಂದನ್ನು ಮೀರಿಸುವ ರೀತಿಯಲ್ಲಿ ಮತ್ತೊಂದರ ಸಾಹಸ...

ಹೀಗೆ ಕಣ್ಣಿಗೆ ಹಬ್ಬವನ್ನು ನೀಡಿದ ‘ಉತ್ಸವ್‌ ದಿ ಹಂಪಿ’ ರಾಷ್ಟ್ರೀಯ ಆಫ್‌ರೋಡ್‌ ಮೋಟಾರ್‌ ಸ್ಫೋರ್ಟ್ಸ್‌ ಭಾನುವಾರ ಸಂಜೆ ಇಲ್ಲಿಗೆ ಸಮೀಪದ ರಾಜಾಪುರದ ಬೆಟ್ಟಗುಡ್ಡಗಳಲ್ಲಿ ಯಾವುದೇ  ಅಪಘಾತ, ಅವಘಡ ಇಲ್ಲದೆ ಖುಷಿ ಖುಷಿಯಿಂದ ಕೊನೆಗೊಂಡಿತು.

ಹಂಪಿ ಮತ್ತು ಹೊಸಪೇಟೆಯಲ್ಲಿ ಪ್ರವಾಸೋದ್ಯಮ ಬೆಳವಣಿಗೆಗೆ ತನ್ನದೇ ಆದ ಕೊಡುಗೆ ನೀಡುವ ಸಲುವಾಗಿ ವಿಜಯನಗರ ಮೋಟಾರ್‌ಸ್ಫೋರ್ಟ್ಸ್ ಅಕಾಡೆಮಿ ಆಯೋಜಿಸಿದ ಐದನೇ ವರ್ಷದ ಸಾಹಸಮಯ 4x4 ಮೋಟಾರ್‌ ಸ್ಫೋರ್ಟ್ಸ್ ಇದಾಗಿತ್ತು. ದೇಶದಾದ್ಯಂತದಿಂದ ಬಂದ 80 ವಾಹನಗಳು, 160ರಷ್ಟು ಚಾಲಕರು, ಸಹಚಾಲಕರು ತಮ್ಮ ಚಾಕಚಕ್ಯತೆಯನ್ನು ತೋರಿಸುವಲ್ಲಿ ಸಫಲರಾದರು.

ADVERTISEMENT

ಪ್ರೊ ಮಾಡಿಫೈಡ್‌ ವಿಭಾಗದ ಸಾಹಸವಂತೂ ಮೈ ನವಿರೇಳಿಸುವಂತದ್ದಾಗಿತ್ತು. ಬೆಟ್ಟ, ಗುಡ್ಡ, ಕಣಿವೆ, ಕಂದರ, ಬಂಡೆಗಲ್ಲು, ಜಾರುವ ಮಣ್ಣು, ಕುಸಿಯುವ ಹೊಂಡ... ಯಾವುದೂ ಇದಕ್ಕೆ ಲೆಕ್ಕಕ್ಕೇ ಇರಲಿಲ್ಲ. ಸವಕಳಿ ಮಣ್ಣಿನಿಂದ ಕೂಡಿದ ಕಡಿದಾದ ಗೋಡೆಯಂತಹ ದಿಬ್ಬ ಏರುವಾಗ ಮಾತ್ರ ವಿಂಚಿಂಗ್‌ (ವಾಹನದ ಎದುರುಭಾಗ, ಹಿಂಭಾಗದಲ್ಲಿರುವ ಹಗ್ಗ) ಸಹಾಯ ಪಡೆಯಲಾಯಿತು. ಕೆಲವು ಚಾಲಕರು ಅದನ್ನೂ ಬಳಸಲಿಲ್ಲ. 

ಒಂದೊಂದು ಇಂಚಿಗೂ ಬೆಲೆ: ಆಫ್‌ರೋಡ್ ಮೋಟಾರ್ ಸ್ಫೋರ್ಟ್ಸ್‌ನ ವಿಶೇಷವೆಂದರೆ ಇಲ್ಲಿ ವೇಗಕ್ಕಿಂತಲೂ ಹೆಚ್ಚಾಗಿ ಚಾಲಕನ ಚಾಕಚಕ್ಯತೆಗೇ ಆದ್ಯತೆ. ಕೆಲವೊಮ್ಮೆ ತಕ್ಷಣ ಹಿಮ್ಮುಖವಾಗಿ ಚಲಿಸಬೇಕಾಗುತ್ತದೆ, ಅದೂ ಅರ್ಧ ಅಡಿಯಷ್ಟು, ಕೆಲವೊಮ್ಮೆ ಒಂದು ಅಡಿಯಷ್ಟು ಮಾತ್ರ ಹಿಂದಕ್ಕೆ ಹೋಗಬೇಕಾಗುತ್ತದೆ. ವೇಗ, ಏಕಾಗ್ರತೆ, ಪರಿಕತ್ವತೆ, ಧೈರ್ಯ, ಎದೆಗಾರಿಕೆ...ಹಲವು  ಗುಣಗಳು ಚಾಲಕನಿಗೆ ಇರಬೇಕಾಗುತ್ತದೆ. ಇದೆಲ್ಲವನ್ನೂ ಅವರು ಶನಿವಾರ ಮತ್ತು ಭಾನುವಾರ ತೋರಿಸಿಕೊಟ್ಟರು. 

‘ಹೊಸಪೇಟೆಯ ಬೆಟ್ಟ, ಗುಡ್ಡಗಳು, ಇಲ್ಲಿನ ಗಟ್ಟಿ ಮಣ್ಣು ಆಫ್‌ರೋಡ್‌ ಚಾಲೆಂಜ್‌ ನಡೆಸುವುದಕ್ಕೆ ಹೇಳಿ ಮಾಡಿಸಿದಂತಿದೆ. ಅರಣ್ಯ ಇಲಾಖೆಗೆ ಒಳಪಟ್ಟ ಸ್ಥಳದಲ್ಲಿ ಈ ಸಾಹಸ ಕ್ರೀಡೆ ಆಯೋಜಿಸಿಲ್ಲ. ಕಂದಾಯ, ಪಟ್ಟಾ ಭೂಮಿಯಲ್ಲಿ, ಎಲ್ಲಾ ಇಲಾಖೆಗಳ ಅನುಮತಿ ಪಡೆದೇ ಇದನ್ನು ಆಯೋಜಿಸಲಾಗಿದೆ’ ಎಂದು ಮೋಟಾರ್‌ ಸ್ಫೋರ್ಟ್ಸ್‌ ಆಯೋಜಕರಲ್ಲಿ ಒಬ್ಬರಾದ ರೋಹಿತ್ ಗೌಡ ತಿಳಿಸಿದರು.

‘ವರ್ಷದಿಂದ ವರ್ಷಕ್ಕೆ ಸ್ಪರ್ಧಿಗಳ ಸಂಖ್ಯೆ ಹೆಚ್ಚುತ್ತಿದೆ. ಈ ಬಾರಿ 80 ವಾಹನಗಳು ಬಂದಿವೆ. ಮುಂದಿನ ಬಾರಿ 100ಕ್ಕಿಂತ ಅಧಿಕ ವಾಹನಗಳು ಬರುವ ನಿರೀಕ್ಷೆ ಇದೆ. ಯುವಜನತೆ ಇಂತಹ ಸಾಹಸ ಕ್ರೀಡೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು’ ಎಂದು ಕಾರ್ಯಕ್ರಮದ ಸಂಘಟಕರಲ್ಲಿ ಒಬ್ಬರಾದ ಅಶ್ವಿನ್‌ ನಾಯಕ್‌ ಹೇಳಿದರು.

ಸಾಹಸದ ವೇಳೆ ಉರುಳಿ ಬಿದ್ದ ಪ್ರೊ ಮಾಡಿಫೈಡ್‌ ವಾಹನ 

ಸುಪ್ರೀಂ ಕೋರ್ಟ್‌ ವಕೀಲ ದರ್ಪಣ್‌ ಗೌಡ, ಸಂತೋಷ್‌ ಎಚ್‌.ಎಂ, ಮಂಜುನಾಥ್‌ ಇತರರು ಮೋಟಾರ್‌  ಸ್ಫೋರ್ಟ್ಸ್‌ ಯಶಸ್ಸಿಗೆ ಸಹಕರಿಸಿದರು. 

ಟಯರ್ ಪಂಕ್ಚರ್ ಆದರೂ ಛಲಬಿಡದೆ ಮುನ್ನುಗ್ಗಿದ ವಾಹನ 

ಭರ್ಜರಿ ವ್ಯವಹಾರ: ‘ಉತ್ಸವ್ ದಿ ಹಂ‍ಪಿ’ ಆಯೋಜನೆಗೆ 200ಕ್ಕೂ ಅಧಿಕ ಮಂದಿ ಸಕ್ರಿಯವಾಗಿ ಒಂದು ವಾರಕ್ಕಿಂತಲೂ ಅಧಿಕ ಸಮಯದಿಂದ ಹೊಸಪೇಟೆಯಲ್ಲಿ ಬೀಡು ಬಿಟ್ಟಿದ್ದರು. ಊಟ, ವಸತಿ, ವಾಹನ ಬಿಡಿಭಾಗಗಳ ಖರೀದಿ ಸಹಿತ ಹಲವು ವಿಧಗಳಲ್ಲಿ ನಗರದಲ್ಲಿ ವಹಿವಾಟು ಕುದುರುವಂತಾಯಿತು. ರಸ್ತೆಗಳಲ್ಲಿ  ನಾಲ್ಕೈದು ಕೋಟಿ ರೂಪಾಯಿ ವೆಚ್ಚ ಮಾಡಿ ಸಿದ್ಧಪಡಿಸಿದಂತಹ ವಾಹನಗಳ ಓಡಾಟ ಕಂಡು ಜನ ಪುಳಕಿತಗೊಂಡರು.

ಹೊಸಪೇಟೆ ಸಮೀಪ ರಾಜಾಪುರ ಬೆಟ್ಟದಲ್ಲಿ ಭಾನುವಾರ ಕಡಿದಾದ ಕಣಿವೆಯಿಂದ ಮೇಲೆದ್ದು ಹೋದ ವಾಹನ –ಪ್ರಜಾವಾಣಿ ಚಿತ್ರ
ಮೋಟಾರ್‌ ಸ್ಫೋರ್ಟ್ಸ್‌ ಯಶಸ್ವಿಯಾಗಿದೆ. ಒಂದು ಸಣ್ಣ ದುರ್ಘಟನೆಗೂ ಅವಕಾಶ ಇಲ್ಲದ ರೀತಿಯಲ್ಲಿ ಈ ಸಾಹಸ ಕ್ರೀಡೆ ನಡೆದುದರಿಂದ ಸಮಾಧಾನವಾಗಿದೆ
ಸಂತೋಷ್‌ ಎಚ್‌.ಎಂ. ಮೋಟಾರ್‌ ಸ್ಫೋರ್ಟ್ಸ್‌ ಆಯೋಜಕ

‘ವರ್ಷಕ್ಕೆ ಐದಾರು ಸ್ಪರ್ಧೆ ಮಾಡುವ ಉದ್ದೇಶ’

‘ಹೊಸಪೇಟೆಗೆ ಇಂಡಿಯನ್ ರ‍್ಯಾಲಿ ಚಾಂಪಿಯನ್‌ಶಿಪ್‌ ತರುವ ಪ್ರಯತ್ನ ನಡೆಯುತ್ತಿದೆ. ಬಹುಶಃ ಮುಂದಿನ ವರ್ಷವೇ ಇದನ್ನು ನಡೆಸುವ ಸಾಧ್ಯತೆ ಇದೆ. ಇದರ ಜತೆಗೆ ವರ್ಷಕ್ಕೆ ಐದಾರು ರಾಷ್ಟ್ರೀಯ ಮೋಟಾರ್‌ ಸ್ಫೋರ್ಟ್ಸ್ ಅನ್ನು ಹೊಸಪೇಟೆಯಲ್ಲಿ ಆಯೋಜಿಸಬೇಕು ಎಂಬ ವಿಚಾರ ಮಾಡಲಾಗುತ್ತಿದೆ. ಸ್ಥಳೀಯ ಶಾಸಕ ಎಚ್‌.ಆರ್‌.ಗವಿಯಪ್ಪ ಅವರೂ ಇದಕ್ಕೆ ಪ್ರೋತ್ಸಾಹ ನೀಡಿದ್ದಾರೆ. ಜಿಲ್ಲಾಡಳಿತ ಇತರ ಇಲಾಖೆಗಳ ಸಹಕಾರ ಸಿಗುವ ವಿಶ್ವಾಸ ಇರುವುದರಿಂದ ಹೆಚ್ಚು ಹೆಚ್ಚು ಸಾಹಸ ಕ್ರೀಡೆಗಳನ್ನು ಹಮ್ಮಿಕೊಳ್ಳುವ ಪ್ರಯತ್ನ ನಡೆಯಲಿದೆ’ ಎಂದು ‘ಉತ್ಸವ್‌ ದಿ ಹಂಪಿ’ ಆಯೋಜಕರಲ್ಲಿ ಒಬ್ಬರಾದ ರೋಹಿತ್ ಗೌಡ ಹೇಳಿದರು.

ಉರುಳಿದ ವಾಹನ ಟೈರ್ ಪಂಕ್ಚರ್‌

ರಾಜಾಪುರ ಬೆಟ್ಟದ ಮೇಲಿನ ತುತ್ತತುದಿಯ ಸ್ಥಳದಲ್ಲಿ ತುಂಗಭದ್ರೆಯ ಹಿನ್ನೀರು ಅಗಾಧವಾಗಿ ಕಾಣಿಸುವ ಸ್ಥಳದಲ್ಲಿ ಭಾನುವಾರ ಸಂಜೆ ನಡೆದ ಅಂತಿಮ ಹಂತದ ಪ್ರೊ ಮಾಡಿಫೈಡ್‌ ವಾಹನಗಳ ಸಾಹಸದ ವೇಳೆ ಒಂದು ವಾಹನ ಕಡಿದಾದ ಕಣಿವೆಯಲ್ಲಿ ಇಳಿದ ಬಳಿಕ ಸಿನಿಮೀಯ ರೀತಿಯಲ್ಲಿ ಉರುಳಿ ಬಿತ್ತು. ಸಂಘಟಕರು ಇನ್ನೊಂದು ವಾಹನಕ್ಕೆ ಹಗ್ಗ ಕಟ್ಟಿ ಅದನ್ನು ನಿಲ್ಲಿಸಿಬಿಟ್ಟರು. ಬಳಿಕ ಸ್ವಲ್ಪ ಮುಂದಕ್ಕೆ ತಳ್ಳಿದರು. ಆ ವಾಹನ ಬಳಿಕ ತಾನೇ ಬೆಟ್ಟ ಏರಿ ಹೋಯಿತು. ಮುಂದುಗಡೆಯ ಬಲಭಾಗದ ಟಯರ್ ಪಂಕ್ಚರ್ ಆದರೂ ಛಲಬಿಡದ ಚಾಲಕ ವಾಹನವನ್ನು ಕಂದಕಕ್ಕೆ ಇಳಿಸಿ ಮೇಲಕ್ಕೆ ತಂದ ಇನ್ನೊಂದು ರೋಚಕ ಘಟನೆಯೂ ನಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.