ADVERTISEMENT

ಹೊಸಪೇಟೆ ಪಾಲಿಗೆ ಗವಿಯಪ್ಪ ‘ಶಾಪ’–ನಿಯಾಜಿ

ಕಾಂಗ್ರೆಸ್‌ ಪಕ್ಷದೊಳಗಿನ ಗುಂಪುಗಾರಿಕೆ ಮತ್ತಷ್ಟು ಉಲ್ಬಣ- ‘ಹುಡಾ’ ಅಧ್ಯಕ್ಷರಿಂದ ಆರೋಪಗಳ ಸುರಿಮಳೆ

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2024, 15:47 IST
Last Updated 22 ನವೆಂಬರ್ 2024, 15:47 IST
ಮಹಮ್ಮದ್‌ ಇಮಾಮ್‌ ನಿಯಾಜಿ
ಮಹಮ್ಮದ್‌ ಇಮಾಮ್‌ ನಿಯಾಜಿ   

ಹೊಸಪೇಟೆ (ವಿಜಯನಗರ): ವಿಜಯನಗರ ಕ್ಷೇತ್ರದ ಶಾಸಕ ಎಚ್‌.ಆರ್‌.ಗವಿಯಪ್ಪ ಅವರ ವಿರುದ್ಧ ಹೊಸಪೇಟೆ ನಗರಾಭಿವೃದ್ಧಿ ಪ್ರಾಧಿಕಾರದ (ಹುಡಾ) ಅಧ್ಯಕ್ಷ ಎಚ್‌.ಎನ್‌.ಎಫ್‌.ಮೊಹಮ್ಮದ್ ಇಮಾಮ್‌ ನಿಯಾಜಿ ಅವರು ಸಹ ತಿರುಗಿಬಿದ್ದಿದ್ದು, ಕ್ರಿಯಾಯೋಜನೆಯನ್ನೇ ಸಿದ್ಧಪಡಿಸದ, ಅನುದಾನ ಬಂದರೂ ಬಂದಿಲ್ಲ ಎಂದು ಹೇಳುವ ಗವಿಯಪ್ಪ ಹೊಸಪೇಟೆ ಪಾಲಿಗೆ ‘ಶಾಪ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕ್ಷೇತ್ರಕ್ಕೆ ಸುಮಾರು ₹150 ಕೋಟಿ ಅನುದಾನ ಬಂದರೂ ಶಾಸಕರು ಸುಳ್ಳು ಹೇಳುತ್ತಿದ್ದಾರೆ. ನಂಜುಂಡಪ್ಪ ವರದಿ ಪ್ರಕಾರ ವಿವಿಧ ಮಾನದಂಡ ಮತ್ತು ಅಭಿವೃದ್ಧಿ ಸೂಚ್ಯಂಕ ಆಧರಿಸಿ ಕೆಕೆಆರ್‌ಡಿಬಿಯಿಂದ ಅನುದಾನ ಬಿಡುಗಡೆ ಆಗಿದೆ. ಆದರೆ ಕ್ರಿಯಾಯೋಜನೆ ಸಿದ್ಧಪಡಿಸದೆ ತಮ್ಮ ತಪ್ಪನ್ನು ಮರೆಮಾಚಲು ಸರ್ಕಾರದ ಮೇಲೆ ಆರೋಪ ಮಾಡುತ್ತಿದ್ದಾರೆ. ಇವರ ಧೋರಣೆ ಇದೇ ರೀತಿ ಇದ್ದರೆ ಜನತೆ ಬೀದಿಗಳಿದು ಬುದ್ಧಿ ಕಲಿಸಲಿದ್ದಾರೆ ಎಂದು ಎಚ್ಚರಿಸಿದರು.

‘ಜಿಲ್ಲಾ ಉಸ್ತುವಾರಿ ಸಚಿವರು ಸೇರಿದಂತೆ ಯಾವುದೇ ಸಚಿವರ ಜತೆ ಉತ್ತಮ ಬಾಂಧವ್ಯ ಹೊಂದಿಲ್ಲದ ಶಾಸಕರ ಸ್ವ ಪ್ರತಿಷ್ಠೆಯಿಂದ ಕ್ಷೇತ್ರ ಬಡವಾಗುತ್ತಿದೆ. ಯಾವ ಪುರುಷಾರ್ಥಕ್ಕೆ ಇವರು ಶಾಸಕರಾಗಿದ್ದಾರೆ ಎಂದು ಜನ ಪ್ರಶ್ನೆ ಮಾಡುತ್ತಿದ್ದಾರೆ’ ಎಂದರು.

ADVERTISEMENT

ನಗರಾಭಿವೃದ್ಧಿಗೂ ತಡೆ: ‘ನಗರಾಭಿವೃದ್ಧಿ ಇಲಾಖೆಯಿಂದ ₹15 ಕೋಟಿ ಅನುದಾನ ಬಂದಿದೆ. ಆದರೆ ಅದಕ್ಕೂ ಶಾಸಕರು ಕ್ರಿಯಾಯೋಜನೆ ರೂಪಿಸಿಲ್ಲ. ನಗರದಲ್ಲಿ ಮತ್ತು ತಮ್ಮ ಕ್ಷೇತ್ರದಲ್ಲಿ ₹100 ಕೋಟಿ ಮೊತ್ತದ ಕಾಮಗಾರಿಗಳಿಗೆ ವರ್ಷ ಕಳೆದರೂ ಶಂಕುಸ್ಥಾಪನೆ ಮಾಡಿಲ್ಲ. ಶಾಸಕರು ಹಲವು ವ್ಯಕ್ತಿಗಳ ಹೆಸರು ನೀಡಿ ಅವರ ನೇತೃತ್ವದಲ್ಲಿ ಪೂಜೆ ಮಾಡಲು ಹೇಳಿದ್ದಾರೆ. ಆದರೆ ಆ ವ್ಯಕ್ತಿಗಳು ಗುತ್ತಿಗೆದಾರರಿಗೆ ಮತ್ತು ಅಧಿಕಾರಿಗಳಿಗೆ ಕಿರುಕುಳ ನೀಡುತ್ತಿರುವುದರಿಂದ ಕೆಲಸ ಆರಂಭ ಆಗದಂತಾಗಿದೆ’ ಎಂದು ನಿಯಾಜಿ ಆರೋಪಿಸಿದರು.

ಗುಂಪುಗಾರಿಕೆ ತೀವ್ರ: ಕಾಂಗ್ರೆಸ್ ಪಕ್ಷದಲ್ಲಿ ಈಗಾಗಲೇ ಹಲವು ಗುಂಪುಗಳಿರುವುದು ಗೊತ್ತಿರುವ ಸಂಗತಿ. ಶಾಸಕರ ಗುಂಪನ್ನು ತುಳಿಯಲು ಇತರ ಕೆಲವು ಗುಂಪುಗಳು ಶತಪ್ರಯತ್ನ ಮಾಡುತ್ತಿದ್ದು, ಶಾಸಕರ ಅನುದಾನ ಆಕ್ಷೇಪವನ್ನೇ ಎತ್ತಿಕೊಂಡು ಇದೀಗ ಹಲವು ದಿಕ್ಕುಗಳಿಂದ ವಾಗ್ಬಾಣಗಳು ತೂರಿ ಬಡತೊಡಗಿವೆ. ಎರಡು ದಿನದ ಹಿಂದೆಯಷ್ಟೇ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಸಿರಾಜ್‌ ಶೇಖ್‌ ಅವರು ಶಾಸಕರ ಕಾರ್ಯವೈಖರಿಯನ್ನು ತೀವ್ರವಾಗಿ ಖಂಡಿಸಿ, ಅವರೊಬ್ಬ‘ನಿಷ್ಕ್ರಿಯ ಶಾಸಕ’ ಎಂದು ಟೀಕಿಸಿದ್ದರು. ಇದೀಗ ‘ಹುಡಾ’ ಅಧ್ಯಕ್ಷರು ಸಿರಾಜ್ ಶೇಖ್ ಅವರು ಮಾತನಾಡಿದ ಧಾಟಿಯಲ್ಲೇ ಮಾತನಾಡಿದ್ದಾರೆ. 

ಬಂದಿರುವ ಅನುದಾನ

ಕಳೆದ ಒಂದೂವರೆ ವರ್ಷದಲ್ಲಿ ವಿಜಯನಗರ ಕ್ಷೇತ್ರಕ್ಕೆ ಬಂದಿರುವ ಅನುದಾನದ ವಿವರವನ್ನು ‘ಹುಡಾ’ ಅಧ್ಯಕ್ಷರು ನೀಡಿದ್ದಾರೆ. ಕೆಕೆಆರ್‌ಡಿಬಿಯಿಂದ ಜಿಲ್ಲಾ ಆಸ್ಪತ್ರೆಗೆ ₹29 ಕೋಟಿ ಮೈಕ್ರೊ ಮತ್ತು ಮ್ಯಾಕ್ರೊ ಅಡಿಯಲ್ಲಿ ಒಟ್ಟು ₹29.07 ಕೋಟಿ ಪಂಚಾಯತ್ ರಾಜ್‌ನಿಂದ ₹15 ಕೋಟಿ ಪಿಡಬ್ಲ್ಯುಡಿಯಿಂದ ₹15 ಕೋಟಿ ಎಸ್‌ಎಚ್‌ಡಿಪಿಯಿಂದ ₹20 ಕೋಟಿ ಜಿಲ್ಲಾ ರಸ್ತೆ ಅಭಿವೃದ್ಧಿಗೆ ₹8 ಕೋಟಿ ಅಲ್ಪಸಂಖ್ಯಾತ ಇಲಾಖೆಯಿಂದ ₹20 ಕೋಟಿ ನಗರಾಭಿವೃದ್ಧಿ ಇಲಾಖೆಯಿಂದ ₹15 ಕೋಟಿ ಶಾಸಕರ ಅಭಿವೃದ್ಧಿ ನಿಧಿ ₹4 ಕೋಟಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.