ADVERTISEMENT

ಒಳಹರಿವು ಹೆಚ್ಚಳ: ತುಂಗಭದ್ರಾ ಅಣೆಕಟ್ಟೆಯಿಂದ ನದಿಗೆ ನೀರು ಹರಿಸುವ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2024, 9:59 IST
Last Updated 31 ಆಗಸ್ಟ್ 2024, 9:59 IST
<div class="paragraphs"><p>ತುಂಗಭದ್ರಾ ಅಣೆಕಟ್ಟೆ</p></div>

ತುಂಗಭದ್ರಾ ಅಣೆಕಟ್ಟೆ

   

– ಪ್ರಜಾವಾಣಿ ಚಿತ್ರ

ಹೊಸಪೇಟೆ (ವಿಜಯನಗರ): ತುಂಗಭದ್ರಾ ಜಲಾಶಯದ ಒಳಹರಿವಿನ ಪ್ರಮಾಣ ಹೆಚ್ಚುತ್ತಿರುವ ಕಾರಣ ಹಾಗೂ  ಅಣೆಕಟ್ಟೆ ಮತ್ತೊಮ್ಮೆ ತುಂಬುವ ಹಂತಕ್ಕೆ ಬಂದಿರುವ ಕಾರಣ ಯಾವುದೇ ಕ್ಷಣದಲ್ಲಿ ಅಣೆಕಟ್ಟೆಯಿಂದ ನೀರನ್ನು ನದಿಗೆ ಹರಿಸುವ ಸಾಧ್ಯತೆ ಇದೆ, ಎಚ್ಚರಿಕೆಯಿಂದ ಇರಬೇಕು ಎಂದು ತುಂಗಭದ್ರಾ ಮಂಡಳಿ ಸೂಚನೆ ನೀಡಿದೆ.

ADVERTISEMENT

ಮಂಡಳಿ ಈ ನಿಟ್ಟಿನಲ್ಲಿ ಶನಿವಾರ ಮಧ್ಯಾಹ್ನ ಪ್ರಕಟಣೆಯೊಂದನ್ನು ಹೊರಡಿಸಿದ್ದು, ‘ತುಂಗಾ ನದಿ ಮತ್ತು ವರದಾ ನದಿಗಳಲ್ಲಿ ಹರಿಯುವ ನೀರಿನ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಹೀಗಾಗಿ ಜಲಾಶಯದ ಒಳಹರಿವಿನ ಪ್ರಮಾಣ ಹೆಚ್ಚಳವಾಗುತ್ತಿದೆ’ ಎಂದು ಹೇಳಿದೆ.

‘ಅಣೆಕಟ್ಟೆಯ ಪಕ್ಕದಲ್ಲಿರುವ ಜಲವಿದ್ಯುದಾಗಾರದಲ್ಲಿ ಹೆಚ್ಚುವರಿ ವಿದ್ಯುತ್ ಉತ್ಪಾದಿಸುವ ಮೂಲಕ 5 ಸಾವಿರ ಕ್ಯುಸೆಕ್ ನೀರನ್ನು ನದಿಗೆ ಹರಿಸಲಾಗುವುದು, ಒಳಹರಿವಿನ ಪ್ರಮಾಣ ಇನ್ನಷ್ಟು ಹೆಚ್ಚಾದಲ್ಲಿ ನದಿಗೆ ನೀರು ಹರಿಸುವ ಪ್ರಮಾಣ ಇನ್ನಷ್ಟು ಹೆಚ್ಚಬಹುದು’ ಎಂದು ಮಂಡಳಿ ಹೇಳಿದೆ. ಆದರೆ ಸದ್ಯ ಕ್ರಸ್ಟ್‌ಗೇಟ್ ತೆರೆದು ನೀರು ಹರಿಸುವ ಕುರಿತು ಯಾವುದೇ ಮಾಹಿತಿ ನೀಡಿಲ್ಲ.

ನೀರಿನ ಮಟ್ಟ:

ತುಂಗಭದ್ರಾ ಅಣೆಕಟ್ಟೆಯ ಗರಿಷ್ಠ ಮಟ್ಟ 1,633 ಅಡಿ ಆಗಿದ್ದು, ಸದ್ಯ ನೀರಿನ ಮಟ್ಟ 1,630.13 ಅಡಿಯಷ್ಟಿದೆ. 105.78 ಟಿಎಂಸಿ ಅಡಿ ನೀರು ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ ಸದ್ಯ 94.55 ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ. 42,142 ಕ್ಯುಸೆಕ್‌ ಒಳಹರಿವಿನ ಪ್ರಮಾಣ ಇದ್ದು, ಅದು 50 ಸಾವಿರಕ್ಕಿಂತ ಹೆಚ್ಚಾದಾಗ ಜಲಾಶಯ ಬೇಗ ಭರ್ತಿಯಾಗುವ ಸಾಧ್ಯತೆ ಇದೆ.

ಕೊಚ್ಚಿ  ಹೋಗಿದ್ದ ಗೇಟ್‌

  ಆಗಸ್ಟ್ 10ರಂದು ತುಂಗಭದ್ರಾ ಅಣೆಕಟ್ಟೆ ಭರ್ತಿಯಾಗಿತ್ತು. ಅದಕ್ಕಿಂತ ಮೊದಲೇ ಜಲಾಶಯ ಭರ್ತಿಯಾಗಿತ್ತಾದರೂ ಅಣೆಕಟ್ಟೆಯ ಸುರಕ್ಷತೆ ದೃಷ್ಟಿಯಿಂದ ನದಿಗೆ ಭಾರಿ  ಪ್ರಮಾಣದಲ್ಲಿ ನೀರು ಹರಿಸಲಾಗಿತ್ತು. ಆಗಸ್ಟ್ 10ರಂದು ರಾತ್ರಿ ಸುಮಾರು 11 ಗಂಟೆಗೆ 19ನೇ ಸಂಖ್ಯೆಯ ಕ್ರಸ್ಟ್‌ಗೇಟ್‌ ಚೈನ್‌ ಲಿಂಕ್‌ ಕೊಂಡಿ ಕಳಚಿ ನೀರಲ್ಲಿ ಕೊಚ್ಚಿ ಹೋಗಿತ್ತು. ಇದು ರಾಜ್ಯ ಮಾತ್ರವಲ್ಲ, ಆಂಧ್ರ, ತೆಲಂಗಾಣದ ರೈತರನ್ನು ಆತಂಕಕ್ಕೆ ತಳ್ಳಿತ್ತು.

ತಕ್ಷಣ ರಾಜ್ಯ ಮತ್ತು ಆಂಧ್ರ ಸರ್ಕಾರಗಳು ಕಾರ್ಯಾಚರಣೆ ನಡೆಸಿ, ಕ್ರಸ್ಟ್‌ಗೇಟ್‌ ತಜ್ಞ ಕನ್ನಯ್ಯ ನಾಯ್ಡು ಅವರ ಮುಂದಾಳತ್ವದಲ್ಲಿ ತ್ವರಿತವಾಗಿ ಗೇಟ್ ಅಳವಡಿಸುವ ಕೆಲಸ ಮಾಡಿದ್ದರಿಂದ ಒಂದೇ ವಾರದಲ್ಲಿ ತಾತ್ಕಾಲಿಕ ಗೇಟ್ ಅಳವಡಿಸಲಾಗಿತ್ತು.

ಆಗಸ್ಟ್ 16ರಂದು ರಭಸವಾಗಿ ಹರಿಯುತ್ತಿದ್ದ ನೀರಲ್ಲೇ 19ನೇ  ತೂಬಿನಲ್ಲಿ ಗೇಟ್‌ ಎಲಿಮೆಂಟ್‌ ಕೂರಿಸಲಾಗಿತ್ತು. ಆಗಸ್ಟ್ 17ರಂದು ಮತ್ತೆ ನಾಲ್ಕು ಎಲಿಮೆಂಟ್‌ಗಳನ್ನು ಕೂರಿಸಿ 19ನೇ ಗೇಟ್‌ನಿಂದ ನೀರು ಹೊರಗೆ ಹೋಗುವುದನ್ನು ಸಂಪೂರ್ಣ ನಿಲ್ಲಿಸಲಾಗಿತ್ತು.

ಅಲ್ಲಿಂದೀಚೆಗೆ ಎಲ್ಲಾ ಕ್ರಸ್ಟ್‌ಗೇಟ್‌ಗಳನ್ನು ಮುಚ್ಚಿ ಮತ್ತೆ ಜಲಾಶಯದಲ್ಲಿ ನೀರು ಸಂಗ್ರಹ ಆರಂಭಿಸಲಾಗಿತ್ತು. ಕಳೆದ 14 ದಿನಗಳಲ್ಲಿ ಅಣೆಕಟ್ಟೆಯ ನೀರಿನ ಮಟ್ಟ 9 ಅಡಿಯ‌ಷ್ಟು ಏರಿಕೆಯಾಗಿದ್ದು, ಜಲಾಶಯದ ನೀರಿನ ಸಂಗ್ರಹ 23 ಟಿಎಂಸಿ ಅಡಿಯಷ್ಟು ಹೆಚ್ಚಳವಾಗಿದೆ.

ರೈತರಿಗೆ ಇದೀಗ ಒಂದು ಬೆಳೆಗೆ ನೀರು ಸಿಗುವುದಲ್ಲದೆ, ಮಳೆ, ಒಳಹರಿವು ಮುಂದುವರಿದರೆ ಹಾಗೂ ಹಿಂಗಾರು ಮಳೆ ಸುರಿದರೆ ಎರಡನೇ ಬೆಳೆಗೂ ನೀರು ಸಿಗಲಿದೆ. ಹೀಗಾಗಿ ಗೇಟ್‌ ಕೊಚ್ಚಿಹೋದ ದುರಂತ ಇದೀಗ ಮರೆತೇ  ಹೋಗುವ  ರೀತಿಯಲ್ಲಿ ಪರಿಸ್ಥಿತಿ ಸುಧಾರಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.