ADVERTISEMENT

ಹೊಸಪೇಟೆ | ಪಾರ್ಕ್‌ ಜಾಗದಲ್ಲಿ ಮನೆ; ತೆರವು ಸನ್ನಿಹಿತ?

ವೆಲ್‌ಫೇರ್ ಅಸೋಸಿಯೇಷನ್‌ನ ನಾಲ್ಕು ವರ್ಷಗಳ ಹೋರಾಟ * ಅಕ್ರಮ ಎಂದು ತೀರ್ಪು ನೀಡಿದ ಕೋರ್ಟ್‌ಗಳು

ಎಂ.ಜಿ.ಬಾಲಕೃಷ್ಣ
Published 14 ಜೂನ್ 2023, 23:44 IST
Last Updated 14 ಜೂನ್ 2023, 23:44 IST
ಉದ್ಯಾನಕ್ಕೆ ಮೀಸಲಿಟ್ಟ ಜಾಗದಲ್ಲಿ ನಿರ್ಮಿಸಲಾದ ಮನೆ  –ಪ್ರಜಾವಾಣಿ ಚಿತ್ರ/ ಲವ
ಉದ್ಯಾನಕ್ಕೆ ಮೀಸಲಿಟ್ಟ ಜಾಗದಲ್ಲಿ ನಿರ್ಮಿಸಲಾದ ಮನೆ  –ಪ್ರಜಾವಾಣಿ ಚಿತ್ರ/ ಲವ   

ಹೊಸಪೇಟೆ (ವಿಜಯನಗರ): ನಗರದ ಬಳ್ಳಾರಿ ರಸ್ತೆಯ 24ನೇ ವಾರ್ಡ್‌ ಸಿರಿಸಿನಕಲ್ಲು ವಿಜಯನಗರ ಕಾಲೋನಿಯ ಸರ್ವೇ ನಂಬರ್ 304/ಬಿ1ರಲ್ಲಿ ಉದ್ಯಾನಕ್ಕೆಂದು ಮೀಸಲಿಟ್ಟ ಜಾಗದಲ್ಲಿ ಅನಧಿಕೃತವಾಗಿ ಮನೆಯೊಂದನ್ನು ಕಟ್ಟಲಾಗಿದ್ದು, ಈ ಕಟ್ಟಡ ತೆರವುಗೊಳ್ಳುವ ಕಾಲ ಸಮೀಪಿಸಿದೆ.

ಉದ್ಯಾನಕ್ಕೆಂದು ಮೀಸಲಿಟ್ಟ ಸ್ಥಳದಲ್ಲಿ ಕಟ್ಟಡ ನಿರ್ಮಿಸದಂತೆ ಸುಮಾರು ಆರು ವರ್ಷಗಳ ಹಿಂದೆಯೇ ಸ್ಥಳೀಯರು ಬಾಷಾ ಎಂಬುವವರಿಗೆ ಮನವಿ ಮಾಡಿದ್ದರು. ನಕ್ಷೆ ಸಹಿತ ದಾಖಲೆಗಳನ್ನೂ ತೋರಿಸಿದ್ದರು. ಆದರೆ ಕೆಲವರ ಪ್ರಭಾವದ ಶಕ್ತಿಯೊಂದಿಗೆ ಅವರು ಎಲ್ಲಾ ನಿಯಮ ಗಾಳಿಗೆ ತೂರಿ ಮನೆ ನಿರ್ಮಿಸಿದ್ದರು. ವಿಜಯನಗರ ಕಾಲೋನಿ ವೆಲ್‌ಫೇರ್ ಅಸೋಸಿಯೇಷನ್‌ನಿಂದ ತೀವ್ರ ಆಕ್ಷೇಪ ವ್ಯಕ್ತವಾದಾಗ ಈ ಅಸೋಸಿಯೇಷನ್‌ನ ಇಬ್ಬರು ಪದಾಧಿಕಾರಿಗಳಲ್ಲದೆ, ಸ್ವತಃ ಜಿಲ್ಲಾಧಿಕಾರಿ, ತಹಶೀಲ್ದಾರ್‌, ಪೌರಾಯುಕ್ತರು ಸಹಿತ ಒಟ್ಟು ಏಳು ಮಂದಿಯನ್ನು ಪಾರ್ಟಿ ಮಾಡಿ ವಿಚಾರಣಾ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು.

ಉದ್ಯಾನಕ್ಕೆ ಮೀಸಲಿಟ್ಟ ಸ್ಥಳದಲ್ಲಿ ಮನೆ ನಿರ್ಮಿಸಿದ್ದು ತಪ್ಪು ಎಂದು ವಿಚಾರಣಾ ನ್ಯಾಯಾಲಯ, ಬಳಿಕ ಜಿಲ್ಲಾ ನ್ಯಾಯಾಲಯ ಹಾಗೂ ಧಾರವಾಡದ ಹೈಕೋರ್ಟ್‌ ಪೀಠ ತೀರ್ಪು ನೀಡಿದೆ. ಹೈಕೋರ್ಟ್‌ ತೀರ್ಪು ಬಂದು (5–4–2023) ಎರಡು ತಿಂಗಳು ಕಳೆದರೂ ಯಾವುದೇ ಕ್ರಮವನ್ನು ನಗರಸಭೆ ಕೈಗೊಳ್ಳದ ಕಾರಣ ವೆಲ್‌ಫೇರ್‌ ಅಸೋಸಿಯೇಷನ್‌ನವರು ಜಿಲ್ಲಾಡಳಿತದ ಮೇಲೆ ಒತ್ತಡ ಹೇರಿದರು. ಕೊನೆಗೂ ಹೆಚ್ಚುವರಿ ಜಿಲ್ಲಾಧಿಕಾರಿ ಅವರು ಇದೇ 8ರಂದು ಆದೇಶ ಹೊರಡಿಸಿ, ‘ಸ್ಥಳ ಪರಿಶೀಲನೆ ನಡೆಸಿ, ಒತ್ತುವರಿಯಾಗಿದ್ದಲ್ಲಿ ನಿಯಮಾನುಸಾರ ಒತ್ತುವರಿ ತೆರವುಗೊಳಿಸಿ’ ಎಂದು ಸೂಚಿಸಿ ನಗರಸಭೆ ಪೌರಾಯುಕ್ತರು, ತಹಶೀಲ್ದಾರ್‌ ಮತ್ತು ಹೊಸಪೇಟೆ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಿಗೆ ಸೂಚನೆ ನೀಡಿದ್ದಾರೆ (ಆದೇಶ ಪ್ರತಿ ‘ಪ್ರಜಾವಾಣಿ’ ಬಳಿ ಇದೆ).

ADVERTISEMENT

ಈ ಹಿನ್ನೆಲೆಯಲ್ಲಿಯೇ ಕಾರ್ಯಪ್ರವೃತ್ತರಾಗಿರುವ ನಗರಸಭೆ ಪೌರಾಯುಕ್ತರು ಮಂಗಳವಾರ (ಜೂನ್‌ 13) ನೋಟಿಸ್ ನೀಡಿದ್ದು, 3 ದಿನದೊಳಗೆ ಕಟ್ಟಡ ತೆರವು ಮಾಡಬೇಕು, ತಪ್ಪಿದಲ್ಲಿ ಕಾನೂನಾತ್ಮಕ ಕ್ರಮ ಕೈಗೊಳ್ಳಲಾಗುವುದು ಎಂದು ಸೂಚಿಸಿದ್ದಾರೆ (ಈ ನೋಟಿಸ್‌ನ ಪ್ರತಿ ಸಹ ‘ಪ್ರಜಾವಾಣಿ‘ ಬಳಿ ಇದೆ).

’ತಕ್ಷಣ ಕಟ್ಟಡ ತೆರವುಗೊಳಿಸಬೇಕು. ತಪ್ಪಿದಲ್ಲಿ 10 ದಿನದೊಳಗೆ ಕಟ್ಟಡವನ್ನು ಧ್ವಂಸ ಮಾಡುವುದು ನಿಶ್ಚಿತ. ಅದಕ್ಕಾಗಿ ಸಿದ್ಧತೆ ನಡೆದಿದೆ‘ ಎಂದು ಪೌರಾಯುಕ್ತ ಮನೋಹರ್‌ ನಾಗರಾಜ್‌ ’ಪ್ರಜಾವಾಣಿ‘ಗೆ ತಿಳಿಸಿದರು.

ಅಕ್ರಮ ಕಟ್ಟಡ ತೆರವುಗೊಳಿಸಲು ಹೊಸಪೇಟೆ ನಗರಸಭೆಯ ಪೌರಾಯುಕ್ತರು ನೀಡಿರುವ ನೋಟಿಸ್‌ 

ಸ್ಥಳ ಪರಿಶೀಲಿಸಿ ಅಕ್ರಮ ನಡೆದಿದ್ದರೆ ಕ್ರಮ ಕೈಗೊಳ್ಳಲು ಎಡಿಸಿ ಆದೇಶ ಎಡಿಸಿ ಆದೇಶದಂತೆ ನೋಟಿಸ್ ನೀಡಿದ ನಗರಸಭೆ ಕಟ್ಟಡ ತೆರವಿಗೆ ಮೂರು ದಿನಗಳ ಗಡುವು, ತಪ್ಪಿದಲ್ಲಿ ಕಾನೂನಾತ್ಮಕ ಕ್ರಮ

ಈಗ ಯಾರ ಒತ್ತಡವೂ ಇಲ್ಲ ಅಕ್ರಮ ಕಟ್ಟಡವನ್ನು 10 ದಿನದಲ್ಲಿ ತೆರವುಗೊಳಿಸಿ ಉದ್ಯಾನ ನಿರ್ಮಾಣಕ್ಕೆ ಅವಕಾಶ ಕಲ್ಪಿಸುವುದು
ನಿಶ್ಚಿತ ಮನೋಹರ್‌ ನಾಗರಾಜ್‌ ಹೊಸಪೇಟೆ ನಗರಸಭೆ ಪೌರಾಯುಕ್ತ
ಭಾರಿ ಒತ್ತಡ ಇದ್ದ ಕಾರಣಕ್ಕೇ ತೆರವು ವಿಳಂಬವಾಗಿದೆ. ಸಾರ್ವಜನಿಕರಿಗಾಗಿ ನಾವು ಒಗ್ಗಟ್ಟಿನಿಂದ ಹೋರಾಟ ನಡೆಸಿದ್ದೇವೆ
ಎಂ.ಶಂಕ್ರಪ್ಪ ವೆಲ್‌ಫೇರ್‌ ಅಸೋಸಿಯೇಷನ್‌ ಉಪಾಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.