ADVERTISEMENT

ಅನೈತಿಕ ಸಂಬಂಧಕ್ಕೆ ಅಡ್ಡಿ: ಕರುಳ ಕುಡಿಯನ್ನೇ ಕೊಲೆ ಮಾಡಿಸಿದ ತಾಯಿ

ಕಾಣೆಯಾಗಿದ್ದ ಬಾಲಕ ಶವವಾಗಿ ಪತ್ತೆಯಾದ ಪ್ರಕರಣ

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2024, 16:12 IST
Last Updated 22 ನವೆಂಬರ್ 2024, 16:12 IST
ಹೂವಿನಹಡಗಲಿ ತಾಲ್ಲೂಕು ಇಟ್ಟಿಗಿ ಗ್ರಾಮದ ಬಾಲಕನನ್ನು ಅಪಹರಿಸಿ ಕೊಲೆ ಮಾಡಿರುವ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀಹರಿಬಾಬು ಬಿ.ಎಲ್. ಭೇಟಿ ನೀಡಿ ಪರಿಶೀಲಿಸಿದರು
ಹೂವಿನಹಡಗಲಿ ತಾಲ್ಲೂಕು ಇಟ್ಟಿಗಿ ಗ್ರಾಮದ ಬಾಲಕನನ್ನು ಅಪಹರಿಸಿ ಕೊಲೆ ಮಾಡಿರುವ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀಹರಿಬಾಬು ಬಿ.ಎಲ್. ಭೇಟಿ ನೀಡಿ ಪರಿಶೀಲಿಸಿದರು   

ಹೂವಿನಹಡಗಲಿ (ವಿಜಯನಗರ ಜಿಲ್ಲೆ): ಅನೈತಿಕ ಸಂಬಂಧಕ್ಕೆ ಮಗ ಅಡ್ಡಿಪಡಿಸುತ್ತಿದ್ದ ಎಂಬ ಕಾರಣಕ್ಕೆ ತಾಯಿಯೊಬ್ಬಳು ತನ್ನ ಮಗನನ್ನೇ ಪ್ರಿಯಕರನಿಂದ ಕೊಲೆ ಮಾಡಿಸಿರುವ ಘಟನೆ ತಾಲ್ಲೂಕಿನ ಇಟ್ಟಿಗಿ ಗ್ರಾಮದಲ್ಲಿ ಜರುಗಿದೆ.

7ನೇ ತರಗತಿ ವಿದ್ಯಾರ್ಥಿ ಕೆ.ವಿಠಲ್ (13) ಕೊಲೆಯಾದ ನತದೃಷ್ಟ ಬಾಲಕ. ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲೆ ಆರೋಪಿ ಕ್ಯಾತ್ನ ಮಲ್ಲಪ್ಪ (36), ಕೊಲೆಗೆ ಸಹಕರಿಸಿದ ದಶಮಾಪುರ ಗ್ರಾಮದ ದಾಸರ ಮಂಜುನಾಥ (32), ಬಾಲಕನ ತಾಯಿ ಕೆ. ಹನುಮಂತಮ್ಮ (36) ಎಂಬುವವರನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.

ಕಳೆದ ಶನಿವಾರ ಮಧ್ಯಾಹ್ನ ಶಾಲೆಯಿಂದ ಮನೆಗೆ ಮರಳಿದ್ದ ಬಾಲಕ ಮೊಬೈಲ್ ನೊಂದಿಗೆ ಕಣ್ಮರೆಯಾಗಿದ್ದ. ಇಟ್ಟಿಗಿ ಠಾಣೆಯಲ್ಲಿ ಬಾಲಕನ ತಾಯಿಯೇ ಮಗ ಕಾಣೆಯಾಗಿರುವ ಕುರಿತು ದೂರು ನೀಡಿದ್ದರು. ತನಿಖೆ ಕೈಗೆತ್ತಿಕೊಂಡ ಪೊಲೀಸರು ಕೊಲೆ ರಹಸ್ಯವನ್ನು ಭೇದಿಸಿದ್ದಾರೆ.

ADVERTISEMENT

‘ಪರ ಪುರಷನೊಂದಿಗೆ ಸಲುಗೆಯಿಂದ ಇರುತ್ತಿದ್ದ ತಾಯಿಗೆ ಬಾಲಕ ವಿಠಲ್ ಬೈದು ಬುದ್ದಿ ಹೇಳುತ್ತಿದ್ದ. ಅನೈತಿಕ ಸಂಬಂಧವನ್ನು ವಿರೋಧಿಸಿ ಪದೇ ಪದೇ ಜಗಳ ಮಾಡುತ್ತಿದ್ದ ಕಾರಣಕ್ಕೆ ಕೋಪಗೊಂಡ ತಾಯಿ, ಮಗನನ್ನು ದೂರಕ್ಕೆ ಕರೆದೊಯ್ದು ಸಾಯಿಸುವಂತೆ ಪ್ರಿಯಕರನಿಗೆ ಕುಮ್ಮಕ್ಕು ನೀಡಿದ್ದಾಳೆ. ಆಕೆಯ ಸೂಚನೆಯಂತೆ ಪ್ರಿಯಕರ ಮಲ್ಲಪ್ಪ ಮತ್ತು ಮಂಜುನಾಥ ಶನಿವಾರ ಮಧ್ಯಾಹ್ನ ಬಾಲಕನನ್ನು ಅಪಹರಿಸಿ ಬೈಕ್‌ನಲ್ಲಿ ಹಗರಿಬೊಮ್ಮನಹಳ್ಳಿ ತಾಲ್ಲೂಕು ಬೆಣಕಲ್ ಅಡವಿಗೆ ಕರೆದೊಯ್ದಿದ್ದಾರೆ. ಬಾಲಕ ಧರಿಸಿದ್ದ ಅಂಗಿಯಿಂದ ಕುತ್ತಿಗೆ ಬಿಗಿದು ಸಾಯಿಸಿದ್ದಾರೆ. ಮೃತ ದೇಹವನ್ನು ಅಡವಿಯಲ್ಲಿನ ಪೊದೆಯಲ್ಲಿ ಎಸೆದಿದ್ದಾರೆ’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಹನುಮಂತಮ್ಮನ ಗಂಡ ನೀಲಪ್ಪ ಒಂಭತ್ತು ವರ್ಷದ ಹಿಂದೆ ಅನಾರೋಗ್ಯದಿಂದ ಮೃತಪಟ್ಟಿದ್ದು, ನಾಲ್ಕು ವರ್ಷದಿಂದ ಇಬ್ಬರ ನಡುವೆ ಅನೈತಿಕ ಸಂಬಂಧ ಏರ್ಪಟ್ಟಿತ್ತು ಎಂದು ತಿಳಿದು ಬಂದಿದೆ. ಈ ಕುರಿತು ಇಟ್ಟಿಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಿಪಿಐ ದೀಪಕ್ ಭೂಸರೆಡ್ಡಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಪಿಎಸ್ಐ ಜಿ.ಕೆ.ಅಬ್ಬಾಸ್ ತನಿಖೆ ನಡೆಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.